ಕಾವ್ಯ ಸಂಗಾತಿ
ನನ್ನಜ್ಜ ಆಲದ ಮರ
ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ
ಅಂದು ಅಜ್ಜನ ಜನ್ಮದಿನ
ಅವನಂಗಳದಿ ಮೈ ಮರೆತಿದ್ದೆ.
ನಾಜೂಕಾಗಿ ಬೀಸಿದ ಗಾಳಿಯೊಡನೆ ಹಾರಿದ ತರಗಲೆಗಳಿಗೆ
ಅದ್ಯಾತರದ ಲೋಕನಾದ….
ನೆರೆತ ಭಾವಗಳು
ಹಕ್ಕಿ ಗಿಲಕಿ ಹಿಡಿದನಾದಕ್ಕೆ
ಅಂತರಾಳದಿ ಮೀಟಿದ್ದು ನೀನಾದ….
ಮುಗಿಲ ಮಾರಿಯ ರತಿಯ ರಾಗಕ್ಕೆ
ಅದ್ಯಾವ ಹೊಂಬಣ್ಣ….
ಅಜ್ಜನ ಭಾವದೊಂದಿಗೆ ಬೆಸೆದ ಕೆರೆ,
ಏರಿಯ ಮಣ್ಣಲ್ಲಿ ಅವನದೆ ಹೃದಯಗಣ್ಣು…
ಅಜ್ಜ ಹೂತ ಬೀಜಕ್ಕಿಗ
ಹರೆಯದ ಸಂಭ್ರಮ…
ಒಬ್ಬಂಟಿಯಾಗಿಯೇ
ಅವನಂಗಳದ ಆಲದೊಂದಿಗೆ
ಮೈಮರೆತೆ…
ಅದೇನೋ ನಂಟು ನನ್ನೂರಿನ ರಸಋಷಿ ಭುವನದ ಭಾಗ್ಯ…
ಅನುಮಾನವಿಲ್ಲ ಬಿಗುಮಾನ ಸ್ವಾಭಿಮಾನ ಭುವನಕುಕ್ಷಿಗೆ ಕೈ ಮುಗಿದೆ…..
ಅಂಬಿಕೆಯ ಅಂಕೆಗೂ ನಿಲುಕದ ಸಂಖ್ಯಾಋಷಿ.
ವಿಜ್ಞಾನದ ರೆಂಬೆ ಕೊಂಬೆಗಳಿಗೆ ಗೂಡು ಕಟ್ಟಿದವ.
ಗುಟುಕು ನೀಡಿ ತಾಯಾದವ
ಶ್ರಾವಣದ ಸಮೀರ…
ಬಿಂದು ಕಳಾತೀತ ಅವನ
ಲೀಲೆಯ ನಾದ
ಅಂತರಂಗದ ಮೃದಂಗದಲ್ಲಿ ಸಪ್ತರಾಗದ ಝೆಂಕಾರ…
ಆಳದಲ್ಲಿ ನೆಲಕಚ್ಚಿನಿಂತ ಆ ಮರ.
ಪಾತಾಳದ ಬೇರಿಗೆ ಸವಾಲು.
ಆಕಾಶದೇತ್ತರದ ಅಜ್ಜನ ರೂಹಿನ ಬಿಂಬಕ್ಕೆ ಜ್ಞಾನಸೂರ್ಯನ ಚೆಂಬೆಳಕು….
ಅಜ್ಜ ನನ್ನೊಂದಿಗೆ ಬೆರೆತ, ಅರಿತ.
ಅದೇ ಅಲ್ಲವೇ ಅಜ್ಜನ ಆಲದ ಮರ.
ನನ್ನೂರಿನ ಮಣ್ಣಿಗೆ ಅವಧೂತ ಶಕ್ತಿ ತಂದದ್ದು….
ಅಜ್ಜನ ಅಂಗಳದ ಆಲಕ್ಕೀಗ ಶತಮಾನ..ಅದಕೂ ಅದರದೇ ಆದ ಕಥೆ ವ್ಯಥೆ…
ಹೂತಿಟ್ಟ ಹುಣಸೆ ಬೀಜ,
ಹೀಚಾಗಿ, ಕಾಯಾಗಿ, ಹಣ್ಣಾಗಿ, ಹೆಣ್ಣಾದ ಮಲ್ಲಿಗೆ.
ಘಮ ಘಮಾಡಿಸಿದ ಕಾವ್ಯ ಕನ್ನಿಕೆ…
ನಾನು, ನೀನು ,ಆನು ,ತಾನು,
ತಂತಿಮೀಟಿದ ದತ್ತ.
ಗುರುದೇವನ ಜೋಗುಳದ ಕೂಸು..
ಅಜ್ಜ ಮೀಟಿದ ನಾಕೂ ತಂತಿಗಳು,
ಕಣ್ಣಾಲಿಯ ಸೈರಿಸಲಾದರೆ
ಹುಣ್ಣುಮೆಯ ಚಂದಿರನ ಹೆಣಕ್ಕೆ
ಹೆಗಲಾದ ನೋವು….
ಕಣ್ಣಲ್ಲಿ ಕಾಲೂರಿನಿಂತ ಮುಗಿಲ ಹನಿ
ಅಜ್ಜನ ಆಲಕ್ಕೆ ದೋ ಗಟ್ಟಿ ಸುರಿದ ಕಲ್ಪನಾವಿಲಾಸ….
ಕಲ್ಪಹಾದಿಗುಂಟ ಅರಳಿನಿಂತ
ಗುಲ್ ಮೋಹರಗಳು ಅಜ್ಜನ ಬಳುವಳಿ….
ಆಲದ ಆಶ್ರಯಕ್ಕೆ ಕುಡಿಯೊಡೆದ ಮಾವು..
ಸುಳೆದೆಗೆದ ಬಾಳೆ,
ಹಲವು ಜನ್ಮದ ಸಾಲ ತೀರಿಸಲೆಂದೆ, ಅವನಂಗಳದಿ ಮೀಟುತ್ತಿವೆ ನಾಕುತಂತಿ ಅನೂಚಾನ..
ಬೃಂಗದ ಬೆನ್ನೇರಿದ ಓಂಕಾರನಾದ..
ಶತಮಾನದ ಹಸಿರಿಗೂ, ನನ್ನೂಸಿರಿಗೂ ,
ನೆಲದ ಹೆಸರಿಗೂ ಸವಾಲು. ಔದುಂಬರದ ದೇವದತ್ತ
ನನ್ನಜ್ಜ ಆಲದಮರ.
ಬೇಂದ್ರೆ ಅಜ್ಜನೆಂಬ ಆಲದ ಮರದ ಬೇರು ಬಿಳಲು ಆಳ ಅಗಲ ರೆಂಬೆ ಕೊಂಬೆಗಳನ್ನು ಬಿಡದೆ ಹಿಡಿದಿಟ್ಟಿದೆ ಕವಿತೆ… ಧನ್ಯವಾದಗಳು
Super
ಕವಿತೆ ಚೆನ್ನಾಗಿದೆ. ಅಭಿನಂದನೆಗಳು