ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಆತ್ಮಸಾಂಗತ್ಯದ ನಿರ್ಭಯತೆ

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

Mystic Akka Mahadevi

ಅಕ್ಕನ ಭಾವಬಸಿರಿನ
ಕೂಸಾದ ಚನ್ನಮಲ್ಲ,
ದಿಗಂಬರೆಯಾದರೂ
ಅಂಬರವನೇ ಹೊದ್ದ ಮಲ್ಲಿ.
ಸಖನ ಅರಸುವ ಪರಿ

ಕತ್ತಲೆಯಲ್ಲೂ ಕಾಂತಿ, ಬೆತ್ತಲೆ
ಜಗದ ಕಣ್ಣು ತೆರೆಸುವ ಪರಿ
ಹಣ್ಣಾದ ಅರಿವು.
ಹೆಣ್ಣಾದ ರೂಪಕೆ ಬೆಳಂದಿಗಳ
ಬೆಳಕು,
ಕಾನನದ ತುಂಬೆಲ್ಲಾ
ಪಣತಿಯ ಸಾಲುದೀಪ.
ಕಲ್ಯಾಣದ ಬೀದಿಬೀದಿಗಳಲಿ
ಅಕ್ಕನೆಂಬ ಮಹತಿ,
ಮಹಾದೇವಿ ಉಸಿರಿದ
ಮಾತೆಲ್ಲಾ ವಚನ.
ಸಾವಿರದ ರೂಹಿರದ
ರೂಪಿರದ ದೈವಕ್ಕೆ, ಅಳವಟ್ಟ
ಪರಿಯೊಂದೇ ಪರದೈವವೇ
ಪತಿ.
ಶಯನಕ್ಕೆ ಹಾಳು
ದೇಗುಲಗಳುಂಟೆಂಬುದು,
ಬಯಲಿನಲ್ಲಿ ಬದುಕು
ಕಟ್ಟಿಕೊಡುವ ಅಕ್ಕ,
ನಮ್ಮೊಳಗೆ ಚೇತನವಾಗಿಹ
ನಿತ್ಯ ಚೈತನ್ಯ .

ಹಂಗಿನರಮನೆ ತೊರೆದು
ಹೊರಟವಳು. ದಿಗಂಬರೆ,
ದಿವ್ಯಾಂಬರೆ, ಕೇಶಾಂಬರೆ.
ತನ್ನೊಳಗೆ ಕಿವಿಗೊಟ್ಟು
ಸಾಗಿದವಳು,ಯಾರೂ
ನಡೆಯದ ಹಾದಿಗೆ.
ಆತ್ಮಸಂಗಾತಿಯನ್ನರಸುತ್ತ ಸವೆಸಿದ್ದು ,
ಹೆಜ್ಜೆಮೂಡಿರದ ಹಾದಿ.
ಅರಮನೆಯ, ಲೋಕದ ಹಂಗುತೊರೆದು
ಚಲಿಸಿದ್ದು ಅರುವಿನ
ಮಹಾಮನೆಯತ್ತ.
ಒಂಟಿ ನಿರ್ಭಿತೆ ಯಾರೂ
ಇಲ್ಲದವಳೆಂಬುದಕೆ
ಕಿವಿಗೊಡದೆ ದಾಟಿದ್ದು,
ಜಗದ ಕಟ್ಟು ಪಾಡುಗಳ ಚೌಕಟ್ಟು .

ಪತಿತ್ವ ಪ್ರಭುತ್ವವೆರೆಡರ
ಸೂತಕದ ಹಂಗು ಹರಿದು,
ಕಾಮನ ಚಿನ್ಹೆಗಳಿಗೊಂದು
ಅತೀತವಾದ ಅರ್ಥ ನೀಡಿ,
ಒಳಗೆ ಸುಳಿವಾತ್ಮದ
ಸಾಕ್ಷಾತ್ಕಾರಕ್ಕಾಗಿ.

ತರಗಲೆಯ ಮೇಲಿದು
ತಾನಿಹೆನು ಎನ್ನುವ, ಅಸದೃಶ
ಮನೋಬಲದ ಯೋಗಾಂಗಿ.
ಸ್ತುತಿ ನಿಂದೆಗಳೆಣಿಸದೆ ಸಮಾ
ಧಾನಿಯಾಗಿರಬೇಕೆಂದು,
ಸಜ್ಜನಳಾಗಿ ಮಜ್ಜನಗೈದ
ಲಿಂಗಾಂಗಿ.
ಪಯಣದ ಗಮ್ಯತೆಗೆ
ಹೆಣ್ತನದ ಶೃಂಕಲೆ ಏಕೆ ?
ವೇದನೆ ರೋಧನೆಗಳಿಲ್ಲದ
ಬೋಧನೆ ಸಾಧನೆಯ
ರೂಹಾದ ಅಕ್ಕ.

ಪರದೈವದ ಪತಿಯನ್ನರಸುತ್ತ
ಪ್ರೇಮದ ಮೊಗ್ಗು
ಅರಳಿನಿಂತ ಪರಿಗೆ, ಲಿಂಗ
ಭೇದದಿ ನಿರ್ಮಾಣಗೊಂಡ .
ಗೋಡೆಯ ಸವಳಿ ಮಣ್ಣು
ಉದುರುತಿತ್ತು.
ಆತ್ಮ ಸಾಂಗತ್ಯದ
ನಿರ್ಭಯತೆಗೆ ಬಯಲಲ್ಲೆ,
ಅಕ್ಕ ಚನ್ನಮಲ್ಲರ ಜ್ಞಾನದ
ಭ್ರೂಣ ಅಂಕುರಿಸಿತ್ತು
ಲೋಕದ ಅರಿವು
ಪಕ್ವಗೊಂಡಿತ್ತು.


About The Author

2 thoughts on “ಆತ್ಮಸಾಂಗತ್ಯದ ನಿರ್ಭಯತೆ”

  1. ಮಮತಾ ಶಂಕರ್

    ಅಕ್ಕನ ಆತ್ಮ ಸಾಂಗತ್ಯದ ನಿರ್ಭಯತೆಗೂ ಅದನ್ನು ಕಾವ್ಯವಾಗಿ ಅನಾವರಣಗೊಳಿಸಿದ ನಿಮ್ಮ ಕವಿತೆಗೂ ನಮ್ಮದೊಂದು ಮೌನ ಶರಣು….. ಮೇಡಂ

Leave a Reply

You cannot copy content of this page

Scroll to Top