ಹೊಸ ವರ್ಷ ಹೊಸ ಹರ್ಷ
ಜಯಲಕ್ಷ್ಮಿ ಕೆ.
ಹೊಸ ವರ್ಷ -ತರಲಿ ಹರ್ಷ .
“ಆದದ್ದು ಆಗಿ ಹೋಯ್ತು, ಮಣ್ಣಾಗಿ ಹೋದ ನನ್ನವರು ತಿರುಗಿ ಬರಲಾರರು. ಇರುವವನು ಇರುವಷ್ಟು ದಿನ ಬದುಕಬೇಕಲ್ಲ? ನನ್ನ ಗಾಡಿ, ನನ್ನ ಎತ್ತುಗಳೂ ಭೂಕಂಪದ ಅಂತರoಗ ಸೇರಿದ್ದರೆ ನನಗೆ ಕಷ್ಟವಾಗುತ್ತಿತ್ತು. ಪುಣ್ಯಕ್ಕೆ ಸ್ವಲ್ಪ ಹೊಲವೂ ಉಳಿದಿದೆ. ಬದುಕಬೇಕಾದ ನನ್ನ ಬದುಕಿಗೆ ಇಷ್ಟು ಸಾಕಲ್ಲ ….ಉಳಲು, ಬಿತ್ತಲು, ಮನೆಕಟ್ಟಲು …..”
1993 ರಲ್ಲಿ ಮಹಾರಾಷ್ಟ್ರದಲ್ಲಿ ಸಂಭವಿಸಿದ್ದ ಭಾರೀ ಭೂಕಂಪದಲ್ಲಿ ತನ್ನವರನ್ನೆಲ್ಲ ಕಳೆದುಕೊoಡಿದ್ದ ವೃದ್ದನೊಬ್ಬ ಪತ್ರಕರ್ತನ ಪ್ರಶ್ನೇಯೊoದಕ್ಕೆ ನೀಡಿದ ಉತ್ತರವಿದು. ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿ ತತ್ತರಿಸಿ ಹೋಗಿದ್ದ ಲಾತೂರ್-ಉಸ್ಮಾನಾಬಾದ್ಗಳಲ್ಲಿ ಅಳಿದುಳಿದ ಜನರ ಸ್ಥಿತಿ -ಗತಿ ತಿಳಿದುಕೊಳ್ಳಲು ಹೋದ ಪತ್ರಕರ್ತನಿಗೆ ಎತ್ತಿನಗಾಡಿಯಲ್ಲಿ ಹೊಲದತ್ತ ಹೊರಟ ವೃದ್ದನೋರ್ವ ಕಣ್ಣಿಗೆ ಬಿದ್ದ. ತನ್ನ ಪ್ರಶ್ನೆಗಳಿಗೆ ಹತಾಶೆಯ ಶಿಖರದಿoದ ದುಃಖದ ಬುಗ್ಗೆಯನ್ನೇ ಚಿಮ್ಮಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಆತನಿಗೆ ಅಚ್ಚರಿಯಾಗಿತ್ತು! ಭೂತಕಾಲದ ನಶ್ವರತೆ -ಭವಿಷ್ಯದ ಬಗೆಗಿನ ವ್ಯರ್ಥ ಕಾಳಜಿ ಇವೆರಡನ್ನೂ ತೊರೆದು ವರ್ತಮಾನದಲ್ಲಿ ಬದುಕು ಸಾಗಿಸಬೇಕೆoಬ ಸತ್ವವನ್ನರುಹಿದ ಆ ವೃದ್ದ ಅವನಿಗೆ ತತ್ವಜ್ಞಾನಿಯoತೆ ಕಂಡಿದ್ದ.
” ನೆಲ ಕಚ್ಚಿ ನಿಲ್ಲು “ಎನ್ನುವ ಅಡಿಗರ ಸಾಲಿನ ಸಾರ ಇದುವೇ ಇರಬೇಕು. ಅದುವೇ ಜೀವನೋತ್ಸಾಹ. ಜೀವನ ಪ್ರೀತಿ ಅನ್ನೋದು ಒಂದು ಅಪರಾಜಿತ ಶಕ್ತಿ. ತನಗಾಗಿ ತಾನು ಬದುಕಬೇಕು ಎನ್ನುವ ವ್ಯಕ್ತಿಗೆ ಇರಲೇಬೇಕಾದ ಅಮೂಲ್ಯ ಆಸ್ತಿಯದು. ಈ ಉತ್ಸಾಹ-ಉಲ್ಲಾಸ ಅನ್ನೋದು ಎಲ್ಲಿoದಲೋ , ಯಾರಿಂದಲೋ ಪಡೆಯತಕ್ಕoತಹ ಅoಶವಲ್ಲ .ನಮ್ಮೊಳಗೇ ಸುಪ್ತವಾಗಿರುವ ಚೈತನ್ಯ. ಕೆಲವರು ಸದಾ ಕಾಲ ನಗುತ್ತಲೇ ಇರುತ್ತಾರೆ. ಹಾಗೆoದು ಅವರಿಗೆ ಸಮಸ್ಯೆಗಳೇ ಇಲ್ಲವೆoದಲ್ಲ ; ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಆಂತರಿಕ ಶಕ್ತಿ ಅವರಲ್ಲಿದೆ ಎಂದರ್ಥ. ಇನ್ನೈದು ನಿಮಿಷಗಳಲ್ಲಿ ಆಕಾಶವೇ ಕಳಚಿ ಬೀಳುತ್ತೆ ಎಂದರೆ ಆ ಐದು ನಿಮಿಷಗಳಲ್ಲಿ ಒಂದು ಕಪ್ ಕಾಫಿ ಹೀರಬಾರದೇಕೆ ..? ಎನ್ನುವ ಮನೋಭಾವದವರಿವರು.
ಮಸಣದಲ್ಲೂ ಸಂತಸದ ಅಲೆಯನ್ನು ಹರಡಿದ “ನಗುವ ಬುದ್ಧ” ಅಥವಾ ಪು -ಟ್ಸೆ ಯ ವ್ಯಕ್ತಿತ್ವವನ್ನು ನಾವಿಲ್ಲಿ ನೆನೆಯಲೇಬೇಕು. ಝೆನ್ ಪದ್ಧತಿಯ ಶವ ಸಂಸ್ಕಾರಕ್ಕೆ ವಿರುದ್ಧವಾಗಿ “ನನ್ನ ಮೃತದೇಹವನ್ನು ಸುಡಬೇಕು ” ಎಂದು ಹೇಳಿದ್ದ ಈ “ನಗುವ ಬುದ್ಧ “ನ ಮಾತಿನಲ್ಲಿ ಒಂದು ವಿನೋದವಿತ್ತು. ಅದೇನೆoದರೆ, ಅವನು ತನ್ನ ಬಟ್ಟೆಯೊಳಗೆ ಪಟಾಕಿಗಳನ್ನು ತುoಬಿಕೊoಡಿದ್ದ. ಅವನ ದೇಹಕ್ಕೆ ಅಗ್ನಿ ಸ್ಪರ್ಶವಾಗುತ್ತಿದ್ದoತೆ ಸಿಡಿ ಮದ್ದು ಸಿಡಿಯಲಾರಂಭಿಸಿ ಸ್ಮಶಾನದಲ್ಲೂ ಹಬ್ಬದ ವಾತಾವಾರಣ ಸೃಷ್ಟಿಯಾಗಿತ್ತು.
ಚಿಂದಿ ಬಟ್ಟೆಯ ಚೀಲ ಎನ್ನುವ ಅರ್ಥವನ್ನು ತನ್ನ ಹೆಸರಿನಲ್ಲಿ ಹುದುಗಿಸಿಕೊoಡಿದ್ದ ಪು -ಟ್ಸೆ ತಾನು ಹೋಗುವೆಡೆಗಳಿಗೆಲ್ಲ ಚೀಲ ತುoಬಾ ಸಿಹಿ ತಿoಡಿ ಒಯ್ದು, ಅವನ್ನೆಲ್ಲ ಮಕ್ಕಳಿಗೆ ಹಂಚಿ, ಚೀಲವನ್ನು ಆಗಸದೆತ್ತರಕ್ಕೆ ಎಸೆಯುತ್ತಾ ಜೋರಾಗಿ ನಗುತ್ತಿದ್ದ. ಅವನ ನಗುವಿನಲ್ಲಿ ಇತರರು ಪಾಲ್ಗೊಳ್ಳುವಷ್ಟರಲ್ಲಿ ತನ್ನ ಡೊಳ್ಳು ಹೊಟ್ಟೆಯ ಮೇಲೊಮ್ಮೆ ಕೈಯಾಡಿಸುತ್ತಾ ..ಸದ್ದಿಲ್ಲದೆ ನಗುತ್ತಾ ತನ್ನ ಚೀಲದೊoದಿಗೆ ಮತ್ತೊoದೂರಿಗೆ ಸಾಗುತ್ತಿದ್ದ. ಸಮಸ್ಯೆ ಎಂಬ ಚೀಲವನ್ನು ದೂರಕ್ಕೆಸೆದು ಸದಾ ನಗುತ್ತಿರಬೇಕು ಎನ್ನುವ ಆಶಯ ಅವನದಾಗಿತ್ತು.ತನ್ನ ವಿಚಿತ್ರ ರೂಪ -ವ್ಯಕ್ರಿತ್ವ ಬೇರೆಯವರಲ್ಲಿ ಯಾವ ಭಾವನೆ ಮೂಡಿಸೀತು ಎನ್ನುವ ಕಲ್ಪನೆ ಕೂಡಾ ಆತನಿಗಿರಲಿಲ್ಲ ..ಅದಕ್ಕೇ ಅವ ನಗುವ ಬುದ್ದನಾದ !
ಸೋಲಿಗೆ ಹತಾಶನಾಗದೆ, ಬದುಕಿನ ಏರಿಳಿತಗಳನ್ನು ಒಪ್ಪಿಕೊoಡು ನಡೆವ ವ್ಯಕ್ತಿ ಅನ್ಯರ ಹೊಗಳಿಕೆ -ತೆಗಳಿಕೆಗಳಲ್ಲಿ ತಾನು ಕಳೆದುಹೋಗುವುದಿಲ್ಲ.ಕಷ್ಟಗಳು ಬಂದರೂ ನಿವಾರಿಸಿಕೊoಡು ಮೈ ಕೊಡವಿ ನಿಲ್ಲುತ್ತಾನೆ.ಕೆಲವರು ತಮಗೆ ಬಂದ ಚಿಕ್ಕ -ಪುಟ್ಟ ಸಮಸ್ಯೆಗಳನ್ನೇ ಬೆಟ್ಟವಾಗಿಸಿಕೊoಡು ಅವರಿವರಿoದ ಪರಿಹಾರ ನಿರೀಕ್ಶಿಸುತ್ತಾರೆ. ತನ್ನೊಳಗೆ ತಾನು ಗಟ್ಟಿ ಇಲ್ಲದವನಿಗೆ ಯಾರ ಸಲಹೆಗಳೂ ಪರಿಹಾರವೆನಿಸದು.
ಕೊಚ್ಚಿದಷ್ಟು ಹೆಚ್ಚಿ ಬರುವ ಪ್ರಕೃತಿಯoತೆ, ತುಳಿದ ಧೂಳು ಅವಮಾನವನ್ನು ಧಿಕ್ಕರಿಸಿ ನಮ್ಮ ಶಿರವೇರುವoತೆ, ಗೋಡೆಗೆಸೆದ ಚೆoಡು ಪುಟಿದು ಮತ್ತೆ ನಮ್ಮತ್ತ ಬರುವoತೆ ನಮ್ಮೆಲ್ಲರಲ್ಲೂ ಜೀವನೋತ್ಸಾಹ ಪುಟಿಯುತ್ತಿರಲಿ…ಹೊಸ ವರ್ಷ ಹರ್ಷದೊoದಿಗೆ ಆರoಭವಾಗಲಿ .
*******