ಗಝಲ್

ಕಾವ್ಯ ಸಂಗಾತಿ

ಗಝಲ್

ವಿಜಯಪ್ರಕಾಶ್ ಕೆ

ಮನಸಿನ ಪುಟಗಳಲ್ಲಿ ನೆನಪುಗಳೇ ವೈರಿಯು ನೋವನ್ನು ದಹಿಸಲಿ ಹೇಗೆ
ಈರ್ಷೆಯ ಲೋಕದಿ ಜರಿಕೆಯೇ ತೊಡರು ಸೋಲನ್ನು ಹಿಮ್ಮೆಟ್ಟಿಸಲಿ ಹೇಗೆ

ಬತ್ತಿ ಹೋಗಿದೆ ಭರವಸೆ ಕಲ್ಪನೆಯಲ್ಲೂ ಕನಸು ಕೈಗೂಡಲೆನ್ನುವ ಕೋರಿಕೆ
ಮನದ ಮಡುವಿನಲ್ಲಿ ಸಿಲುಕಿದೆ ಬುದ್ದಿ ಭಾವನೆಗಳನ್ನು ಚಿಗುರಿಸಲಿ ಹೇಗೆ

ಸತ್ತ ಭಾವಗಳೊಂದಿಗೆ ಬೇಸತ್ತು ಸಾಗುತ್ತಿದೆ ಬದುಕು ಸಾಕ್ಷಿಗಿದೆ ಉಸಿರಾಟ
ನೋವಿನ ತಳದಲ್ಲಿ ನಗುವೆಂಬ ನಿಧಿ ಹುಡುಕಾಟವನ್ನು ಶುರುವಿಡಲಿ ಹೇಗೆ

ಮಿಂಚು ಹುಳುಗಳ ಸಂಚು ಹೊಳೆವ ಬೆಳಕಿನ ಹಿಂದೆ ಅಲೆಯಿತು ಮನಸ್ಸು
ಪಾಳು ಬಿದ್ದಿದೆ ಹೃದಯದರಮನೆ ಗತ ವೈಭವವನ್ನು ಮರುಸೃಷ್ಟಿಸಲಿ ಹೇಗೆ

ಮನೋಲೋಕದ ದಿಗಂತವನ್ನು ದಾಟುತ ಸಾಗುತ್ತಿದೆ  ‘ವಿಜಯ’ದ ಯಾತ್ರೆ
ಪುಟಿಯಿತು ಮನ ನೋಡುತ ಒಲಿದ ಗೆಲುವನ್ನು ಸಂಭ್ರಮಿಸದಿರಲಿ ಹೇಗೆ


Leave a Reply

Back To Top