‘ಆನೆ ಸಾಕಲು ಹೊರಟವಳು’..!

ಪುಸ್ತಕ ಸಂಗಾತಿ

‘ಆನೆ ಸಾಕಲು ಹೊರಟವಳು’..!

ಸಹನಾ ಕಾಂತಬೈಲು

ಇಂದಿನ ಕೃಷಿಕರ ಪರಿಸ್ಥಿತಿಯನ್ನು ಕಟ್ಟಿಕೊಡುವ ಸಹನಾ ಕಾಂತಬೈಲುರ ಪ್ರಥಮ ಕೃತಿಯೇ ಆನೆ ಸಾಕಲು ಹೊರಟವಳು‘..!

ನಾನು ನಿನ್ನೆಯಷ್ಟೇ ಸಹನಾ ಕಾಂತಬೈಲು ಅವರ ಪರಿಚಯವನ್ನು ಮಾಡಿಕೊಟ್ಟಿದ್ದೆನು. ಆಗ ಅನೇಕಾನೇಕ ಗೆಳೆಯ ಮತ್ತು ಗೆಳತಿಯರು ಅಲ್ಲದೇ ಸಾಕಷ್ಟು ಹಿರಿಯ ಲೇಖಕರು ಈ ಪರಿಚಯದ ಜೊತೆಗೇ ಕೃತಿಯ ವಿಮರ್ಶೆಯೂ ಬರಲಿ ಎಂದು ಹೇಳಿದರು. ಈ ಸಹನಾ ಕಾಂತಬೈಲು ಅವರು ಸಾಕಷ್ಟು ಓದುಗರಿಗೆ ಹೊಸ ಪರಿಚಯವಾದ್ದರಿಂದ ಅವರ ಮೊದಲ ಕೃತಿ ‘ಆನೆ ಸಾಕಲು ಸಾಕಲು ಹೊರಟವಳು’ ವಿಮರ್ಶೆಯ ಜೊತೆಯಲ್ಲಿಯೇ ಮತ್ತೊಮ್ಮೆ ಸಹನಾ ಕಾಂತಬೈಲು ಅವರ ಪರಿಚಯವನ್ನು ಕೊಡುತ್ತಿದ್ದೇನೆ.

‘ಆನೆ ಸಾಕಲು ಹೊರಟವಳು’ ಸಹನಾ ಕಾಂತಬೈಲು ಅವರ ಪರಿಚಯವೂ..!

ಲೇಖಕಿ ಸಹನಾ ಕಾಂತಬೈಲು ಅವರು ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದವರು.ಕೇವಲ ಪಿ.ಯು.ಸಿ ವರೆಗೆ ಓದಿದ ಸಹನಾ ಕಾಂತಬೈಲು ಅವರು ತಮ್ಮ 17 ನೇ ವಯಸ್ಸಿಗೇ ಮದುವೆಯಾದವರು.20 ನೇ ಹರೆಯದಲ್ಲೇ ಮಂಗಳ, ಸುಧಾ, ತುಷಾರ, ಮಯೂರ, ಕರ್ಮವೀರ ಪತ್ರಿಕೆಗಳಲ್ಲಿ ಅವರ ಹಲವಾರು ಹನಿಗವಿತೆಗಳು ಪ್ರಕಟವಾಗಿವೆ.

ಚುಟುಕುಗಳ ರಚನೆಗಾಗಿ ಕೇರಳದಲ್ಲಿ ನಡೆದ ಅಂತರಾಜ್ಯ ಮಟ್ಟದ ಪ್ರತಿಷ್ಟಿತ ಚುಟುಕುಶ್ರೀ ಪ್ರಶಸ್ತಿ ದೊರಕಿತು. ಅಲ್ಲದೇ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಹಿಂದೆಯೇ ಶಿವಮೊಗ್ಗೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದವರು.ಕೃಷಿಯನ್ನೇ ನೆಚ್ಚಿಕೊಂಡ ಮನೆ ಅವರದ್ದಾಗಿದ್ದರಿಂದ ಸಹಜವಾಗಿಯೇ ಅದರ ಬಗ್ಗೆ ಒಲವಿತ್ತು. ಮುಂದೆ ಕೃಷಿ ಕುರಿತ ಬರಹಗಳನ್ನು ಬರೆಯಲು ಆರಂಭಿಸಿದ ಅವರು ಸುಮಾರು 60ಕ್ಕೂ ಹೆಚ್ಚು ಕೃಷಿಕ ಮಹಿಳೆಯರ ಯಶೋಗಾಥೆಯನ್ನು ಪ್ರಜಾವಾಣಿಯಲ್ಲಿ ಬರೆದವರು. ಇನ್ನೂ ಬರೆಯತ್ತಲೇ ಇರುವ ಇವರು ನಾಡು ಕಂಡತಹ ಕೆಲವೇ ಕೆಲವು ಕೃಷಿ ಬರಹಗಾರ್ತಿಯಲ್ಲಿ ಒಬ್ಬರು.

ಪುಟ್ಟ ಹಳ್ಳಿಯಲ್ಲಿರುವ ಸಹನಾ ಕಾಂತಬೈಲು ಅವರು,ಕರ್ನಾಟಕ ರಾಜ್ಯದಾದ್ಯಂತ ಹಲವಾರು ನೈಜ ಸಾಹಿತ್ಯ ಅಭಿಮಾನಿ ಬಳಗ ಹೊಂದಿದ್ದವರು. ಕವಿತೆಯ ಮೂಲಕ ಬರಹವನ್ನಾರಂಭಿಸಿದ ಸಹನಾ ಕಾಂತಬೈಲು ಅವರು ತಮ್ಮ, ಸ್ವಾನುಭವ, ಪ್ರಾಮಾಣಿಕ, ದಿಟ್ಟ ಬರೆಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರಾದವರು. ಇದೀಗ ಅವರ ‘ಆನೆ ಸಾಕಲು ಹೊರಟವಳು’ ಕೃತಿಗೆ ‘ಅಜೂರ ಪ್ರತಿಷ್ಠಾನ’ದ ರಾಜ್ಯ ಪ್ರಶಸ್ತಿ ದೊರಕಿದೆ. ಇವರ ಮತ್ತೊಂದು ಕೃತಿ ‘ಇದು ಬರೀ ಮಣ್ಣಲ್ಲ’ ಎಂಬ ಲಲಿತ ಪ್ರಬಂಧಗಳ ಸಂಕಲನ, ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗುತ್ತಿದೆ.

ಇಂತಹ ಸಹನಾ ಕಾಂತಬೈಲು ಅವರ ಸಾಹಿತ್ಯ ಕೃಷಿಯು ನಡೆದೇ ಇದೆ. ಇವರ ಸಾಹಿತ್ಯ ಕೃಷಿ ಇನ್ನೂ ಹೆಚ್ಚಾಗಿ ಮುಂದುವರಿಯಲಿ..!ಹೀಗೆನ್ನುತ್ತಾ ಆ ‘ಆನೆ ಸಾಕಲು ಹೊರಟವಳು’ ಕೃತಿಯ ವಿಮರ್ಶೆಯನ್ನು ವೊಮ್ಮೆ ನೋಡೋಣ.

ಇಂದಿನ ಕೃಷಿಯ ನೈಜ ಚಿತ್ರಣವೇ ‘ಆನೆ ಸಾಕಲು ಹೊರಟವಳು’ —

ಸಹನಾ ಕಾಂತಬೈಲು ಅವರು ‘ಆನೆ ಸಾಕಲು ಹೊರಟಿದ್ದಾರೆ’. ಅಂದರೆ ಸಹನಾ ಕಾಂತಬೈಲು ಅವರ ಪ್ರಥಮ ಕೃತಿಯಾಗಿದೆ ‘ಆನೆ ಸಾಕಲು ಹೊರಟವಳು’ ಎಂಬ ಕೃತಿಯು. ಈ ಶೀರ್ಷಿಕೆಯನ್ನು ಹೊತ್ತ ಕೃತಿಯ ಲೇಖಕಿ ಸಹನಾ ಕಾಂತಬೈಲು ಅವರು ಕೊಡಗಿನ ಕೃಷಿಕ ಮಹಿಳೆಯಾಗಿದ್ದಾರೆ. ಇದು ಸಹನಾ ಕಾಂತಬೈಲು ಅವರ ಚೊಚ್ಚಲ ಕೃತಿಯೂ ಹೌದೆಂಬುದು ನಮಗೆ ತೀರಾ ಹೆಮ್ಮೆಯ ವಿಷಯವಾಗಿದೆ..!

ಈ ಕೃತಿಯಲ್ಲಿ ಲೇಖಕಿ ಹಳ್ಳಿಯ ಕೃಷಿ, ಹೈನುಗಾರಿಕೆ, ಜೇನು ಸಾಕಾಣಿಕೆ, ಮನೆಯಲ್ಲೇ ವಿದ್ಯುತ್ ಉತ್ಪಾದನೆ ಮುಂತಾದ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತನ್ನ ಸ್ವಂತ ಅನುಭವವನ್ನು ಸರಳ ಪದಗಳೊಂದಿಗೆ ಸರಾಗವಾಗಿ ಪೋಣಿಸುತ್ತಾ ಹೋಗುತ್ತಾರೆ ಸಹನಾ ಕಾಂತಬೈಲು ಅವರು.

ಕೃಷಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಓದುಗರಿಗೆ ತಿಳಿಸಿಕೊಡುತ್ತಾರೆ. ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಹಳ್ಳಿಯ ಜನರ ಪಾಡು, ನೈಸರ್ಗಿಕ ವೈಪರೀತ್ಯಗಳಿಂದ ಬೆಳೆಗೆ ಆಗುವ ಹಾನಿ, ಇದರಿಂದಾಗಿ ‘ಕೈಗೆ ಬಂದ ತುತ್ತು ಬಾಯಿಗೆ ಬರದೆ’ ಹೋಗುತ್ತಿರುವ ರೈತರ ಇಂದಿನ ಪರಿಸ್ಥಿತಿ, ಎಲ್ಲವನ್ನೂ ವಿವರಿಸುತ್ತಾರೆ.

ಬೆಳೆದ ಬೆಳೆಗೆ ಸರಿಯಾದ ದರ ಸಿಗದೇ ಕೃಷಿಕರ ಅತಂತ್ರ ಪತಿಸ್ಥಿತಿಗೆ ತಲುಪಿದ ಸ್ಥಿತಿಯನ್ನೂ ಹೇಳುವದರ ಜೊತೆಗೆ ಆ ಕೃಷಿಕರಿಗೆ ಪರಿಹಾರವನ್ನೂ ಸಿಗದಿರುವದನ್ನು ಪ್ರಶ್ನಿಸುತ್ತಾರೆ ಸಹನಾ ಕಾಂತಬೈಲು ಅವರು.

ಹಳ್ಳಿಯ ತೋಟಗಳಲ್ಲಿ ಬೆಳೆಯುವ ಗಿಡಮೂಲಿಕೆಗಳನ್ನೂ, ಅನೇಕ ಬಗೆಯ ಸಾವಯವ ತರಕಾರಿ, ಹಣ್ಣುಗಳ ಖಾದ್ಯಗಳನ್ನೂ ಓದುಗರಿಗೆ ಬಾಯಲ್ಲಿ ನೀರೂರುವಂತೆ ಪರಿಚಯಿಸುತ್ತಾರೆ. ರೈತರ ಕೃಷಿಯೊಂದಿಗಿನ ಭಾವನಾತ್ಮಕ ಸಂಬಂಧವನ್ನೂ ಕಟ್ಟಿಕೊಡುತ್ತಾರೆ. ಹಸುವನ್ನು ಸಾಕಿ ಹೈನುಗಾರಿಕೆ ಮಾಡಿದ ಅನುಭವವುಳ್ಳ ಬರಹಗಾರ್ತಿ ಸಹನಾ ಕಾಂತಬೈಲು ಅವರು, ‘ಹೋರಿ ಕರುವಿನ ವಿದಾಯ ಪ್ರಸಂಗ’ವನ್ನು ಕಥನ ರೂಪದಲ್ಲಿ ಮನ ಕರಗುವಂತೆ ಚಿತ್ರಿಸಿಕೊಡುತ್ತಾರೆ.

ಜೇನು ನೊಣಗಳ ಬಗೆಗೆ ಹಾಗೂ ಅದರ ಸಾಕಣಿಕೆಯ ಬಗೆಗೆ ವಿಶೇಷ ಮಾಹಿತಿಯನ್ನು ಕುತೂಹಲಕಾರಿಯಾಗಿ ನೀಡುತ್ತಾರೆ. ಕರೆಂಟಿನ ವ್ಯವಸ್ಥೆಯಿಲ್ಲದ ಹಳ್ಳಿ ಮನೆಯಲ್ಲಿ ತನ್ನ ಬದುಕು ತನಗಿಷ್ಟವಾದ ಓದು-ಬರಹಗಳಿಲ್ಲದೆಯೇ ರುಬ್ಬುಗಲ್ಲಿನ ಜೊತೆಯಲ್ಲಿಯೇ ಕಳೆದುಹೋಗುವುದೆಂಬ ಆತಂಕದಿಂದ ಎಚ್ಚೆತ್ತುಕೊಂಡ ವಿಚಾರಗಳಿವೆ..!

ಛಲದಿಂದ ಹರಸಾಹಸಪಟ್ಟು ಮನೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಕೆಲಸಕ್ಕೆ ಕೈ ಹಾಕಿ ಯಶಸ್ವಿಯಾದ ಲೇಖನವನ್ನು ಓದುವಾಗ ನಮಗರಿವಿಲ್ಲದೇ ಮನದಲ್ಲಿ ಏನೋ ಒಂದು ಬಗೆಯ ಉದ್ಘಾರ ಹೊರಹೊಮ್ಮುತ್ತದೆ. ಮನೆಯ ಒಳಗೂ, ಹೊರಗೂ ನಿಸ್ವಾರ್ಥದಿಂದ ದುಡಿಮೆ ಮಾಡಿಯೂ ಹೆಣ್ಣು ತನ್ನನ್ನು ಗುರುತಿಸಿಕೊಳ್ಳಲಾಗದ ವಿಷಾದದ ಸಂಗತಿಗಳಿರುವ ಲೇಖನಗಳೂ ಇವೆ. ಇವು ಬಹು ಅಪರೂಪದ ಲೇಖನಗಳಾಗಿವೆ.

ಶಾಲೆಗಳಲ್ಲಿ ಕೃಷಿ ಶಿಕ್ಷಣದ ಆಶಯ, ಹಳ್ಳಿಗಳಲ್ಲಿ ಬದಲಾಗುತ್ತಿರುವ ಮದುವೆ ಮುಂತಾದ ಸಮಾರಂಭಗಳ ಕಾರ್ಯ ವೈಖರಿ, ನೈಸರ್ಗಿಕ ವಸ್ತುಗಳ ಬಳಕೆ, ಎಲ್ಲವನ್ನೂ ವಿವರಿಸುವ ಅರ್ಥಪೂರ್ಣ ಬರಹಗಳಾವೆ. ಸಹನಾ ಕಾಂತಬೈಲು ಅವರ ಹೆಚ್ಚಿನ ಲೇಖನಗಳಲ್ಲಿ ಹಳ್ಳಿಯ ಸೊಗಡು ಕಲಾತ್ಮಕವಾಗಿ ಮೂಡಿಬಂದಿದೆ ಎಂದೇ ನನಗೆ ಅನ್ನಿಸಿದ್ದು. ಅಲ್ಲದೇ ಮುಂಬೈ, ಕಲ್ಕತ್ತಾ ಮಹಾನಗರಗಳಲ್ಲಿಯೂ, ಅಮೇರಿಕಾದಲ್ಲಿಯೂ ಅವರು ಸಂಚರಿಸಿದ ಪ್ರದೇಶಗಳ, ಅಲ್ಲಿ ಅವರು ಗ್ರಹಿಸಿದ ಸೂಕ್ಷ್ಮ ವಿಷಯಗಳ ಕಿರುವರ್ಣನೆ ಬಲು ರೋಚಕವಾದೆ.

ಅವರ ಬರಹಗಳಲ್ಲಿ ಮನುಷ್ಯ ಸಂಬಂಧಗಳ ಭಾವನಾತ್ಮಕ ಸ್ಪಂದನೆಯೂ ಇದೆ. ಆಧುನಿಕತೆಯ ಸುಳಿವೂ ಇಲ್ಲದ ಹಳ್ಳಿಯಲ್ಲಿ ಹುಟ್ಟಿ, ಬೆಳೆದ ಒಬ್ಬ ಕೃಷಿಕ ಮಹಿಳೆ, ಎಷ್ಟೆಲ್ಲಾ ವಿಷಯಗಳನ್ನು ಗ್ರಹಿಸಿ, ಅನುಭವಿಸಿ, ಅರ್ಥೈಸಿಕೊಂಡು ಓದುಗರಿಗೆ ಆಸಕ್ತಿ ಹುಟ್ಟುವ ರೀತಿಯಲ್ಲಿ ನಿರೂಪಿಸಿದ ಪರಿ ಅಚ್ಚರಿ ಹುಟ್ಟಿಸುವಂತಿದೆ. ಲೇಖಕಿ ಸಹನಾ ಕಾಂತಬೈಲು ಅವರು ಕಾಡಿನಲ್ಲಿ ಆನೆ ಸಾಕುವ ಚಿಂತನೆ, ಕೃತಿಯ ಶೀರ್ಷಿಕೆಗೆ ಹೊಳಹು ನೀಡಿದೆ ಎಂದೇ ನನ್ನ ಅಭಿಪ್ರಾಯ.

ಹೀಗೆಯೇ ಅನೇಕ ರೀತಿಯ ವಿಷಯ ಜ್ಞಾನಗಳನ್ನು ಸರಳ ಶೈಲಿಯಲ್ಲಿ ಕಟ್ಟಿಕೊಟ್ಟು, ಸುಂದರವಾದ ಮುಖಪುಟದೊಂದಿಗೆ ಓದುಗರ ಮುಂದಿರುವ ಲಲಿತ ಪ್ರಬಂಧಗಳ ಗುಚ್ಛ ‘ಆನೆ ಸಾಕಲು ಹೊರಟವಳು’ ಕೃತಿಯು.

ಖ್ಯಾತ ಹಿರಿಯ ಲೇಖಕ ನಾಗೇಶ್ ಹೆಗಡೆ ಅವರಿಂದ ಸುಂದರವಾದ ಮುನ್ನುಡಿಯನ್ನೂ, ಖ್ಯಾತ ಸಾಹಿತಿ ಡಾ.ಬಿ.ಜನಾರ್ದನ ಭಟ್ ಇವರಿಂದ ಸುಂದರವಾದ ಬೆನ್ನುಡಿಯನ್ನು ಬರೆಯಿಸಿಕೊಂಡ ಈ ಕೃತಿ ವೈಶಿಷ್ಟ್ಯಪೂರ್ಣವಾಗಿದೆ. ಹೀಗೆಂಬುದರಲ್ಲಿ ಯಾವ ಸಂಶಯವೂ ಇಲ್ಲ..!

ಈ ಪ್ರಬಂಧ ಸಂಕಲನ ಹೆಚ್ಚಿನ ಓದುಗರ ಕೈ ಸೇರಲಿ. ಮತ್ತು ಮತ್ತೊಮ್ಮೆ ಅಭಿನಂದನೆಗಳು ಲೇಖಕಿ ಸಹನಾ ಕಾಂತಬೈಲು ಅವರಿಗೆ.

‘ಆನೆ ಸಾಕಲು ಹೊರಟವಳು’

ಕತೆಗಳ ಪುಸ್ತಕದ ಪ್ರಕಾಶಕರ ವಿಳಾಸ ಮತ್ತು ಪುಸ್ತಕದ ಬೆಲೆ ತಿಳಿಸಿ ಎಂದು ಅನೇಕಾನೇಕ ಜನರು ಕೇಳಿರುವ ಕಾರಣ ಇಲ್ಲಿ ಪ್ರಕಾಶಕರ ವಿಳಾಸ ಮತ್ತು ಬೆಲೆಯನ್ನು ಕೊಡಲಾಗಿದೆ. ‘ಆನೆ ಸಾಕಲು ಹೊರಟವಳು’ ಪುಸ್ತಕ ಬೇಕಾದವರು ಇಲ್ಲಿ ಖರೀದಿಸಬಹುದು.

ಶ್ರೀರಾಮ ಬುಕ್ ಸೆಂಟರ್

1573/, ವಿದ್ಯಾನಗರ, ಮಂಡ್ಯ

ಪುಸ್ತಕದ ಬೆಲೆ: ರೂ.90


ಕೆ.ಶಿವು.ಲಕ್ಕಣ್ಣವರ

Leave a Reply

Back To Top