ಕಥಾ ಸಂಗಾತಿ
ಸುಮಾ ಕಿರಣ್ ನ್ಯಾನೊ ಕತೆಗಳು
ಅಜ್ಜಿ – ಅಜ್ಜಾ
ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ ರಾಜೇಶ್ ಹಾಗೂ ರಾಗಿಣಿ ದಂಪತಿಗಳ ಮುದ್ದಾದ ಮಗಳು ಅಂಜಲಿ. ತಮ್ಮ ಮಗಳು ಕನ್ನಡ ಮಾತನಾಡಿದರೆ ತಮ್ಮ ಅಂತಸ್ತಿಗೆ ಕಡಿಮೆ ಎಂದು ಭಾವಿಸಿದ ದಂಪತಿಗಳು ಕನ್ನಡವನ್ನೇ ಮರೆತಿದ್ದರು.
ಎರಡನೇ ತರಗತಿ ಓದುತ್ತಿದ್ದ ಮಗಳು ಇದ್ದಕ್ಕಿದ್ದಂತೆ ದೊಡ್ಡ ಬಹುಮಾನ ಹಿಡಿದು ಬಂದು ನಿಂತಾಗ ದಂಪತಿಗಳಿಗೆ ಅಚ್ಚರಿಯಾಯಿತು! ಯಾವುದೇ ವಿಶೇಷ ಸ್ಪರ್ಧೆಯ ಸುಳಿವೇ ಶಾಲೆಯವರು ನೀಡದಿರುವಾಗ ಈ ಬಹುಮಾನ ಬಂದದ್ದಾದರೂ ಎಲ್ಲಿಂದ? ಈ ಪ್ರಶ್ನೆಗೆ ಉತ್ತರ ಅಂಜಲಿಯೆ ಹೇಳಬೇಕಷ್ಟೆ.
ನಗುತ್ತಾ ಸ್ವಚ್ಛ ಕನ್ನಡದಲ್ಲಿ ನುಡಿದಳು ಅಂಜಲಿ “ಡ್ಯಾಡ್, ಇಂದು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರು. ನಾನು ಕನ್ನಡದಲ್ಲಿ ಕರ್ನಾಟಕದ ವೈಭವ ವರ್ಣಿಸಿದ್ದಕ್ಕೆ ನನಗೆ ಮೊದಲ ಬಹುಮಾನ ಬಂದಿದೆ. ಇದನ್ನು ಪ್ರತಿ ದಿನ ಸಂಜೆ ನೀವು ಮಮ್ಮಿ ವಾಕಿಂಗ್ ಹೋದಾಗ ಕರ್ನಾಟಕದಲ್ಲಿದ್ದ ಅಜ್ಜಿ ಅಜ್ಜನಿಗೆ ಕರೆಮಾಡಿ ತಿಳಿದುಕೊಂಡೆ” ಎಂದಾಗ ದಂಗಾಗುವ ಸರದಿ ದಂಪತಿಗಳದ್ದು!
*********
ಪಟ್ಟಣಕ್ಕೆ ಬಂದ ಪತ್ನಿ!
ತೀರಾ ಸಣ್ಣ ಹಳ್ಳಿಯಲ್ಲಿ ಹುಟ್ಟಿ, ಬೆಳೆದು, ಮದುವೆಯಾದ ಸುಂದರಿ ಹನಿಮೂನ್ ಗೆಂದು ಗಂಡನೊಂದಿದೆ ಪಟ್ಟಣಕ್ಕೆ ಬಂದಳು. ದಂಪತಿಗಳು ಮದ್ಯಾಹ್ನ ಊಟಕ್ಕೆ ದೊಡ್ಡ ಹೋಟೆಲ್ ಹೊಕ್ಕರು. ಸುಂದರಿಗೆ ಅಕ್ಕ – ಪಕ್ಕದವರು ತಿನ್ನುವ ಖಾದ್ಯ ಕಂಡು ಬಾಯಲ್ಲಿ ನೀರಾಡಿತು. ತನ್ನ ಮುಂದೆ ಬಂದು ಕೂತ ಮೆನು ಕಾರ್ಡ್ದಲ್ಲಿ ಇರುವುದು ಅರ್ಥವಾಗದೆ ಉದ್ದ ಹೆಸರಿನ ತಿಂಡಿ ಆರ್ಡರ್ ಮಾಡಿದಳು. ಅರ್ಧ ಗಂಟೆ ಕಾದಮೇಲೆ ಬಂದದ್ದು ಮಾಮೂಲಿ ಚಿತ್ರಾನ್ನ. ಅದನ್ನ ಕಂಡು ನಿರಾಸೆ ಇಂದ ಗಂಡನ ಮುಖ ನೋಡಿದರೆ… “ಹೆಣೆ, ನಿನ್ ಹೇಳ್ದ್ ಎಂತ ಅಂಬುದ್ ಗೊತಿತಾ ನಿಂಗ್? ನಮ್ಮ್ ಹಳ್ಳಿಯಲ್ ಆರೆ ಇಪ್ಪುದ್ ನಾಕೇ ತಿಂಡಿ. ಅದೆಲ್ಲ ಹ್ಯಾಂಗ್ ಇರತ್ತ್ ಅಂಬುದ್ ಕಂಡ್, ತಿಂದ್ ಗೊತ್ತಿತ್ ನಮಗ್. ಇಲ್ಲಿ ನಿನ್ ಈಗ ಕೇಂಡ್ರೂ… ಇದೆ ನೀವ್ ಹೇಳದ್ ಅಂತ್ರ್.. ಅಲ್ಲಾ ಅಂಬುಕ್ ನಿಂಗ್ ಅದ್ ಹ್ಯಾಂಗ್ ಇರತ್ ಅಂತ ಏನಾರೂ ಗೊತಿತಾ? ಇಲ್ಲಾ ಅಲ್ದಾ…. ಇಕಾ ಈಗ್ ಅವರ್ ಕೊಟ್ಟದ್ದ್ ಸುಮ್ಮನ್ ತಿನ್ನ್” ಅಂದ. ಗಂಡನ ಮಾತಿನಲ್ಲಿ ಇದ್ದ ಸತ್ಯದ ಅರಿವಾಗಿ ಸುಂದರಿ ತೆಪ್ಪಗೆ ಚಿತ್ರಾನ್ನ ತಿಂದಳು.
————————-
ಸುಮಾ ಕಿರಣ್
ಚಿಕ್ಕ, ಚೊಕ್ಕ ನ್ಯಾನೋ ಕಥೆಗಳನ್ನು ಬರೆದಿದ್ದೀರಿ, ಸುಮಾ
ನಿಮ್ಮ ನವೀನ ಪ್ರಯತ್ನಕ್ಕೆ ಶುಭಾಶಯಗಳು ಸುಮಾ..