ಕಾವ್ಯ ಸಂಗಾತಿ
ಹರಯದ ಸೊಬಗು
ಡಾ. ಅರಕಲಗೂಡು ನೀಲಕಂಠ ಮೂರ್ತಿ
೧.
ಹರಯದ ಹೆದ್ದಾರಿಯ ಆಕ್ಕ ಪಕ್ಕ
ಹುತ್ತಗಳಲಿ ಹಾವುಗಳು
ಭುಸುಗುಡುತ್ತವೆ
ಕೆಲವು ಬಾಯಲ್ಲಿ ನಂಜು ಹಲ್ಲುಗಳು
ಕೆಲವು ಸಾಧು ಬಾಯಿಗಳು
ವಿಧ ವಿಧ ಶ್ರೇಣಿಗಳಲಿ
ಎಲ್ಲ ಮಾದರಿ ಬಿಲಗಳಲಿ
ಹೊಮ್ಮುವ ಭುಸುಭುಸು ಸದ್ದು
ವೈಶಿಷ್ಟ್ಯ ಹರಯ ಮೈ ಹತ್ತಿದ್ದು
ವಯಸು ನಿಧಾನ ಮೈಮುತ್ತುತ್ತಾ
ಹಲ್ಲುದುರಿ ಎಲ್ಲ ತೆವಳು ಹುಳುಗಳು
ಮತ್ತು ಬರಿದೆ ಏದುಸಿರುಗಳು…!
೨.
ರಕ್ಕಸ ಹರಿವ ಹುಚ್ಚು ಹರವಿನ
ಊರುಗಳನೆ ನುಂಗಿದ ಉಕ್ಕು ಹೊಳೆಗೆ
ಮೋಡದೆತ್ತರ ಬೆಳೆದು ನಿಂತ
ದೈತ್ಯ ಮರ ಏರಿ
ಊರೆಲ್ಲ ಬೆರಗಿನಲಿ
ನೋಡುನೋಡುತ್ತಿದ್ದ ಹಾಗೆ
ಕೊಚ್ಚಿ ಹೋಗುವುದನು ಲೆಕ್ಕಿಸದೆ
ರಭಸದಲಿ ಧುಮುಕಿ
ಈಜಿದಂತೆ ಹರಯ!
ಮುಖದ ರೋಮ ಒಂದೊಂದೆ
ರೇಷಿಮೆ ಮೆರಗು ತಿರುಗಲು
ಹೊಂಡ ಇಳಿಯಲೂ ಭಯ!
೩.
ಆಗೀಗೊಮ್ಮೊಮ್ಮೆ ಹರಯದ ತೆವಲು
ಕುದಿಯತೊಡಗಿ
ಪದಗಳ ಗುಳ್ಳೆಗಳಾಗಿ
ಕವನದ ಸಾಲುಗಳು
ಕೊತ ಕೊತ ಉಕ್ಕಿದ ಭಾಸವಾಗುವುದು
ಎಲ್ಲೋ ಒಮ್ಮೆ ಲಕ್ಷಕ್ಕೊಂದು
ಉಕ್ಕು ಗುಳ್ಳೆ ಘನವಾಗಿ
ಚಿನ್ನದ ಹೊಳಪಿನ ಕಾವ್ಯ ಸೊಬಗು
ಸುಶ್ರಾವ್ಯ ಹರಿಸುವುದೂ ಉಂಟು!
೪.
ಹರಯ ಮೈ ಏರುವ ಹೊತ್ತು
ಜೋಪಾನ!
ಕಾರ್ಕೋಟಕ ವಿಷದ ಹಲ್ಲು ಮೆರೆದು
ಅಹರ್ನಿಶಿ ಭುಸುಗುಟ್ಟು
ಹೆಡೆಯೆತ್ತಿ ನಿಂತು ಕೂಡ
ಧೀಮಂತ ಗಾಂಭೀರ್ಯ ತಳೆದು
ಸ್ಫುರಿಸಿದ ಬದುಕು
ಹರೆಯದ ಉತ್ಕೃಷ್ಟ ಸೊಗಸು
ಹಾಗೂ ಎದೆಯೊಳಗೆ ನಲವಿನ
ನವಿಲು ನಾಟ್ಯ
ಬಡಿತಗಳ ಮೊಳಗು ವಾದ್ಯ
ಮತ್ತು ಮಾನವ ಸಂವೇದ್ಯ
ತಲ್ಲಣಕೆ ಮಿಡಿವ ಹೃದಯ
ಹರಯದ ಅತಿಶಯ
ರಕ್ಕಸ ಹರಿವು ಹುಚ್ಚು
ಊರುಗಳನೆ ನುಂಗಿದ ಉಕ್ಕು
ಸಾಲುಗಳು ಚೆನ್ನಾಗಿವೆ!!