ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಕವಿತೆಗಳು

ಕಾವ್ಯ ಸಂಗಾತಿ

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ.

ಎಕ್ಕದ ಹಾಲು ಮತ್ತು ಬಳ್ಳಿ ಹೂವು

Calotropis gigantea - Wikipedia

ನಾವು ಬದುಕು ಕಟ್ಟುವ ಆತುರದಲ್ಲಿ ದ್ದೇವೆ..
ನೀವು ಜೀವ ಸೌಧ ಕೆಡಹುವ ಧಾವಂತದಲ್ಲಿದ್ದೀರಿ.

ನಾವು ಸರಕಾರಿ ಶಾಲೆಯ ಪಾಟಿಗ್ಗಲ್ಲಿನ ಮೇಲೆ ,
ಜಗತ್ತಿನ ನಕಾಶೆ ಬಿಡಿಸುತ್ತಿದ್ದೇವೆ ..

ನೀವು ಶಹರಿನ ಶಾಲೆಗಳ ಎಸಿ ರೂಮ್ ನಲ್ಲಿ
ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದೀರಿ ..

ನಾವು ಕರಿಹಲಿಗೆಯ ಮೇಲೆ, ದೇಶದ ಲೆಕ್ಕಾಚಾರ ಬರೆಯುತ್ತಿದ್ದೇವೆ..
ನೀವು ಶಾಹಿ ತೀರಿದ ಲೇಖನಿಯಿಂದ
ಅದೇ ದೇಶದ ಚಿತ್ರಣವನ್ನೇ ಬದಲಿಸುತ್ತದ್ದಿರಿ…

ನಾವು ಆಕಾಶದ ಚುಕ್ಕಿ ನಕ್ಷತ್ರಗಳ ಎಣಿಸುತ್ತಿದ್ದೇವೆ. ಸೂರಿಲ್ಲದ ಮುರುಕು ಗುಡಿಸಲಿನ ಛಾವಣಿಯಿಂದ…

ನೀವು ಸಾವಿರ, ಲಕ್ಷ ,ಕೋಟಿ ಕೋಟಿಗಳ
ಹಾಸಿಗೆಗಳಲ್ಲಿ ಉರುಳಾಡುತ್ತ
ಹೇಸಿ ಬದುಕ ಬದುಕುತ್ತಿದ್ದೀರಿ….

ನಾವು ಪ್ರಜಾಪ್ರಭುತ್ವದ ಆಶಯಗಳನ್ನು, ವಿದ್ಯಾ ದೇಗುಲದಲ್ಲಿ ಬೋಧಿಸುವ ಕೈಂಕರ್ಯದಲ್ಲಿದ್ದೇವೆ….

ನೀವು ಅದೇ ಪ್ರಜಾಪ್ರಭುತ್ವದ
ಧೋರಣೆಗಳನ್ನು, ಹೊಸಕಿ ಹಾಕಿ
ಗಡದ್ದಾಗಿ ತಿಂದು ತೇಗಿ
ವಿಧಾನಸೌಧದಲ್ಲಿ ಮಲಗಿದ್ದೀರಿ…

ನಾವು ಹೊಟ್ಟೆ ತುಂಬಿಸಿಕೊಳ್ಳುವ
ಕಾಯಕ ಜೀವಿಗಳು, ನೇಗಿಲಯೋಗಿಗಳು….

ನೀವು ಬಿಟ್ಟಿಯಾಗಿ ತಿಂದು, ತೇಗಿ ,
ಹಂದಿಯಂತೆ ಡರಕಿ ಹೊಡೆದು ಕೊಚ್ಚಿಗಳಲ್ಲಿ ಉರುಳಾಡಿದರೂ ಸುವಾಸನೆ ಬೀರುತ್ತಲಿದ್ದೀರಿ …

ನಾವು ಕರಿಮೈಯ ಕೂಲಿಗಳು,
ಬೆವರು ರಕ್ತಗಳೆರಡಕ್ಕೂ ಬೆಲೆತೆತ್ತವರು….

ನೀವು ಬೆವರು ಹರಿಸಲು ಜಿಮ್ ಗೆ ಹೋಗುವ
ಥಳಕು ಬೆಳಕಿನ ಶೋಕಿಲಾಲರು….

ನಾವು ಪ್ರೇಮಸೌಧಕ್ಕೆ ಅಡಿಪಾಯ ಹಾಕಿದ್ದೇವೆ.. ನೀವು ಸೌಹಾರ್ದದ ಭೂಮಿಗೆ ವಿಷ ಬೀಜ ಬಿತ್ತುತ್ತಲಿದ್ದೀರಿ…

ನಾವು ಹಸಿದ ಹೊಟ್ಟೆ, ಆಕಾಶದ ಸೂರು,
ಬರಿಮೈ ಬಟ್ಟೆಯ ಮಾನವರು

ನೀವು ಖಾಕಿ ಕೈದಿಗಳು, ಖಾದಿ ಖದೀಮರು, ಮಾನವಂತರು…

ನೀವು ನಂಜೇರಿದ ನಾಲಿಗೆಯಿಂದ,
ತುತ್ತೆಯ ತುತ್ತು ತಿನ್ನಿಸುವ,
ಮುಳ್ಳಬೇಲಿಯ ಕಳ್ಳಿಹಾಲ್ಗಿಡಗಳು…

ನಾವು ಎದೆಯ ತುಂಬೆಲ್ಲಾ
ಸಾವಿರದ ಕನಸ ಕಸೂತಿ ಹಾಕಿ,
ಕೌದಿ ಹೊಲೆಯುವ ಕರಳು ಬಳ್ಳಿಯ ಹೂಗಳು…..

*******

ವ್ಯೋಮದೊಳಗಿನ ಆತ್ಮ

1,135 Sarnath Stock Photos, Pictures & Royalty-Free Images - iStock

ಸಾರಾನಾಥದ ಸ್ತೂಪದ ಹೂದೋಟದಲ್ಲಿ ,
ದಮ್ಮನ ಪರಿಮಳ.
ಜಗವ ಕಂಡರಿಯದ ಧನ್ಯತೆ,
ಕಾಲಿರಿಸಿದ ನೆಲದಲ್ಲೆಲ್ಲ ಪುಳಕ.
ಯಾರದೋ ಧ್ವನಿ ನಿಶ್ಶಬ್ದದೊಳಗೆ,
ಹೊರಳಿದೆ, ಹುಡುಕಿದೆ ,ಬೆಚ್ಚಿದೆ.
ಅದು ಬಯಲೊಳಗಿನ ಆತ್ಮ.

ಜ್ಞಾನ ಭ್ರೂಣ ಹೊತ್ತ ಅದಕ್ಕೆ ನನ್ನೊಳಗೆ ಗರ್ಭೀಕರಿಸಿಕೊಳ್ಳುವ ಧಾವಂತ.
ಓ ಇದು ವ್ಯೋಮದ ಆತ್ಮವೇ .
ಹಾ ಇವನು ಬುದ್ಧನೇ ಬದ್ಧನೇ ಸಿದ್ಧನೆ.
ಕರುಣೆ, ಪ್ರೀತಿ, ಮಮತೆಗಳಿರುವಲ್ಲಿ
ಮತ್ತೆ ಹುಟ್ಟಬೇಕೆಂಬ ಅವನ ಛಲ ಮೆಚ್ಚಿದೆ.

ನಾನೀಗ ಗರ್ಭವತಿ,
ಸಂಗಮದಲ್ಲಿ ನನ್ನ ಜೋಳಿಗೆ ಜೀಕುತ್ತಿದೆ.
ಪ್ರಸವಿಸುವ ವೇದನೆ ಇಲ್ಲ, ಭಯವಿಲ್ಲ,
ಅದು ತಾನೇ ಹುಟ್ಟ ಬಯಸಿದ ಭ್ರೂಣ
ಆ ಕೂಸು ಯೋನಿಜವೂ ಅಲ್ಲ.

ಈಗ ಜೋಗುಳದ ಗಾನ ಬಯಲ ತುಂಬ.
ತೊಟ್ಟಿಲು ಸದಾ ತೂಗುತ್ತಲೇ ಇದೆ. ಶತಶತಮಾನಗಳಿಂದಲೂ
ಬುದ್ಧ ಬಸವರಿಗೆ ಬಾಣಂತಿಯರು
ಹಾಲುಣಿಸುತ್ತಲೇ ಇದ್ದಾರೆ.


5 thoughts on “ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಕವಿತೆಗಳು

    1. ಅವರನ್ನ ಆಯ್ಕೆ ಮಾಡಿದವರು ನಾವಲ್ಲವೆ?
      ನಾವು ಮೊದಲು ನಮ್ಮನ್ನು ಅರಿತುಕೊಳ್ಳಬೇಕಲ್ಲವೆ?
      ನಮ್ಮ ನಮ್ಮ ಮನಸ್ಸುಗಳಲ್ಲಿ
      ನಮ್ಮ. ನಮ್ಮ ಜೀನ್ಗಳಲ್ಲಿ
      ಸಂಸ್ಕೃತಿ ಮಾನವೀಯತೆ ಬದಲಾಗಬೇಕು
      ಬಲಿತ ವಿಕೃತ ಫಲ ಪಡೆದಾಗಿದೆ ಮುಂದೆ
      ಸುಕೃತ ಬೀಜವ ನಮ್ಮ ಮನದಲ್ಲಿ ಬಿತ್ತೋಣಾ
      ಅದು ಫಲವಾಗಲಿ ನಮ್ಮ ಮನೆಯಿಂದಲೇ
      ನಿಮ್ಮ ಕವಿತೆಗಳು ಪ್ರಚಲಿತ ವಿದ್ಯಮಾನಗಳನ್ನು ಎತ್ತಿ ತೋರಿಸುತ್ತಿವೆ ಬದಲಾಗೋಣಾ ನಮ್ಮ ಮನ ಮನೆಯಿಂದ ಮುಂದೆಯಾದರೂ ವಿಷ ಜಂತುಗಳು ಸೃಷ್ಟಿಯಾಗದಂತೆ ತಡೆಯೋಣಾ
      ನಮಸ್ಕಾರ

  1. ಸಹೋದರಿ ಮೈತ್ರಾಣಿ ನಿಮ್ಮ ಕವನಗಳು ಪರಿಣಾಮಕಾರಿ ಯಾಗಿವೆ. ಹೊಸ ಹೊಳವು ಇದೆ ಶಬ್ದಗಳು ಮಾತಾಡುತ್ತವೆ. 1

Leave a Reply

Back To Top