ಅಂಕಣ ಸಂಗಾತಿ
ನೆನಪಿನದೋಣಿಯಲಿ
ನನ್ನಶಾಲೆ
ಶಾಲೆಯ ದಿನಗಳೆಂದರೆ ಅವು ಜೀವನದ ಚಿನ್ನದ ಗಳಿಗೆಗಳು. ನಮ್ಮ ವ್ಯಕ್ತಿತ್ವದ ರೂಪುರೇಷೆಗಳು ನಿರ್ಮಾಣವಾಗುವುದು ಅಲ್ಲೇ. ಅಂತಹ ಶಾಲೆಯ ದಿನಗಳ ನೆನಪು ಒಂದು ಲೇಖನದಲ್ಲಿ ಹಿಡಿದಿಡುವಂಥ ದ್ದಲ್ಲ. ನಾನು ಒಂದು ಮತ್ತು ಎರಡನೇ ತರಗತಿಯನ್ನು ಮೈಸೂರಿನ ಚಾಮುಂಡಿಪುರಂನ ರಾಜರಾಜೇಶ್ವರಿ ಶಾಲೆ ಹಾಗೂ ೭ ನೆಯ ತರಗತಿಯವರೆಗೂ ವಿಶ್ವೇಶ್ವರ ನಗರದ ಸೆಂಟ್ ಥಾಮಸ್ ಶಾಲೆ ಹಾಗೂ ಪ್ರೌಢಶಾಲೆಯನ್ನು ಶಾರದ ವಿಲಾಸ ಬಾಲಕಿಯರ ಪ್ರೌಢ ಶಾಲೆಯಲ್ಲಿ ಓದಿದ್ದು. ಮೂರು ಶಾಲೆಗಳ ನೆನಪು ಅವಿಸ್ಮರಣೀಯ ಅಮೂಲ್ಯಹಾಗೂ ಅನಘ.
ರಾಜರಾಜೇಶ್ವರಿ ಶಾಲೆಯ ನೆನಪು ಅಂದರೆ ರುಕ್ಮಿಣಿ ಮೇಡಂ ಲೀಲಾ ಮೇಡಂ ಮತ್ತು ಜಯಾ ಮೇಡಂ. ಗೆಳತಿಯರು ಯಾರೂ ಅಷ್ಟು ನೆನಪಿಲ್ಲ. ಇನ್ನು ಕಾಂಟ್ಯಾಕ್ಟ್ ಎಲ್ಲಿಯದು? ಆದರೆ ತೀರಾ ಇತ್ತೀಚಿನವರೆಗೂ ಚಾಮುಂಡಿ ಪುರಂಗೆ ಹೋದಾಗ ಸಿಗುತ್ತಿದ್ದ ರುಕ್ಮಿಣಿ ಲೀಲಾ ಮೇಡಮ್ದ ಅದೇ ಪ್ರೀತಿ ವಿಶ್ವಾಸ .ಮತ್ತೆ ಆ ಶಾಲೆಯಲ್ಲಿದ್ದಾಗ ನನ್ನ ಮುಂದೆ ನಿಲ್ಲಿಸಿ ಶ್ಲೋಕ ಹಾಡು ಕಥೆ ಕೇಳಿಸುತ್ತಿದ್ದುದು ಮಸುಕು ನೆನಪು .ಒಂದು ಬಾರಿ ಗಣೇಶ ಟಾಕೀಸಿಗೆ ಮಕ್ಕಳನ್ನೆಲ್ಲ ಸಿನಿಮಾಗೆ ಕರೆದುಕೊಂಡು ಹೋಗಿದ್ದು ನೆನಪು .ನನಗೆ ಮೂರನೆಯ ತರಗತಿ ಬದಲು ನಾಲ್ಕನೇ ತರಗತಿಗೆ ಡಬ್ಬಲ್ ಪ್ರಮೋಶನ್ ಕೊಡ್ತೀನಿ ಅಂದಿದ್ರಂತೆ ಶಾಲೆ ಬದಲಿಸಿ ಅದು ತಪ್ಪಿ ಹೋಯಿತು .
ಇನ್ನು ಸೆಂಟ್ ಥಾಮಸ್ ಶಾಲೆ ಅಂತೂ ನನ್ನ ಜೀವನದ ಸುವರ್ಣಾಕ್ಷರಗಳಲ್ಲಿ ಬರೆಯುವಂಥದ್ದು. ಹಿಂದಿ ಇಂಗ್ಲಿಷ್ ಕಲಿಕೆ ಹೊಸದಾಗಿದ್ದರೂ ಬೇಗ ಹೊಂದಿಕೊಳ್ಳುವ ಹಾಗೆ ಮಾಡಿತ್ತು. ಶಾಲೆಯ ಉಪಾಧ್ಯಾಯಿನಿಯರಾದ ವಿಜಯಾ ಮಿಸ್ ಭಾಗ್ಯಲಕ್ಷ್ಮಿ ಮಿಸ್ ಶಾಂತ ಮಿಸ್ ಜಾನಕಿ ಮಿಸ್ ವೀಣಮಿಸ್ ಈಗಲೂ ಸಿಕ್ಕಾಗ ಎಷ್ಟು ಚೆನ್ನಾಗಿ ಗುರುತು ಹಿಡಿದು ಮಾತನಾಡಿಸುತ್ತಾರೆ . ಅಕಾಲದಲ್ಲೇ ಮೃತ್ಯುಗೀಡಾದ ರಾಜಮಣಿ ಮಿಸ್ ಅನ್ನು ಮರೆಯಲು ಸಾಧ್ಯವಿಲ್ಲ .ಮೊನ್ನೆ ಸರಿಗಮಪದಲ್ಲಿ ವಿಜಯಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮಿ ಮತ್ತು ಶಾಂತಿ ಮಿಸ್ನ ನೋಡಿ ಆದ ಸಂತೋಷ ಅಷ್ಟಿಷ್ಟಲ್ಲ .ನನ್ನ ಪಠ್ಯೇತರ ಚಟುವಟಿಕೆಗಳು ಹಾಡು ಚರ್ಚಾ ಸ್ಪರ್ಧೆ ಮತ್ತು ಪಠ್ಯ ಎಲ್ಲ ವಿಷಯಗಳಿಗೂ ಬೆಂಬಲ ಕೊಟ್ಟು ಆತ್ಮವಿಶ್ವಾಸ ಮೂಡಿಸಿದ ಶಾಲೆ ಾದು. ಅಲ್ಲಿಯ ಮುಖ್ಯೋಪಾಧ್ಯಾಯರಂತೂ ಇಂದಿಗೂ ನಮ್ಮ ಕಚೇರಿಗೆ ಬಂದಾಗ ಸೀಟ್ ಹತ್ತಿರ ಬಂದು ಮಾತನಾಡಿಸಿಯೇ ಹೋಗುವುದು .ಶಾಲೆಯ ಮುಂದೆ ಮಾರುತ್ತಿದ್ದ ಬಟಾಣಿ ನೆಲ್ಲಿಕಾಯಿ ಕಿತ್ತಳೆ ಐಸ್ ಕಡ್ಡಿ ಮರೆಯಲು ಸಾಧ್ಯವೇ? ಸರ್ವಮಂಗಳ ರೇಖಾ ರಾಜಲಕ್ಷ್ಮಿ ಗಿರಿಜಾ ಮಣಿ ಎಲ್ಲ ಸ್ನೇಹಿತೆಯರು ಇನ್ನೂ ನನ್ನ ಸಂಪರ್ಕದಲ್ಲಿದ್ದಾರೆ ಎನ್ನುವುದು ಸಂತಸದ ವಿಷಯ .
ಇನ್ನು ಶಾರದವಿಲಾಸ್ ಶಾಲೆ. ಈ ಮೊದಲೇ ಗೀತಾ ಮಿಸ್ ಬಗ್ಗೆ ಬರೆದಿದ್ಮದೆ. ಮಧುರ ಮಿಸ್ ಸೀತಾಲಕ್ಷ್ಮಿ ಮಿಸ್ ವಿಮಲಾ ಮಿಸ್ ಮುಖ್ಯೋಪಾಧ್ಯಾಯಿನಿ ವೆಂಕಟಲಕ್ಷ್ಮಿ ಮೇಡಂ ನನಗೆ ಬರಹದ ಹುಚ್ಚು ಹತ್ತಿಸಿದ ಕನ್ನಡ ಮಿಸ್ ಪುಷ್ಪ ಎಲ್ಲರೂ ಪ್ರಾತಃಸ್ಮರಣೀಯರು. ನಾವು ಐದು ಜನ ಪಂಚಕನ್ಯೆಯರು .ಸುಧಾ ಉಮಾ ಗೀತಾ ಮತ್ತು ಮಾಲಾ ಶಾಲೆಯ ಹೊರಗೆ ಗಾಡಿಯಲ್ಲಿ ಚುರುಮುರಿ ತೋತಾಪುರಿಗೆ ಕಿತ್ತಲೆ ಹಣ್ಣು ತಿನ್ನುತ್ತಿದ್ದುದು ಸೈನ್ಸ್ ಕ್ಲಬ್ ಮನರಂಜನಾ ಕ್ಲಬ್ ಗಳ ಪದಾಧಿಕಾರಿಗಳಾಗಿ ಕೆಲಸ ಮಾಡಿದ್ದು ನಾಟಕಕ್ಕೆ ಮೊದಲ ಬಾರಿ ಬಣ್ಣ ಹಚ್ಚಿದ್ದು ಎಲ್ಲವೂ ನನ್ನ ಮನಸ್ಸಿನ ಪುಟಗಳಿಂದ ಮಾಸಿಲ್ಲ. ಸುಜಾತಾ ಹೋದರೆ ಡಿಬೇಟ್ ಶೀಲ್ಡ್ ಗ್ಯಾರಂಟಿ ಎಂಬ ಉಪಾಧ್ಯಾಯಿನಿ ಸಹಪಾಠಿಗಳ ನಂಬಿಕೆ ಅಭಿಮಾನ ಸಾಮಾನ್ಯಜ್ಞಾನ ರಾಮಾಯಣ ಮಹಾಭಾರತ ಪರೀಕ್ಷೆಗಳು ಪ್ರಬಂಧ ಸ್ಪರ್ಧೆಗಳು ರೆಸಿಟೇಷನ್ ಸ್ಪರ್ಧೆ ಭಗವದ್ಗೀತೆ ಪಾರಾಯಣ ಮತ್ತು ಪರೀಕ್ಷೆ ಈ ಎಲ್ಲಾ ಸ್ಪರ್ಧೆಗಳಲ್ಲೂ ನಮ್ಮ ಶಾಲೆಗೆ ಮೊದಲ ಬಹುಮಾನ ತಂದುಕೊಟ್ಟ ಹೆಮ್ಮೆ ನನ್ನದು .ಅದನ್ನೆಲ್ಲ ನೆನೆಸಿಕೊಂಡರೆ ಮತ್ತೆ ಆ ಕಾಲಕ್ಕೆ ಹೋಗಿ ಬಿಡೋಣ ಎನಿಸುತ್ತದೆ ಕಾಲಚಕ್ರ ಹಿಂದಿರುಗಿದರೆ ನಾನು ಮತ್ತೆ ಹೈಸ್ಕೂಲಿನ ಹುಡುಗಿಯಾಗುವ ಬಯಕೆ .
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು