ಕಾವ್ಯಸಂಗಾತಿ
ಗಜಲ್
ಅರುಣಾ ನರೇಂದ್ರ
ಜಗದ ದದ್೯ಗಳಿಗೆ ಮುಲಾಮು ಹುಡುಕಲು ನಡುರಾತ್ರಿಯಲ್ಲಿ ಎದ್ದ
ಜನರ ದುಃಖದ ಮೂಲವನು ತಿಳಿಯಲು ಅರಮನೆಯ ತೊರೆದ ಬುದ್ಧ
ರಾಜ್ಯ ಅರಸೊತ್ತಿಗೆ ಮಡದಿ ಮಕ್ಕಳು ಯಾರು ಬೇಕಾಗಲಿಲ್ಲ ಇವನಿಗೆ
ಕಾಡುವ ಸವಾಲುಗಳಿಗೆ ಉತ್ತರ ಕಂಡು ಹಿಡಿಯಲು ಆಗಿದ್ದನವನು ಸಿದ್ದ
ಅಂಗುಲಿಮಾಲನ ಎದೆಯಲ್ಲೂ ಅಂತಃಕರಣದ ಬೀಜ ಬಿತ್ತಿದವನು
ಆಸೆಯೇ ದುಃಖಕ್ಕೆ ಕಾರಣವೆಂದು ನಿಜವ ತಿಳಿಸಿ ಎಲ್ಲರ ಮನವ ಗೆದ್ದ
ಪ್ರೀತಿ ದಯೆ ಶಾಂತಿ ಕರುಣೆಗಳೇ ಸದಾ ನಮ್ಮನ್ನು ಗೆಲ್ಲಿಸುತ್ತವೆ
ಹಿಂಸೆಗೆ ಮುಗುಳುನಗೆ ಯೊಂದೇ ಅಸ್ತ್ರ ಮತ್ಯಾಕೆ ಬೇಕು ಯುದ್ಧ
ಸಾವಿನ ನಿಜದ ಮರ್ಮವನು ಕಿಸಾಗೌತಮಿಗೂ ಅರುಹಿದವನು
ಬದುಕಿನ ಅರ್ಥ ಲೋಕಕೆ ತಿಳಿಸಿ ಜಗದ ಪ್ರೀತಿ ನಗುನಗುತ ಮೆದ್ದ
ಬಯಲು ಆಲಯದಲ್ಲಿ ಬಯಲಾಗಿ ಹೋಗಿ ಬಿಳಿಯ ಬೆಟ್ಟವಾಗಿ ಉಳಿದವನು
ಬೋಧಿವೃಕ್ಷದ ಬೆಳಕಲ್ಲಿ ನಗೆಯ ಚೆಲ್ಲಿ ಮಹಾ ಬೆಳಕಾಗಿ ಬೆಳಕನ್ನೇ ಹೊದ್ದ
ಬಂದ ಮೇಲೆ ಎಲ್ಲಾ ಹೋಗುವುದೇ ಅರುಣಾ ನಶ್ವರ ಬದುಕಿಗೆ ಹೊಡೆದಾಟ ಬೇಡ
ಪ್ರೀತಿಯಿಂದಲೇ ಎಲ್ಲ ಗೆಲ್ಲಬಹುದು ಬುದ್ಧನೆಂಬುವನು ಇಲ್ಲಿಯೂ ಇದ್ದ
Nice gajhal mam..busdfhana sampoorna vyaktitva bicchittiruviri.