ಬುದ್ದ ಪೂರ್ಣಿಮಾ ವಿಶೇಷ

ಕಾವ್ಯಸಂಗಾತಿ

ಕಾಂತರಾಜು ಕನಕಪುರ

ಬಿಕರಿಗಿದ್ದಾನೆ ಬುದ್ಧ…!

ಅದೋ…
ಆ ರಸ್ತೆಯ ಎರಡು ಬದಿಗಳ ಅಂಗಡಿಗಳಲಿ
ಬಿಕರಿಗಿದ್ದಾನೆ ಬುದ್ಧ…
ಯಾವ ರೀತಿ ಬೇಕೋ ಅದೇ ರೂಪದಲ್ಲಿ
ಲಭ್ಯವಿದ್ದಾನೆ ಬುದ್ಧ…

ಕ್ಯಾನ್ವಾಸಿನಲಿ, ಪಿಒಪಿಯಲಿ, ಕಲ್ಲಿನಲಿ
ಕಂಚಿನಲಿ, ಹಿತ್ತಾಳೆಯಲಿ, ಚಿನ್ನದಲ್ಲೂ
ಅವತಾರವೆತ್ತಿದ್ದಾನೆ ಬುದ್ಧ…
ಧ್ಯಾನಸ್ಥ, ಆಶೀರ್ವದಿಸುವ, ನಗುವ,
ತಟಸ್ಥನಾದ ಬುದ್ಧ…

ಬಂಗಲೆ, ಭವನ, ಸೌಧ, ಮಹಲು, ಹವೇಲಿ
ಆಲಯ, ಮನೆ ಮತ್ತು ಕಛೇರಿಗಳ
ಆಯಕಟ್ಟಿನ ಮೇಜು, ಕಪಾಟು, ʼಶೋʼಕೇಸ್ಗಳಲ್ಲಿ
ಮೌನವಾಗಿ ಕುಳಿತು ಅಂದ-ಅಂತಸ್ತನ್ನು
ಹೆಚ್ಚಿಸಿದ್ದಾನೆ ಬುದ್ದ…

ಇರಬೇಕಿತ್ತು…
ರಾಜಕಾರಣಿಗಳ ಮಹಲುಗಳಲ್ಲಿ ಅಷ್ಟಾಂಗ ಮಾರ್ಗ
ಅನುಸರಿಸಿದ ಬುದ್ಧ…
ಮಾಧ್ಯಮದವರ ಕಛೇರಿಗಳಲಿ ತನ್ನಭಿಪ್ರಾಯವನು
ಹೇರದ ಬುದ್ಧ…
ವಕೀಲರುಗಳ ಬಂಗಲೆಗಳಲಿ ಸತ್ಯಾನ್ವೇಷಣೆಯಲಿ
ತೊಡಗಿದ ಬುದ್ಧ…
ವ್ಯಾಪಾರಿಗಳ ನೆಲೆಗಳಲಿ ಮಧ್ಯಮ ಮಾರ್ಗ
ಬೋಧಿಸಿದ ಬುದ್ಧ…
ಕೊಲೆಗಡುಕರ ಭವನಗಳಲಿ ಅಂಗುಲಿಮಾಲನ
ತಿದ್ದಿದ ಬುದ್ಧ…
ತಲೆಹಿಡುಕರ ಹವೇಲಿಗಳಿ ಉಪ್ಪಲವನಳನು
ಉದ್ದರಿಸಿದ ಬುದ್ದ…
ಅನ್ಯಾಯಕಾರರ ಅರಮನೆಗಳಲಿ ಸುನೀತಳನು
ಪುನೀತಳಾಗಿಸಿದ ಬುದ್ಧ…
ಅಧ್ಯಾಪಕರುಗಳ ಮನೆ-ಮನಗಳಲಿ ಪಟಾಚಾರಿಯನು
ಗುರುವಾಗಿಸಿದ ಬುದ್ಧ…

ಹೊರಗಿನ ಅಂದವ ಹೆಚ್ಚಿಸಿದ
ಮೂರ್ತಿರೂಪದ ಬುದ್ಧ…
ಒಳಹೊರಗಿನ ಆನಂದವ ಹೆಚ್ಚಿಸಲು ಬೇಕಿದೆ
ಮತಿಯ ರೂಪದ ಬುದ್ದ…


                                                                                                       ಕಾಂತರಾಜು ಕನಕಪುರ

2 thoughts on “ಬುದ್ದ ಪೂರ್ಣಿಮಾ ವಿಶೇಷ

    1. ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು…

Leave a Reply

Back To Top