ಧನಪಾಲ ನಾಗರಾಜಪ್ಪನವರ ಹೊಸ ಅಬಾಬಿಗಳು

ಕಾವ್ಯ ಸಂಗಾತಿ

ಧನಪಾಲ ನಾಗರಾಜಪ್ಪನವರ ಹೊಸ ಅಬಾಬಿಗಳು

ಧನಪಾಲ ನಾಗರಾಜಪ್ಪನವರ ಹೊಸ ಅಬಾಬಿಗಳು

೧)
ಪ್ರೀತಿ…
ಮಾಸದ ಗಾಯವೆ?
ಮೋಸದ ಜಾಲವೆ?
ಧನು…
ಎಚ್ಚರ… ಎಲ್ಲವೂ ವ್ಯಾಪಾರಮಯ!

೨)
ಗೆಳೆಯ…
ಎಲ್ಲಿದೆ ನ್ಯಾಯ?
ಇದೆಂಥಾ ದುನಿಯ!
ಧನು…
ದಿನ ದಿನವೂ ತುಂಬಾ ಅಸಹನೀಯ!

೩)
ಎಲ್ಲೂ ನಿಲ್ಲದಿರು
ಸದಾ ಹರಿಯುತಿರು
ಎಲ್ಲರಲ್ಲೂ ಒಂದಾಗಿರು
ಧನು…
ನೀನು ನೀರಿನಂತಿರು.

೪)
ಗತವೊಂದು ಪಾಠ
ವರ್ತಮಾನವೊಂದು ಅವಕಾಶ
ಭವಿಷ್ಯತ್ತೊಂದು ಕನಸು
ಧನು…
ಕಾಯಕವೇ ಕೈಲಾಸ

೫)
ಕೊಲೆಯಾದವರು…
ಯಾರೇ ಆದರೂ ಮನುಷ್ಯರೇ
ಕೊಂದವರು ಯಾರಾದರೂ ಮನುಷ್ಯರಲ್ಲ
ಧನು…
ಅಮೂಲ್ಯವಾದ ಜೀವಕ್ಕೆ ಬೆಲೆಯೇ ಇಲ್ಲವೆ?!

೬)
ಬಲ್ಲವರಾರು…?
ನಾಳೆ ಏನೋ ಹೇಗೋ?
ಇಂದಿಗೂ ಕೂಡಾ ಪೂರ್ತಿ ಭರವಸೆಯಿಲ್ಲ
ಧನು…
ಜೀವಂತವಾಗಿರುವ ಕ್ಷಣಗಳಷ್ಟೇ ನಿನ್ನವು.

೭)
ಕತ್ತಿಗೆ…
ಕನಿಕರ ಎಲ್ಲಿಯದು?
ಕ್ರೌರ್ಯ ಧರ್ಮವಾಗಬಲ್ಲದೆ?
ಧನು…
ಮಸಾಲೆ ಮಾತುಗಳಿಗೆ ಮರುಳಾಗದಿರು.

೮)
ಒಂದೇ ದೂರು
ವ್ಯವಸ್ಥೆಯೇ ಸರಿಯಿಲ್ಲ
ವ್ಯವಸ್ಥೆ ಅಂದರೆ ನಾವೆಲ್ಲರೂ ಅಲ್ವೆ?
ಧನು…
ಮೊದಲು ನಾವು ಸರಿ ಇರಬೇಕಲ್ಲಾ.

೯)
ಸುಮ್ಮನಿರಬೇಡ
ಮನಸು ಬಿಚ್ಚಿ ಮಾತನಾಡು
ಮಾತುಗಳೆಂದರೆ ಬರೀ ಪದಗಳಲ್ಲ
ಧನು…
ಮಾತೆಂದರೆ ನಿನ್ನ ಅಸ್ತಿತ್ವ; ಹಕ್ಕು.

೧೦)
ಜೀವನ…
ಒಂದು ಅವಕಾಶವಷ್ಟೇ
ಅದು ವರವೂ ಅಲ್ಲ; ಶಾಪವೂ ಅಲ್ಲ.
ಧನು…
ನಿನ್ನಿಷ್ಟ, ನೀನು ಏನಾದರೂ ಮಾಡಿಕೊ.

೧೧)
ಮರೆತುಬಿಡು
ನಿನ್ನೆಗಳನ್ನಷ್ಟೇ ಅಲ್ಲ; ನಾಳೆಗಳನ್ನೂ ಕೂಡಾ
ಬದುಕು ಇಂದೇ ಕೊನೆ ಎಂಬಂತೆ
ಧನು…
ಸಂತೋಷಕ್ಕಿಂತ ಮಿಗಿಲಾದ ಸಿರಿವಂತಿಕೆಯಿಲ್ಲ.

೧೨)
ಹೆಣ್ಣು…
ಎಲ್ಲಕ್ಕೂ ಸ್ಫೂರ್ತಿ ‌
ಅವಳಿಂದಲೇ‌ ಎಲ್ಲವೂ ಪೂರ್ತಿ
ಧನು…
ಗಂಡು-ಹೆಣ್ಣು ಸೃಷ್ಟಿಯ ಎರಡು ಕಣ್ಣು.

೧೩)
ಸತ್ಯ…
ಎಲ್ಲಾ ಧರ್ಮ-ಪಂಥಗಳಲ್ಲೂ ಇದೆ.
ಯಾವ ಧರ್ಮ-ಪಂಥವೂ ಸಂಪೂರ್ಣ ಸತ್ಯವಲ್ಲ
ಧನು…
ಸತ್ಯ ಯಾವುದರ ಆಧೀನದಲ್ಲೂ ಇಲ್ಲ.

೧೪)
ಎಲ್ಲರೂ…
ಒಂದಿಲ್ಲೊಂದು ದಿನ
ಬರಿಗೈಲೇ ಸೇರುವರು ಸ್ಮಶಾನ
ಧನು…
ಬದಲಾದರೆ ಮನ ಬೆಳಗುವುದು ಜೀವನ.

೧೬)
ಏನಾಗಿದೆ?
ಈ ಸಮಾಜ ಹೀಗೆ ಏಕಿದೆ?
ಬಾಯಿಬಡಕರೇ ಹೆಚ್ಚಾಗಿದ್ದಾರೆ!
ಧನು…
ನೀನಾದರೂ ಅಲಿಸುವುದನ್ನು ಕಲಿತುಕೋ.

೧೭)
ಬದುಕು…
ಬಡಿಸಿದ ಬಾಳೆ ಎಲೆಯಲ್ಲ
ಫಲವತ್ತಾದ ಖಾಲಿ ಹೊಲ
ಧನು
ಉತ್ತಿ ಬಿತ್ತಿ ಬೆಳೆ ಬೆಳೆಯಬೇಕು.

೧೮)
ತಾಯಿಯೇ ದೈವ
ತಾಯ್ನಾಡೇ ದೇಗುಲ
ತಾಯ್ನುಡಿಯೇ ಮಹಾಮಂತ್ರ
ಧನು…
ತಾಯಿಯೇ ಎಲ್ಲ; ತಾಯಿಯೇ ಬೆಲ್ಲ!

೧೯)
ಸುಮ್ಮನೆಯಿರಿ…
ಬೆಲೆ ಏರಿಕೆ ಗಗನಕ್ಕಂಟುತ್ತಿದ್ದರೂ
ಪ್ರಗತಿ ಪ್ರಪಾತಕ್ಕೆ ಜಾರುತ್ತಿದ್ದರೂ
ಧನು…
ಪ್ರಶ್ನಿಸುವುದು ಪರಮ ಪಾಪವಂತೆ!!!

೨೦)
ಕುಣಿಯಲು ಬಾರದವರು
ನೆಲವನ್ನೇ ಡೊಂಕು ಎನ್ನುವರು!
ಎಲ್ಲದಕ್ಕೂ ಕಾರಣ ಕರೋನ ಮಹಾಮ್ಮಾರಿ
ಧನು…
ಎಲ್ಲವೂ ರಾಷ್ಟ್ರದ ಹಿತಕ್ಕಾಗಿಯಂತೆ!!!

೨೧)
ಮಕ್ಕಳಿಗೆ ಆಸ್ತಿ ಮಾಡಬೇಡಿ
ಮಕ್ಕಳನ್ನೇ ಆಸ್ತಿಯಾಗಿ ಮಾಡಿ
ಸ್ನೇಹ-ಪ್ರೀತಿಗಳೇ ನಿಜವಾದ ಆಸ್ತಿಗಳು
ಧನು…


ವಯಸ್ಸೆಷ್ಟಾದರೂ ಮನಸ್ಸು ಮಗುವಿನಂತಿರಲಿ.

೨೨)
ಭಯವ ಬಿಡು
ಎದೆಯ ಕರೆಗೆ ಓಗೊಡು
ಕಾಯಕದ ತಪವ ಮಾಡು
ಧನು…
ಬದುಕು ಅದ್ಭುತಗಳ ನೆಲೆವೀಡು

೨೩)
ಮುಖವಾಡ ತೆಗೆದು ಬಿಸಾಕು
ನಗುವುದಾದರೆ ಮಗುವಿನಂತೆ ನಗು
ಅತ್ತರೂ ಕೂಡಾ ಮಗುವಿನಂತೆ ಅಳು
ಧನು…
ವಯಸ್ಸು ಹೆಚ್ಚಾದ ಮಾತ್ರಕ್ಕೆ ದೊಡ್ಡವನಾಗಲಾರೆ.

೨೪)
ಬಣ್ಣ…
ಯಾವುದೇ ಆಗಿರಲಿ
ಎಷ್ಟೇ ಗಾಢವಾದುದ್ದಾಗಿರಲಿ
ಧನು…
ಕೊನೆಗೆಲ್ಲಾ ಮಾಸಿಹೋಗುವವು.

೨೫)
ಪ್ರೀತಿ…
ಜಾತಿ-ಧರ್ಮಗಳಿಗೆ ಒಳಪಡುವುದಿಲ್ಲ
ಬಂಧನವಲ್ಲ; ಸ್ವಚ್ಛಂದವಾದ ನೀಲಾಕಾಶ
ಧನು…
ಪ್ರೀತಿಸುವುದೇ ಜೀವನ ಧರ್ಮ.


Leave a Reply

Back To Top