ಕಾವ್ಯ ಸಂಗಾತಿ
ಚಂದ್ರ ಏಕಾಂಗಿ!
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಅಗಣಿತ ಮಿರುಗು ತಾರಾಸಮೂಹದ
ಮಧ್ಯೆ ಇದ್ದೂ
ಬೆಳಕನೆ ಹೆತ್ತವರ ಚೊಚ್ಚಲ ಮಗನಂತಹ
ಚಂದ್ರ ಏಕಾಂಗಿ!
ಬದುಕು ಅದೆಂಥೆಂಥ ಕಠೋರ ಒಬ್ಬಂಟಿ
ಕರಾಳತೆ ಪ್ರಪಾತದಲಿ ಇದ್ದೂ
ಮನದ ಪ್ರಚಂಡ ನಿಗೂಢ ಕರಿನೆರಳ
ಜಾಜ್ವಲ್ಯಮಾನಕೆ ಕಾರಣ
ನಮ್ಮೊಳಗಿನ ಚಂದ್ರ!
ಜಗದ ಬೆಳಕ ಬೆರಳ
ಕಾಣಿಕೆ ಪಡೆದ ಗುರುವಿನ ಥರ
ಹುರಿದು ಉಣಲಿದ್ದ ಬಿಸಿಲ ಬೇತಾಳ
ಹುಚ್ಚು ಹರಿವಿನ ಬೀಸು ಬಿರುಗಾಳಿ ಮಳೆ
ಹೆಗಲೇರಿ ಮಡಿದ ಮರುಳ
ಮತ್ತೊಮ್ಮೆ ಬಂದೇ ಬರಲನುವಾದ ಚಂದ್ರ
ಎಲ್ಲ ತೊಡೆದು ಮತ್ತೆ ಮತ್ತೆ ಬೆಳಕ
ನಿರಂತರ ಸುರಿವ ಚಂದ್ರ!
ಹೌದು
ಚಂದ್ರ ಮೇಲಿರಲಿ
ನಮ್ಮೊಳಗಿರಲಿ
ಬ್ರಹ್ಮಾಂಡ ಬೆಳಗುವ ತಾರಾ ಬೆಳಕಿರಲಿ
ಜಗದುಗಮಾಂತ್ಯದ ವಿಸ್ತಾರಕು
ಉದ್ದುದ್ದ ರಾತ್ರಿರಾತ್ರಿಗಳಲಿ
ಒಬ್ಬಂಟಿ!
ನಿರಂತರ ಬೆಳಕ ಹೂಮಳೆ
ಎಂದೂ ಮರೆಯದೆ
ಸುರಿವ ಚಂದ್ರ
ಹೊರಗೂ ನಮ್ಮೊಳಗೂ
ಏಕೆ ಬರುವುದು ರಾತ್ರಿ ರಾತ್ರಿಗಳಲೆ?
ಹಗಲು ಉರಿವ ನೇಸರನ ಭಯವೇ?