ಕಾವ್ಯಸಂಗಾತಿ
ಎದ್ದು ಹೋದಳು ನನ್ನವ್ವ..
ಸುರೇಶ ಮಲ್ಲಾಡದ..
ಅಷ್ಟ ಮಕ್ಕಳ ಹೆತ್ತರೂ
ಹೆಣ್ಣಿಲ್ಲವೆಂಬ ಮೂದಲಿಕೆಯ
ಭಯ-ಬವ-ನೋವ ನುಂಗಿ
ಪರಿತಪಿಸಿದವಳು ನನ್ನವ್ವ..
ಹುಟ್ಟಿದ ಕೂಸಿಗೆ..
ಉಸಿರಿಲ್ಲ.. ಮಿಸುಕಲ್ಲ..
ಎಂದು ಬಟ್ಟೆಯೊಳು
ಮುದುರಿಟ್ಟಾಗ ಬಳಗ.
ಶರಣೆಯೊಬ್ಬಳು ನೋಡಿ
ಉಸಿರಿದೆ ಕೂಸಿಗೆ ಎಂದಾಗ
ಎದೆಗವಚಿ ಗೋಳಾಡಿ
ಹಾಲುಣಿಸಿದವಳು ನನ್ನವ್ವ..
ತುಂಬಿದ ಮನೆಯೊಳು
ಬದುಕು ನಡೆಸಿ. ಅನ್ಯರ ಜತನ
ಮಾಡುವಲ್ಲಿಯೇ ಜೀವ ಸವೆಸಿ.
ಮಕ್ಕಳ ಏಳಿಗೆಗೆ ಬಡತನ
ಅಡ್ಡಿ ಮಾಡಿತೆಂದು ಮರುಗಿ
ಕೊರಗಿದವಳು ನನ್ನವ್ವ…
ಊರ ತೊರೆದು. ಶಿಕ್ಷಣ ಪಡೆದು.
ನೌಕರಿ-ಪಡೆದ ಮಗನೊಡನೆ
ನೂರ್ಕಾಲ ಬಾಳಿ ಬದುಕಲಿಲ್ಲ
ಮಗನ ಆರೈಕೆ ತಪ್ಪಿಸಿ.
ಉಸಿರಿರೋವರೆಗೂ ಕೊರಗುವಂತೆ
ಮಾಡಿದಳಲ್ಲ ನನ್ನವ್ವ..
ಹೊತ್ತು. ಹೆತ್ತು. ಉದ್ದರಿಸಿ.
ನೆಮ್ಮದಿಯ ಬದುಕು
ಅನುಭವಿಸುವ ಮುನ್ನ
ಎದ್ದು ಹೋದಳು ನನ್ನವ್ವ..