ಕಾವ್ಯಸಂಗಾತಿ
ಅಮ್ಮ
ಶ್ರೀವಲ್ಲಿ ಮಂಜುನಾಥ್
ನಿನ್ನದು ಮಮತೆಯ ಮಡಿಲು, ಸ್ನೇಹದ ಒಲವಿನೊಡಲು,
ಭರವಸೆ ನೀಡುತ್ತಿದ್ದ ಬಿಗಿಹಸ್ತ! ಒಂದಿಷ್ಟು ಬಿಗಿ, ಒಮ್ಮೊಮ್ಮೆ
ನನ್ನ ಕನ್ನಡಿ ನೀನು .
ಅಮ್ಮ ಎಂದಾಗ ನೆನಪಾಗುವುದು ನವಿಲುಗರಿ, ಮೊಲದ ಮೈ, ಬಿರಿದ ಜಾಜಿಯ ಪರಿಮಳ, ಮೊದಲ ಮಳೆಯ ಘಮ.
ಅಮ್ಮ ನಿನ್ನದೋ ಮೃದು ಸ್ವಭಾವ, ಆದರೆ ನನಗೆ ಮಾತ್ರಾ ಹೂವಿನಂತೆ ಮೃದುವಾಗಿಯೂ, ವಜ್ರದಂತೆ ಗಟ್ಟಿಯಾಗಿಯೂ ಇರುವುದನ್ನು ನೀನೇ ಕಲಿಸಿದೆ. ನಾ ಸರಿಯಿದ್ದಾಗ ನನ್ನನ್ನು ನಾ ಸಮರ್ಥಿಸಿಕೊಳ್ಳುವಂತೆ ಮಾಡಿ ಅದರಿಂದ ನೋವಾದರೂ ಅಳದೆ, ಎದುರಿಸುವ ಶಕ್ತಿಯನ್ನು ನನ್ನಲ್ಲಿ ತುಂಬಿದವಳು ನೀನು. ಹೂವನ್ನು ಹೆಣ್ಣಿಗೂ, ದುಂಬಿಯನ್ನು ಗಂಡಿಗೂ ಹೋಲಿಸಿ, ಹೆಣ್ಣು ಎಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು, ನಾನು ಆರನೇ ತರಗತಿಯಲ್ಲಿ ಇರುವಾಗಲೇ, ಸೂಕ್ಷ್ಮವಾಗಿ ನನ್ನ ತಲೆಗೆ ತುಂಬಿದ್ದೇಕೆ ?
ನಿನಗೆ ಜೀವನದಲ್ಲಿ ಹೇಗೆ ಇರಬೇಕೆಂದು ಅನ್ನಿಸಿತ್ತೋ ಹಾಗಿರಲು ಸಾಧ್ಯವಾಗದೆ, ಜನರ ನಡುವೆ ಬಳಲಿ, ಆ ಕಷ್ಟ ನನ್ನ ಮಗಳಿಗೆ ಬರಬಾರದೆಂದು ನೀ ನನ್ನ ಈ ರೀತಿ ಬೆಳೆಸಿದೆಯಾ ? ಬದುಕಿನ ಒಳ-ಹೊರಗನ್ನು, ಚಿಕ್ಕ ವಯಸ್ಸಿನಲ್ಲಿಯೇ ನನಗೆ ನೀನು ತಿಳಿಸಿದ್ದು, ಆವಾಗ ಅರ್ಥವಾಗದಿದ್ದರೂ ದಿನ ಕಳೆದಂತೆ ನಾನು ಪ್ರತಿಯೊಂದನ್ನೂ ಅರಿಯಲು ಸಹಕಾರಿಯಾದದ್ದು ನಿನ್ನ ಮಾತುಗಳೇ ಅಲ್ಲವೇ ? ನಿನಗೆ ಗೊತ್ತಿತ್ತಾಮ್ಮಾ, ನನ್ನ ಹನ್ನೆರಡನೆ ವಯಸ್ಸಿನಲ್ಲಿಯೇ ನೀ ನನ್ನ ಬಿಟ್ಟು ದೂರವಾಗುವೆ ಎಂದು. ಮುಂದಿನ ಜನ್ಮದಲ್ಲಾದರೂ ನನ್ನ ತಾಯಿಯಾಗಿ ಬಂದು ನನ್ನಿಡೀ ಜೀವಮಾನ ನನ್ನೊಡನೆ ಕಳೆಯುವೆಯಾ ಪ್ಲೀಸ್ ?
ಹೆತ್ತವಳು ಜೊತೆ ಇದ್ದರೆ ಪ್ರಪಂಚವನ್ನೇ ಎದುರಿಸಬಹುದು ಅವಳೇ ಇಲ್ಲದಾಗ ಪ್ರಪಂಚವೇ ಶೂನ್ಯ ಹೌದು.ಅಮ್ಮನ ಧೈರ್ಯ ನಿಮ್ಮ ಜೊತೆಗೇ ಇತ್ತು ಅಂದುಕೊಳ್ಳುತ್ತೇನೆ.
ಧನ್ಯವಾದಗಳು