ಕಾವ್ಯಸಂಗಾತಿ
ಕಣ್ಣಿಗೆ ಕಾಣುವ ದೇವರು
ಸೋಮಲಿಂಗ ಬೇಡರ
ದೇವರು ತಾನು ಧರೆಯಲಿ ಇರಲು
ಆಗದ ಕಾರಣವು
ಅಕ್ಕರೆಯಿಂದ ಎಲ್ಲರ ಸಲುಹಲು
ಅಮ್ಮನ ಕಳಿಸಿಹನು
ಹುಟ್ಟಿದ ಜೀವಿ ಬಿಟ್ಟರೆ ಕಣ್ಣು
ಅಮ್ಮನೇ ಕಾಣುವಳು
ಬೆಚ್ಚನೆ ಮಡಿಲಲಿ ಮೆತ್ತಗೆ ಸಾಕಿ
ಬದುಕಲು ಕಲಿಸುವಳು
ಕರುಳಿನ ಕುಡಿಗಳ ಏಳ್ಗೆಗೆ ಸತತ
ಶ್ರಮವನು ವಹಿಸುವಳು
ಕಷ್ಟಗಳೆಷ್ಟೇ ಬಂದರು ಸಹಿತ
ನುಂಗುತ ಸಾಗುವಳು
ಅಮ್ಮನ ಪ್ರೀತಿಗೆ ಬೆಲೆಯನು ಎಂದಿಗು
ಕಟ್ಟಲು ಆಗುವುದೆ?
ಬಗೆಬಗೆ ವಸ್ತು ಕೊಳ್ಳುವ ಹಾಗೆ
ಅಮ್ಮನ ಕಾಣುವುದೆ?
ಭೂಮಿಯ ತೂಕದ ಅಮ್ಮನು ಎನ್ನುವ
ಹೆಸರಿಗೆ ಭಾಜನಳು
ಕಣ್ಣಿಗೆ ಅನುದಿನ ಕಾಣುವ ದೇವರು
ಸಕಲರ ಹೆತ್ತವಳು
ತಾಯಿಯ ಋಣವ ತೀರಿಸಲಾಗದು
ಜಗದಲಿ ದೊಡ್ಡವಳು!
ಅಮ್ಮನ ಚರಿತೆಯ ಬರೆಯಲು ಕುಳಿತರೆ
ನಿಲುಕವು ಶಬ್ಧಗಳು!
————————-
ವಾವ್ ಒಂದೊಂದು ಪದವೂ ಅರ್ಥಪೂರ್ಣ. ಸುಂದರ ಕವನ ಸರ್.