ಲೇಖನ
ನನ್ನವ್ವ ಬುರ್ರಕಥಾ ಕಮಲಮ್ಮ
ಶಿವರಾಜ್ ಮೋತಿ
ಬುರ್ರಕಥಾ ಹಾಡುಗಾರ್ತಿ, ಜನಪದ ಕಲಾವಿದೆ ಅಷ್ಟೇ ಅಲ್ಲದೇ ಜನಪದ ವೈದ್ಯೆಯೂ ಕೂಡ.. ಇಂದು ಇಲ್ಲಿ ಕಾಣುವ ಹುಡುಗನಿಗೆ ಗುರ್ಮಿಗಳಾಗಿವೆ ( ತಲೆತುಂಬ ಗಾಯ-ಮೈತುಂಬ ಗುಳ್ಳೆ) ಎಷ್ಟೇ ದವಾಖಾನೆಗೆ ತೋರಿಸಿದ್ರೂ ಮಾಯದಿದ್ದಾಗ, ಯಾರೋ ನೋಡಿ ನನ್ನವ್ವ ಕಮಲಮ್ಮನಿಗೆ ತೋರಿಸಿ ಚೊಲೋ ಆಗ್ತದೆ ಎಂದಿದ್ದಾರಂತೆ. ಮುಂಜಾನೆ ಬಂದಿದ್ರು ನೋಡಿ ಕಂಡುಹಿಡಿದು ಸಂಜೆಗೆ ಬನ್ನಿ ಗುರ‌್ಮಿಯಾಗಿವೆ, ಚುಟುಕೆ ಇಟ್ಟರೆ ಸರಿ ಹೋಗುತ್ತೆ ಎಂದಿದ್ದರು..
ಈ ಹುಡುಗನಿಗೆ ಕತ್ತಿನಲ್ಲಿ ಆದ ಗುಳ್ಳೆಗಳಿಗೆ ಬೇವಿನ ಕಡ್ಡಿಯನ್ನು ಸ್ವಲ್ಪ ಸುಟ್ಟು ಚುಟುಕೆ ಇಟ್ಟರು. ಆ ಹುಡುಗ ಮಾತ್ರ ಅಂಜಿ ಯಮ್ಮಾ ಕೈಮುಗಿತಿನಿ ಬೇಡವೆಂದಾಗ ಅವನ ತಾಯಿ ಇನ್ನೆಲ್ಲೂ ತೋರಿಸೋದಿಲ್ಲ ನೋಡು ಎಂದು ಭಯಪಡಿಸಿದಾಗ (ಈಗಾಗಲೇ ಆಸ್ಪತ್ರೆಗೆಲ್ಲ ತೋರಿಸಿ ಹಣ ಕಳೆದುಕೊಂಡರೂ ಗುಣವಾಗಿಲ್ಲ) ಅಳುತ್ತಾ-ಚೀರುತ್ತಾ ಚಿಟುಕೆ ಇಟ್ಟಿಸಿಕೊಂಡನು.. ಇನ್ನೊಂದು ನಾಲ್ಕು ದಿನದಲ್ಲಿ ಪೂರ್ಣ ಗುಣವಾಗಬಹುದು..
ಈ ತರಹ ಎಲ್ಲ ದಿನವೂ ಮಾಡುವುದಿಲ್ಲ, ವಾರನೋಡಿ (ಉದಾ: ರವಿವಾರ, ಬುಧುವಾರ) ಮಾಡುತ್ತಾರೆ. ಯಾವುದೇ ಹಣವೂ ಸಹ ತೆಗೆದುಕೊಳ್ಳುವುದಿಲ್ಲ. ಅವರಾಗಿ ಹಣದ ಬದಲು ಏನಾದರೂ ಕೊಡಿಸಿದರೆ, ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತಾರೆ. ನಾವಾಗಿ ಹಣ ತೆಗೆದುಕೊಂಡರೆ ಮತ್ತು ಕೇಳಿದರೆ ನಾವು ಮಾಡುವ ಕೆಲಸ ಹುಸಿಯಾಗುತ್ತದೆ ಎಂದು ಬಲವಾಗಿ ನಂಬಿದ್ದಾರೆ.
ಎಷ್ಟೋ ವರುಷದಿಂದ ಸಾಕಷ್ಟು ಕಾಯಿಲೆಗಳಿಗೆ ಔಷಧಿ ನೀಡುತ್ತಾ ಈ ಕಾಯಕ ಮಾಡುತ್ತಲೇ ಬಂದಿದ್ದಾರೆ. ನನ್ನವ್ವನ ಕೈಯಲ್ಲಿ ಚಿಕ್ಕಮಕ್ಕಳಿಗೆ ತೋರಿಸಿಕೊಂಡು ಗುಣವಾದವರು ಬಹುತೇಕರು ಇಂದು ಕೈಮುಗಿದು ದೇವರಮ್ಮಾ ನೀ ಅಂತಾರೆ. ಎಷ್ಟೋ ಜನಕ್ಕೆ ಗುಣಪಡಿಸಿ ಅವರಿಗೆ ದೇವರಾಗಿದ್ದಾರೆ. ಪ್ರತಿಫಲ ಬಯಸಿಲ್ಲ, ಬಂದವರಿಗೆ ಗುಣಪಡಿಸದೇ ಇರುವ ಒಂದು ಉದಾಹರಣೆ ಸಹ ಇಲ್ಲವಂತೆ..
ಎಷ್ಟೋ ಮಕ್ಕಳ ತಾಯಿ ನನ್ನವ್ವ
ನಮ್ಮ ಹೆಮ್ಮೆ ತಾಯಂದಿರ ದಿನದ ಶುಭಾಶಯಗಳು
ಪುಣ್ಯದಿಂದ ಕೆಲವರು ಜನ್ಮ ತಾಳುತ್ತಾರೋ ಏನೋ ತಾಯಂದಿರ ದಿನದಂದು ಅಮ್ಮನ ಕುರಿತು ಪರಿಚಯಿಸಿದ್ದಿಯಪ್ಪ. ನಿನ್ನ ಅಮ್ಮನ ಈ ಕಾಯಕಕ್ಕೆ ಅಭಿನಂದನೆಗಳು. ಶಿವರಾಜ್ ನಿನ್ನ ಬರವಣಿಗೆ ಮುಂದುವರಿಯಲಿ.