ಕಾವ್ಯ ಸಂಗಾತಿ
ಅಮ್ಮಂದಿರ ದಿನದ ವಿಶೇಷ
ಮರುಭೂಮಿ ನನ್ನಮ್ಮ
ಆಶಾ ದೀಪ
ಫಲವತ್ತಾದ ಮಣ್ಣಾ..ಅಲ್ಲಾ
ನನ್ನಮ್ಮ ,
ಮರಳುಗಾಡಿನ ಮರುಭೂಮಿ ..
ಬಿರಿವ ಬಿಸಿ ಬಿರುಗಾಳಿ ಬಿರುಸಿಗೆ
ಆಕಾರ ಪಡೆದು ನಡೆದವಳು…
ಕತ್ತಲ ಚಳಿಯಲಿ ಹನಿದಿಬ್ಬನಿಯನೇ
ಕುಡಿದದನಾರದಂತೆ ಒಡಲೊಳಗೆ
ಊಟೆಕಟ್ಟಿಟ್ಟುಕೊಂಡವಳು..
ಹಿತಶತ್ರು ರವಿಯ ಬಿಸಿಲಿಗೆ
ಅವಳಾ ಮುಖವೂ ಹೊಳೆದರೆ,
ಉರಿಗೆ ಸುಡುತ್ತಿತ್ತು ಅವಳೆದೆ..!
ಊರುಟುರುಟು ಚರ್ಮ,
ಸ್ಪರ್ಶಕೆ ಸಿಗದ ಭಾವ …
ಮೆಚ್ಚಲು ಏನಿತ್ತವಳಲ್ಲೀ
ಹಸಿರೊಡಲ ಕಾನನವೇ…?
ಹರಿವ ನದಿಯ ನಿನಾದವೇ..?
ಹು..ಹೂ ಏನೂ ಇರ್ಲಿಲ್ಲ..
ಪಾಪಾಸುಕಳ್ಳಿಯ ಮರಳ
ಉಬ್ಬತಗ್ಗಿನ ದಿಬ್ಬಗಳ ಬಿಟ್ಟು…
ಆದರೂ ಹೆಮ್ಮೆಯಿದೆ ..
ಅವಳೆ ನನ್ನಮ್ಮಾ. ಹೆತ್ತಮ್ಮಾ
ಮರಳುಗಾಡಿನ ಮರುಭೂಮಿ
ನಾ ಆ ನೆಲದ ಹಣ್ಣು…ಹೆಣ್ಣು……
ಅವಳೆದೆಯ ಊಟೆಯ ಹೀರಿ
ಬೆಳೆದ ಖರ್ಜೂರದ ಗಿಡ.. …..
ಸೂಪರ್ ಮೇಡಂ ನಿಮ್ಮ ಭಾವನೆಗಳು…!