ಕಾವ್ಯಸಂಗಾತಿ
ಅಮ್ಮಂದಿರ ದಿನದ ವಿಶೇಷ
ಅಮ್ಮ
ನಾಗರತ್ನ ಎಂ ಜಿ
ಇನ್ನಷ್ಟು ದಿನ ನೀನು
ಇರಬೇಕಿತ್ತು ಅಮ್ಮ
ನಮ್ಮ ಸುಖದಲ್ಲಿ ಪಾಲು
ನಿನಗಿತ್ತು ಅಮ್ಮ
ಹತ್ತಕ್ಕೆ ಮದುವೆ
ಇಪ್ಪತ್ತಕ್ಕೇ ನಾಲ್ಕು ಕೂಸು
ಕಂಡದ್ದು ಕೊಳ್ಳುವಂತಿಲ್ಲ
ಆಸೆ ಪಟ್ಟಿದ್ದು ತಿನ್ನಲಿಲ್ಲ ಅಮ್ಮ
ಪ್ರೀತಿಸುವ ಪತಿ
ಮಮತೆಯ ಮಕ್ಕಳು
ಇಷ್ಟೇ ನಿನ್ನ ಆಸ್ತಿ ಅಮ್ಮ
ಪತಿಯಾಸರೆ ಇಲ್ಲವಾದಾಗ
ಧೃತಿಗೆಡಲಿಲ್ಲ ಅಮ್ಮ
ಮನೆಗಷ್ಟೇ ಮೀಸಲು ಹೆಣ್ಣು
ಎನ್ನುವ ಕಾಲ….
ದುಡಿದು ಎಲ್ಲರ ಸಾಕುವ
ಹೊಣೆ ಹೊತ್ತೆ ಅಮ್ಮ
ಸಿಟ್ಟೆoಬುದು ನಿನ್ನ ಮೂಗಿನ
ತುದಿಯಲ್ಲಿ ಅಮ್ಮ
ಅಸಹಾಯಕತೆಯೇ ಸಿಟ್ಟಾಗಿತ್ತೆಂದು
ಅಂದು ತಿಳಿಯಲಿಲ್ಲ
ನಮಗೆ ಅಮ್ಮ
ಬೇಕು ಬೇಡ
ಪೂರೈಸುವ ಹೆಣಗಾಟದಲ್ಲಿ
ಸೋತು ಸುಣ್ಣವಾದೆ ಅಮ್ಮ
ವಿದ್ಯೆ ಎಂಬ ಆಸ್ತಿ ಮಾತ್ರ ಕೈಗಿತ್ತು
ಇಷ್ಟೇ ಎಂದು ಕೈ ಚೆಲ್ಲಿದೆ ಅಮ್ಮ
ನೀ ಕೊಟ್ಟ ಆಸ್ತಿಯೇ
ನಮಗಾಸರೆ ಅಮ್ಮ
ನೆರಳಾಗ ಬಯಸಿದಾಗ
ಸದ್ದಿಲ್ಲದೇ ದೂರವಾದೆ ಅಮ್ಮ
ಕಷ್ಟ ಕೋಟಲೆ ಮರೆಸಿ
ಸುಖವಾಗಿಡುವ ನಮ್ಮಾಸೆ
ಕನಸಾಗಿಯೇ ಉಳಿಸಿ ಹೋದೆ ಅಮ್ಮ
ಇನ್ನಷ್ಟು ದಿನ ಇರಬೇಕಿತ್ತು
ನೀನು ಅಮ್ಮ
ನಿನ್ನ ಕಾರ್ಪಣ್ಯ ಮರೆಸುವ
ಸಂತಸದ ದಿನಗಳನ್ನು
ಕಾಣಬೇಕಿತ್ತು ಅಮ್ಮ
ಕಷ್ಟವನ್ನಷ್ಟೇ ಬರೆಸಿಕೊಂಡು
ಬಂದೆಯಾ ಅಮ್ಮ?
ಕತ್ತಲೆಯ ನಂತರ ಬೆಳಕು
ಕಾಣಲೇ ಇಲ್ಲ ನೀ ಅಮ್ಮ
ಸುಖದ ಬೆನ್ನತ್ತುವಲ್ಲಿ
ವ್ಯಸ್ತರಾದೆವು ಅಮ್ಮ
ನಿನ್ನ ಒಂಟಿತನ
ನೀಗಲೇ ಇಲ್ಲ ಅಮ್ಮ
ಸುಖವಾಗಿ ಉಸಿರಾಡುವಾಗ
ಅನಿಸುವುದಿಷ್ಟೇ ಅಮ್ಮ
ಈ ಸುಖವ ನೀ ಕಾಣಲೇ
ಇಲ್ಲ ಅಮ್ಮ
ಹೋದಾಗ ಮಾತ್ರ
ಅರಿವಾಗುವುದು ತಪ್ಪೇಕೆ ಅಮ್ಮ
ಇದ್ದಾಗ ತಿದ್ದಿಕೊಳ್ಳಲಿಲ್ಲ
ನಾವೇಕೆ ಅಮ್ಮ??
ಅಷ್ಟು ಅವಸರ ಏನಿತ್ತು ಅಮ್ಮ??
ಇನ್ನಷ್ಟು ದಿನ ನೀನು
ಇರಬೇಕಿತ್ತು ಅಮ್ಮ
ಕಿಂಚಿತ್ ಋಣ ತೀರಿಸುವ
ಭಾಗ್ಯ ಕೊಡಬೇಕಿತ್ತು ಅಮ್ಮ
ಇನ್ನೊಂದು ಜನುಮಕ್ಕೆ
ಕಾಯಲಾರೆವು ಅಮ್ಮ
ಈ ಜನುಮದಲ್ಲಿ ಇಷ್ಟು ಬೇಗ
ಏಕೆ ಹೋದೆ ಅಮ್ಮ??
ಇನ್ನಷ್ಟು ದಿನ ನೀನು
ಇರಬೇಕಿತ್ತು ಅಮ್ಮ….
..ನಾಗರತ್ನ ಎಂ ಜಿ
ಭಾವಪೂರ್ಣ,ಮನತಟ್ಟಿತು ಕವನ,ಅಮ್ಮ ಎಷ್ಟು ವರುಷ ಇದ್ದರೂ ಇನ್ನು ಬೇಕೆನಿಸುವುದು ಸತ್ಯ. ಮಾಲತಿಶ್ರೀನಿವಾಸನ್
ಧನ್ಯವಾದಗಳು ಮೇಡಂ