ಕಾವ್ಯಯಾನ

ಗಝಲ್

ಜಗತ್ತೇ ತನ್ನ ಸುತ್ತ ಸುತ್ತುತಿದೆ ಎಂದಾಗ ಹೊರಟು ಬಿಡಬೇಕು
ಎಲ್ಲೆಲ್ಲೂ ಪ್ರೀತಿ ನೋಟವಿದೆ ಎಂದಾಗ ಹೊರಟು ಬಿಡಬೇಕು

ಇಂದ್ರಚಾಪ ಮೂಡಿಸುವ ಹಗಲಿರುಳುಗಳೇನು ನಿರಂತರವೇ
ಇಂದಿಗಿಂದಿನ ಬದುಕು ರಂಗೇರಿದೆ ಎಂದಾಗ ಹೊರಟು ಬಿಡಬೇಕು

ಸುಖ ಸಂತಸಗಳು ಪ್ರತಿ ವರುಷ ಬರುವ ವಸಂತನ ತರವೇನು
ಹರುಷ ನಲಿ ನಲಿದು ಉಕ್ಕುತಿದೆ ಎಂದಾಗ ಹೊರಟು ಬಿಡಬೇಕು

ಎದೆಗೂಡ ಭಿತ್ತಿಯಲಿ ಒಲುಮೆ ಉಲಿವಾಗ ಸ್ವರ್ಗವೂ ನಾಚದೇನು
ಸಮುಲ್ಲಾಸದಿ ಜೀವ ಗಂಧ ತೀಡುತಿದೆ ಎಂದಾಗ ಹೊರಟು ಬಿಡಬೇಕು

ಇನಿಯನ ಉಸುರುಸಿರ ಬಿಸುಪು ಬೀಗಿ ಮೈ ಮನ ಮರೆಸದಿರದೇ
ಕನಸು ಕಚಗುಳಿಯಿಟ್ಟು ಮಾಗುತಿದೆ ಎಂದಾಗ ಹೊರಟು ಬಿಡಬೇಕು

ಹೊಸತನವ ತುಂಬುವ ಸೂರ್ಯನ ಪ್ರತಿ ಹುಟ್ಟೂ ವಿಸ್ಮಯಾತೀತ 
ಬೆಳಕು ತರುವ ಬೆಳಗಲ್ಲಿ ಬೆಡಗಿದೆ ಎಂದಾಗ ಹೊರಟು ಬಿಡಬೇಕು

ಲೋಕದ ಲೇಸರ್ ಕಣ್ಣುಗಳಲ್ಲಿ ಸದಾ ಮುಂಚೂಣಿಯಲ್ಲಿರಲು ಹೇಗೆ ಸಾಧ್ಯ
ತನ್ನಿರುವೇ ಸುತ್ತಲೂ ಖುಷಿ ತರುತಿದೆ ಎಂದಾಗ ಹೊರಟು ಬಿಡಬೇಕು 

ಮನ ಮನಗಳಲ್ಲಿ ಮನೆ ಮಾಡಿ ಮುದವನ್ನೇ ಸೂಸಬೇಕು ಸಹೃದಯದಿ
ಸೌಖ್ಯ, ಸ್ವಾಸ್ಥ್ಯ, ಭಾಗ್ಯ ಬಾಚಿ ತಬ್ಬುತಿದೆ ಎಂದಾಗ ಹೊರಟು ಬಿಡಬೇಕು

“ಸುಜೂ” ಳ ಬಾಳು ಸೊಗದಿ ಭವ ಭಾವದೊಳು ಬೆರೆತು ಜಿಗಿಯುತಿದೆ
ಇನ್ನೇನು ಸಕಲವೂ ಇಲ್ಲಿಲ್ಲೇ ಒದಗಿದೆ ಎಂದಾಗ ಹೊರಟು ಬಿಡಬೇಕು.

************

ಸುಜಾತಾ ಲಕ್ಮನೆ

Leave a Reply

Back To Top