ಕಾವ್ಯಸಂಗಾತಿ
ಅಮ್ಮಂದಿರ ದಿನದ ವಿಶೇಷ
ತಾಯಿಯ ಪ್ರೀತಿ
ಭಾರತಿ ಕೇ ನಲವಡೆ
ನವಮಾಸದಿ ನನ್ನನು ಗರ್ಭದಿ ಹೊತ್ತು
ಸಾವು ಬದುಕಿನ ನಡುವೆ ಸೆಣಸಾಡಿ ಗೆದ್ದು
ಕರುಳ ರಕ್ತವ ಬಸಿದು ಭಾವದೆಳೆಗಳ ಹೊಸೆದು
ನನಗೆ ಜನ್ಮ ನೀಡಿದೆ ಹೇಗೆ ತೀರಿಸಲಿ?ಋಣ ಅಮ್ಮ
ಸಂಸ್ಕಾರದ ಅಡಿಪಾಯದ ಮೇಲೆ
ನಿನ್ನ ತ್ಯಾಗ ಮಮತೆಯ ಮೌಲ್ಯಗಳ ನೆಲೆ
ಎಲ್ಲ ತಪ್ಪುಗಳ ನಗುತ ಮನ್ನಿಸಿ ತಿದ್ದಿದೆ ನೀನು
ಎಂಥ ಅದ್ಭುತ! ತಾಯಿಯ ಪ್ರೀತಿ ಬಣ್ಣಿಸಲಾಗದು
ಬಾಲ್ಯದಲಿ ನನ್ನನು ಕಪ್ಪೆಚಿಪ್ಪಿನ ಮುತ್ತಾಗಿಸಿದೆ
ಯೌವನದಲಿ ಭವಿಷ್ಯದ ಗುರಿಯ ಸೊತ್ತಾಗಿಸಿದೆ
ಮೊದಲ ಗುರುವಾಗಿ ಬಾಳಿಗೆ ಬದುಕ ಸವೆಸಿದೆ
ಸಹನೆಯ ನಡೆನುಡಿಗೆ ನೀ ಸ್ಫೂರ್ತಿಯಾದೆ
ಕಣ್ಣಿಗೆ ಕಾಣುವ ದೇವರು ನೀನೆ ಅಮ್ಮ
ಸಂಸಾರನೌಕೆಯ ಏರಿಳಿತಗಳಲಿ ನಗೆಯ ಸೂಸಿ
ಮನೆತನದ ಗೌರವಕೆ ಬಸವಳಿದು ಗೆಲ್ಲಿಸಿದೆ
ನಿನ್ನ ಪಾದಧೂಳೇ ನನ್ನ ಬದುಕಿಗೆ ಶೃಂಗಾರ!
ಆತ್ಮವಿಶ್ವಾಸದ ಆಭರಣ ತೊಡಿಸಿದೆ
ನಿನಗಿಂತ ಬಂಧುವಿಲ್ಲ ನನ್ನ ದೈವ ನೀನು
ವೃದ್ದಾಪ್ಯದಲಿ ನಿನ್ನ ನನ್ನೊಡಲ ಮಗುವಾಗಿಸುವೆ
ಮನನೋಯಿಸದೇ ಸಲಹುವೆ ಬಿಡದೇ ಎಂದಿಗೂ