ಅಮ್ಮಂದಿರ ದಿನದ ವಿಶೇಷ

ಅಮ್ಮಂದಿರ ದಿನದ ವಿಶೇಷ

ಉಸಿರಿಗೆ ಹೆಸರಿವಳೇ…. ಅವ್ವ!

ಸರೋಜಾ ಶ್ರೀಕಾಂತ್ ಅಮಾತಿ

ವರುಷಕ್ಕೆರಡು ಬಾರಿಯಾದ್ರು ಶುಭದ ಹರುಷ ಹೊತ್ತು, ತಾ ಹೆತ್ತ ಕರುಳ ಬಳ್ಳಿಯ ಪ್ರೀತಿಯ ಹೆಸರಿಗೆ ತವರೂರಿನ ಬೇರಿನ ಹಸಿರಿನಿಂದ ಅರಿಶಿಣ, ಕುಂಕುಮ,ಬಳೆ, ಹೂವು ತಲುಪಬೇಕು ಎಂಬುದು ಅವ್ವನ ಸದಾಶೆ.ಅವಳ ಅಭಿಲಾಷೆಯಂತೆ ಸುಮಾರು ಐನೂರಕ್ಕಿಂತ ಹೆಚ್ಚು ದೂರದ ದಾರಿ ಕ್ರಮಿಸಿ,ಸೂರ್ಯೋದಯಕ್ಕೂ ಮುಂಚೆಯೇ ಮನೆ,ಮನ ಸೇರುವ ಗುಲಾಬಿ,ಮಲ್ಲಿಗೆ,ಅಬೂಲಿ (ಕನಕಾಂಬರ)ದ ಹೂಗಳೆಲ್ಲ ಅವಳುಸಿರಿನ ಜೊತೆಗೆ ಅವಳ ಸ್ಪರ್ಶವನ್ನೂ ಕಾಪಿಟ್ಟುಕೊಂಡು ಹೊಳೆವ ಸ್ಟೀಲ್ ಡಬ್ಬದಲ್ಲಿ  ಸ್ನೇಹದ ಬಂಧಿಯಾಗಿರುವ ಅವೆಲ್ಲವನ್ನು ಒಂದೊಂದಾಗಿ ಮೆಲ್ಲನೆ ಬಿಡಿಸಿ,ತೆಗೆದಿರಿಸುವಾಗ ಅವ್ವ ಬಳಿಗೆ ಬಂದಷ್ಟೇ ಖುಷಿ ನನಗೆ. ಪ್ರೀತಿಯಿಂದ ಅವ್ವನಕ್ಕರೆ ಹೊತ್ತು ಬಂದ ಮೊಗ್ಗುಗಳೆಲ್ಲ ಅವಳ ವಾತ್ಸಲ್ಯ,ಮಮತೆಯ ಬಾಂಧವ್ಯದಲೆಗೆ ಸೋತು ಇಗೋ ಅವಳ ಕೂಸಾದ ನಿನಗೂ ಈ ಬಂಧನದ ಪರಿಮಳದಲ್ಲಿ ತುಸು ಪಾಲಿದೆ ಅಂತ ಏನೋ ನನ್ನ ಕೈ ಸೇರುತ್ತಲೇ ಅವರಳಿ ಹೂವಾದವೇನೋ ಎಂಬಂತೆ ಪ್ರತಿ ಬಾರಿ ನನಗೆ ಭಾಸವಾಗುತ್ತದೆ.ಎರಡು- ಮೂರು ದಿನವಾದರೂ ಬಾಡದ ಅಬೂಲಿ ಹೂ  ಮುಡಿಯುವಾಗಲೆಲ್ಲ  ಅವ್ವ ಸದಾ ಗುನುಗುನಿಸೋ ಹಾಡೊಂದು ಹಾಗೇ ಕಣ್ಮುಂದೆ ತೇಲಿ ಬರುತ್ತದೆ.

ಬಾದಾಮಿ ಎಲಿ ಎಲ್ಲ ಬಾಡಿ,ಬಾಡಿ ಹೋಗುವಾಗ ಬೇಡಿದರೇನಾಗುದ!?….

ಚಂದಕ ನನ್ನ ತವರವರು ಚೆಂಡುವ್ವ ಬಿತ್ಯಾರು,ಗಿಡಕೊಂದ ಗಿಣಿಯ ಸಲುಹ್ಯಾರು…. ಗಿಡಕೊಂದ ಗಿಣಿಯ ಸಲುಹ್ಯಾರು ಅವರು ಗಿಣಿ ನೋಡಿ ನನ್ನ ಮರತಾರು!. ಇದು ಜನಪದ ಗೀತೆ. ತವರಿನಿಂದ ತುಂಬಾ ದಿನ ದೂರವಿರೋ ಹೆಣ್ಮಗಳು ಹಾಡಿರಬಹುದು?… ಹಾಗಂತ ಅವಳ ಮತ್ತು ತವರೂರಿನ ಬಂಧ ಅಷ್ಟು ಸುಲಭವಾಗಿ ಮರೆಯುವಂತದ್ದಲ್ಲ.ಹೆಣ್ಣಿನ ಮತ್ತು ತವರಿನ ಅನನ್ಯತೆಯ ಸಂಬಂಧ ಎಂದೂ ಮುಗಿಯದು.ಅಂತ ಅವ್ವ ಯಾವಾಗ್ಲೂ ಹೇಳ್ತಿರ್ತಾಳೆ.

ಕಷ್ಟ,ನಷ್ಟ ಏನೇ ಇದ್ರು ಮಕ್ಕಳು ಸುಖವಾಗಿ ಇರಲಿ ಅನ್ನೋ ಮಾತೃ ಹೃದಯದ ಈ ಋಣ ಎಷ್ಟು ಜನ್ಮ ಎತ್ತಿ ಬಂದರೂ ತೀರಿಸಲಾಗದು.ಅವಳೇ ಕಲಿಸಿಕೊಟ್ಟ ಈ ತೊದಲು ನುಡಿಗಳಿಗೂ,ಅವಳಿಗೂ ಶರಣೆನ್ನುತಾ ಶಿರಬಾಗಿ ವಂದಿಸುವೆ. ಮುಂದಿನ ಜನುಮ ಅಂತೇನಾದ್ರು ಆ ಶಿವ ಕರುಣಿಸಿದರೆ ಉಸಿರಿನ ಈ ಹೆಸರಿಗೆ ,ನಾನುಸಿರಾಗಿ ನನ್ನೊಡಲಿನ ಆಸರೆಯಲ್ಲಿ ಆಸೆಯ ಕೂಸಾಗಿಸವಳನ್ನ ಅಂತ ಬೇಡಿಕೊಳ್ಳುವೆ ದೇವರಲ್ಲಿ.


ಸರೋಜಾ ಶ್ರೀಕಾಂತ್ ಅಮಾತಿ

Leave a Reply

Back To Top