ಜೀವನಪಾಠ, ಅರುಣಾ ರಾವ್

ಅಮ್ಮಂದಿರ ದಿನದ ವಿಶೇಷ

ಜೀವನಪಾಠ

ಅಮ್ಮನೆಂಬ ಎರಡಕ್ಷರ ಅದೆಷ್ಟು ಆಳ
ತೋಡಿದಷ್ಟೂ ಮಮತೆ
ಅಗೆದಷ್ಟೂ ಒರತೆ
ಎದೆಯೊಳಗೆ ಬಚ್ಚಿಟ್ಟು ನೋವ ಕಾವು
ಬೀರುವಳು ತಂಬೆಲರು ಮನಕೆ
ವಿಷಾದದ ಅಲೆಗಳುಕ್ಕಿ ಭೋರ್ಗರೆಯುತ್ತಿದ್ದರೂ
ಸೊರಗಗೊಡಳು ಎಮ್ಮ ಬಾಳ ಲತೆ

ಬದುಕ ಬಂಡಿಯ ನೊಗವ
ಒಂಟಿಯಾಗಿ ಹೊತ್ತು ಸಾಗಿದವಳು
ಪಯಣಿಗರ ಭಾರ ಸಹಿಸುವುದು
ಅಂದುಕೊಂಡಷ್ಟು ಸರಳವೇನಲ್ಲ
ಕತೆ ಕವನ ಹಾಡು ಹಸೆ ಸಿನಿಮಾ ನಾಟಕ
ಯಾವುದಕ್ಕೂ ಇಲ್ಲ ಅವಳಲ್ಲಿ ಸಮಯ
ಹಗಲಿರುಳ ಭೇದ ಮರೆತು ದುಡಿದರೇನೇ
ತುಂಬಿಸಬಲ್ಲಳು ತನ್ನ ನಂಬಿದ ಮಕ್ಕಳ ಉದರ

ಒಮೊಮ್ಮೆ ಈರುಳ್ಳಿ ಸೊಂಕಿಗೆ ಮತ್ತೊಮ್ಮೆ
ಬದುಕಿಗೆ ಕಟ್ಟಬೇಕಾದ ಸುಂಕಕ್ಕೆ 
ಹರಿಯುತಿಹುದು ಕಣ್ಣೀರ ಕೋಡಿ 
ಬೈತಿಡುವಳೇಕೋ ಸೆರಗಿನ ಮರೆಯಲ್ಲಿ
ಒಂಟಿತನದ ಬೇಗೆ ಸುಡುತಿದೆ ಬಾಳ ಕಾಯ
ಪ್ರಪಂಚದ ಹಸಿದ ಕಂಗಳು ನುಂಗುತಿವೆ
ಜಗದ ಬಾಯಿಗೆ ಇವಳಾಗಿ ಉಪ್ಪಿನಕಾಯಿ
ತಪ್ಪು ಒಪ್ಪುಗಳಿಗೆ ಕಿವುಡಾಗಿ ಹನಿಗಣ್ಣಾಗಿ
ತುಳಿಬೇಕಿದೆ ಮುಳ್ಳಿನ ಹಾದಿ 

ಶಾಲೆಯೇನು ಕಲಿಸೀತು ಜೀವನ ಪಾಠ
ನನ್ನಮ್ಮನ ಬಾಳು ಪ್ರತ್ಯಕ್ಷ ಪಠ್ಯ
ಸಂಸಾರ ತೆಪ್ಪ  ಸಿಲುಕಿದಾಗ ಸುಳಿಗೆ
ಅಳುಕಲಿಲ್ಲ  ಈಜು ಬಾರದಿದ್ದರೂ 
ಶಾಲೆ ಕಲಿಯದಿದ್ದರೂ
ದಡ ಸೇರಲೇ ಬೇಕಾದ ಅನಿವಾರ್ಯತೆ
ಕಲಿಸಿತ್ತು ಅವಳಿಗೆ ಈಜೊ ಹಠ
ಉಸಿರ ಬಿಗಿ ಹಿಡಿದು ಸೋತರೂ ಕಾಲು ಬಡಿದು 
ಮುಂದುವರಿದರೇನೆ ಉಳಿಯುವುದೀ ಬಾಳು


ಅರುಣ ರಾವ್

One thought on “ಜೀವನಪಾಠ, ಅರುಣಾ ರಾವ್

Leave a Reply

Back To Top