ಮಾವಿನ  ಕಾಯಿ – ಹಣ್ಣು

ಲೇಖನ

ಮಾವಿನಕಾಯಿ – ಹಣ್ಣು

ನೂತನಕುಲಕರ್ಣಿ

ಮಾವಿನ  ಕಾಯಿಹಣ್ಣು

             “ಆಂಟಿ , ಆಂಟಿ ” ಅಂತ ಯಾರೋ ಗೇಟ ಹೊರಗಿಂದ ಒದರೋದ ಕೇಳಿಸಿತು. ಯಾರ ನೋಡೋಣಂತ  ಗೇಟಿಗೆ ಬಂದೆ. ಎಂಟರಿಂದ ಹನ್ನೆರಡ ವರ್ಷದೊಳಗಿನ ಮೂರು ಹುಡುಗ್ರು ನಿಂತಿದ್ರು. “ಯಾಕ್ರೋ , ಯಾರ ನೀವು ? ಏನ ಬೇಕಿತ್ತು?” ಅಂತಂದೆ.” ” ಆಂಟಿ , ಮಾವಿನ ಕಾಯಿ ಬೇಕಿತ್ತು .ಅವ್ದಾ ಹೇಳ್ಯಾಳ , ನಾಕ ಹರಕೋಳ್ಳೋಣು?” ಅಂತ ಒಬ್ಬ ಹುಡುಗ ಕೇಳಿದ . “ನೀವೇನ ಹರಕೋಬ್ಯಾಡ್ರಿ , ನಾನs ಕೊಡ್ತೇನಿ” ಅಂತ್ಹೇಳಿ ಗಿಡದಾಗಿನ ಮೂರ ಕಾಯಿ ಹರದ ಕೊಟ್ಟ ಕಳಿಸಿದೆ . ಅಲ್ಲಾ , ಅದ್ಯಾವ ಮೈಲಿ , ಮಂದಿ ಮನಿ ಅಂಗಳದಾಗಿನ ಗಿಡದಾಗ ಬಿಟ್ಟ ಹೂ ಹಣ್ಣು ಕಾಯಿಗೋಳ ಖಬರ ಇಟ್ಟಿರತಾರಂತ ಜನಾ! ಧೊಡ್ಡ ಸಂಭಾಯಿತರಂಗ ಕೇಳಿ ಕಾಯಿ ಹಣ್ಣು ಇಸಗೊಳ್ಳೋ  ಶಾಣ್ಯಾತನಾ ಬ್ಯಾರೆ! ಮದ್ಲ ಕಂಪೌಂಡ್ ಹತ್ತಿ  , ಕಲ್ಲ ಹೊಡದ ಕಾಯಿ ಕಿತ್ತಗೊಳ್ಳೋ ಕಳ್ಳ ಕೆಲಸಾ ಮಾಡೇ ಇರ್ತಾರ ಈ ಹುಡುಗ್ರು . ಗುರಿ ತಪ್ಪಿ , ಕೆಲಸ ಕೆಟ್ಟ ಮ್ಯಾಲ ಬಂದ ಬುದ್ಧಿ : ಈ “ಪ್ರಾಮಾಣಿಕತನಾ” ಅಂಬೋದು . ಮೊಬೈಲನ್ಯಾಗ ಮುಸಡಿ ಹಾಕ್ಕೊಂಡ , ಕಿವ್ಯಾಗ ಇಯರ್ ಫೋನ್ ತುರಕಿಕೊಂಡು  ಮಾಡಿ ಏರಿ ಕೂತ  ನಮ್ಮನಿ ಹುಡುಗ್ರಿಗೆ ಅಂಗಳದಾಗ  ಮಾವಿನ ಗಿಡಾ ಇದ್ದದ್ದ ಸೈತ ಧ್ಯಾಸ ಇರೂದಿಲ್ಲಾ. ಆದ್ರ ಸುತ್ತ ಹತ್ತ ಓಣಿ ಮಂದಿಗೆಲ್ಲಾ ಯಾರ ಹಿತ್ತಲಿನ್ಯಾಗ ಯಾವ ಗಿಡಾ , ಎಷ್ಟ ಕಾಯಿ ಗಾಳಿಗೆ ಉದರಿದು , ಎಷ್ಟ ಉಳದು , ಯಾರ ಮನಿ ಹಣ್ಣು ಹುಳಿ , ಯಾರ ಮನಿ ಕಾಯಿ ಉಪ್ಪಿನಕಾಯಿಗೆ ಭೇಷ ಅವ , ಯಾರ ಮನಿ ಲಿಂಬಿ ಒಗರು , ಯಾರ ಹಿತ್ತಲಾಗಿನ ಹಲಸು ಹೊಲಸು , ಯಾರದು ಸೊಗಸು .. ಇತ್ಯಾದಿ ಎಲ್ಲಾ ಖಬರ ಜಬರದಸ್ತಾಗಿ ಇರ್ತದ . ಅಲ್ಲದs ಯಾರು ಮಧ್ಯಾಹ್ನ ಮಲಗತಾರ , ಯಾರು ಸಂಜೀಕ ಹೊರಗ ಹೋಗ್ತಾರ , ಯಾರ  ಯಾವಾಗ  ಊರಾಗ. ಇರೂದಿಲ್ಲಾ , ಅದರ ಪ್ರಕಾರ ತಾವು ಎಲ್ಲಿ , ಹೆಂಗ ಕಾಯಿ ಕಳವು ಮಾಡಬೇಕು ಅನ್ನೋ ಮಾಸ್ಟರ ಪ್ಲಾನು , ಸ್ಮಾರ್ಟರ ಸ್ಕೆಚ್ಚು .. ಎಲ್ಲಾ ರೆಡಿ ಇರ್ತಾವ .

              ಅದರಾಗೂ ಮಾವಿನಕಾಯಿ ಮ್ಯಾಲ ಮಂದೀ ನಜರ ಭಾಳ . ಅಕ್ಟೋಬರದಿಂದ ಹೂ ಬಿಡಲಿಕ್ಕೆ ಸುರು . ಹಸರ ಹಸರ ಎಲಿ ಸರಿಸಿ , ನಾಜೂಕ ಬಿಳಿ ಬಿಳಿ ಹೂ ಹೊರಗ ಕಾಣಲಿಕ್ಹತ್ತಿದವು ಅಂದ್ರ ಸಾಕು , ಹೋಗಾವ್ರ ಬರಾವ್ರ ಕಣ್ಣು ಮಾವಿನ ಗಿಡದ ಮ್ಯಾಲs ಮತ್ತ. ಅರ್ಧಕ್ಕರ್ಧಾ ಹೂ ಘಾಳಿಗೆ ಉದರತಾವ . ಉಳದದ್ದ ಪಳದದ್ದರಾಗ ಕಾಯಿ ಹಿಡಿತಾವ . ಅದರೊಳಗಷ್ಟ  ಅಡಮಳಿಗೆ ಬಿದ್ದ  ಹೋಗ್ತಾವ . ಇನ್ನ ಕೆಲವು ಕಾಯಿ ಅಕಾಲ ಹಳದಿಯಾಗಿ , ಒಣಗಿ ,ಅಲ್ಲೇ ಇಲ್ಲ ಆಗ್ತಾವ . ಕೆಲವs ಕೆಲವು ಜೀವ ಘಟ್ಟಿ ಇದ್ದ ಕಾಯಿ ರಸಾ ತುಂಬಿ , ಮೈ ತುಂಬಕೊಂಡ ಬೆಳಿಲಿಕ್ಹತ್ತಿರತಾವ . ಉದ್ದ ದೇಟಗುಂಟ ಇಳದ , ಹಸರ ,ಕೊಯರಿ ಆಕಾರದ ಮಾವಿನ ಕಾಯಿ ಘಾಳಿಗೆ ಹಂಗೊಮ್ಮೆ ಹಿಂಗೊಮ್ಮೆ ತೂಗೋ ಛಂದಾ ನೋಡೇ ಸವಿಬೇಕು . ಇಷ್ಟದಿನಾ ಬರೇ ಕಣ್ಣ ಹಾಕಿ ಹೋಗತಿದ್ದ ಮಂದಿಗೆ ಈಗ ಕಾಯಿ ಕಿತಗೊಂಡ ಹೆಚ್ಚಿ ಉಪ್ಪಿನಕಾಯೋ , ಹೆರದ ಚಟ್ಣಿನೋ , ಕುದಿಸಿ ಗುಳಂಬಾನೋ, ಮಳ್ಳಿಸಿ ಗೊಜ್ಜೋ  , ಆಮಪನ್ನಾನೋ ಮಾಡೋ ಹುಕೀ ಬಂದ ಬಿಡ್ತದ . ಅದೂ ಕದ್ದ ತಂದ ಮಾವಿನ ಕಾಯಿ ರುಚಿ  , ರೊಕ್ಕಾ ಕೊಟ್ಟ ಪ್ಯಾಟ್ಯಾಗಿಂದ ತಂದ್ರ ಬರೂದಿಲ್ಲ ಹಂ ಮತ್ತs. ಗಿಡದ ಮಾಲಕರಿಗೆ ಕಾಯಿ ಆದದ್ದರ ಖುಷಿಗಿಂತಾ , ಕಾಯಕೊಳ್ಳೋ ಚಿಂತಿನs ಜಾಸ್ತಿ ಆಗಿಬಿಡತದ. ಇದೊಂದ ಥರಾ , ಗಲ್ಲೀ ಖೂಟಿಗೆ ಗುಂಪಾಗಿ ನಿಂತ ರಿಕಾಮ ಟೇಕಡಿ , ಖಾಲೀ ಪೀಲಿ ಪುಂಡ ಪೋಕರಿಗೋಳ ಬುರೀ ನಜರದಿಂದ , ಹರೇದ ಹೆಣ್ಣಮಕ್ಕಳನ್ನ  ಕಾಯಕೊಳ್ಳೋ ತ್ರಾಸ ಇದ್ಧಂಗ! ಅಂಥಾದರಾಗ ಮಟಮಟಾ ಮಧ್ಯಾಹ್ನದಾಗ ಆಜೂ ಬಾಜೂದಾವ್ರು ಫೋನ್ ಮಾಡತಾರ , ” ಅಲ್ರೀ ಏನ ನಡಿಸೀರಿ? ನಿಮ್ಮನಿ ಮುಂದಿನ ಕಂಪೌಂಡ ಹೊರಗ ನೋಡ್ರಿ ಒಂಚೂರು . ಹಿಂದಿನ ಓಣಿ ಹುಡುಗೋರು ನಿಮ್ಮ ಮಾವಿನಕಾಯಿಗೆ ಕಲ್ಲ ಹೊಡದ ಬೀಳಸಲಿಕತ್ತಾರ . ಸ್ವಲ್ಪ ಲಕ್ಷ್ಯ ಇಡ್ರಿಲಾ ” .ಏನೋ ನಾವಂದ್ರ ಭಾರೀ ಬೇಜವಾಬ್ದಾರಿ ಮಂದಿ . ಇವರ ಲಕ್ಷ್ಯ ಇಟ್ಟದ್ದಕ್ಕs ಇಂದ ನಮ್ಮ ಘರಾಣೆದ ಆಸ್ತಿಯೆಲ್ಲಾ ಉಳಕೊಂಡದ ಅನ್ನೋಹಂಗ ಮಾತಾಡಿಬಿಡತಾರ . (” ಒಂದ ಮಾತ ಹೇಳಿದ್ರ ತಪ್ಪ ತಿಳಕೋಬ್ಯಾಡ್ರಿ ವೈನಿ , ನಿನ್ನೆ ಕಾಲೇಜ ರೋಡಿನ್ಯಾಗ ನಿಮ್ಮ ಮಗಳ ಹಿಂದಿಂದ ಯಾವನೋ ಪಡ್ಡೆ ಹೊಂಟಿದ್ದನ್ನ ನೋಡಿದೆ . ನೋಡ್ರಿ ಮತ್ತ .ಹಂಗs ಸೂಕ್ಷ್ಮ ಹೇಳೇನಿ. ನಾಜೂಕಾಗಿ ವಿಚಾರ್ಸಿ , ನಿವಾರ್ಸಿಕೋರಿ ” ಅಂತ ಹೇಳಿ , ದುಷ್ಟ ದುಷ್ಯಾಶನ ಕಡಿಂದ ನಮ್ಮನಿ ದ್ರೌಪದಿ ಮಾನಾ ಉಳಸಿದ  ಶ್ರೀ ಕೃಷ್ಣ ಪರಮಾತ್ಮನs ತಾವು ಅನ್ನೋ ಪೋಜ್ ಕೊಡೋ ಮಂದೀದs ನೆನಪಾಗ್ತದ .)

                ಮಾವಿನ ಹಣ್ಣ ಅನ್ನಬೇಕು ನಮ್ಮ ಹೆಬ್ಬಾಳ ಹಳ್ಳಿ ಹೆಣ್ಣಜ್ಜಿ ಹಿತ್ತಲಗಿಡದ ಪಾಯರಿ ಮಾವು ! ಆಹಾ , ಅದರ ಮದಾ ಏರಸೋ  ಮಸ್ತ ವಾಸನಿ , ರಸರಸೀತ , ಸಿಹಿಸಿಹಿ ,ಕೇಸರಿ ಬಣ್ಣದ ಕರಣಿ ಕರಣಿ ಹಣ್ಣಿನ ಸವಿರುಚಿ  ನಾಲಿಗಿ ಮ್ಯಾಲ ಉಳದ ಹೋಗೇದ . ಆ ಹಳ್ಳಿ ಮನ್ಯಾಗ ಯಾರೂ ಇರದಿದ್ದರೂ , ಅದರ ಮ್ಯಾಲಿನ ಪ್ರೀತಿ , ಮೋಹದಿಂದ ಮಾರಿದ್ದಿಲ್ಲ . ಎಲ್ಲಾಕ್ಕಿಂತ ಹೆಚ್ಚಿನ ಪ್ರೀತಿ ಹಿತ್ತಲಾಗಿನ ಮಾವಿನ ಗಿಡಾ ಮತ್ತ ಹಲಸಿನ ಗಿಡಗೋಳ ಮ್ಯಾಲ . ನಮ್ಮಮ್ಮ ವರ್ಷಾ ಬೆಳಗಾವಿಯಿಂದ ೨೫ – ೩೦ ಕಿ ಮೀ.ದೂರದ ಹೆಬ್ಬಾಳಕ್ಕ  ಹೋಗಿ , ಆಳು ಕಾಳು ಹುಡಕಿ ಹಿಡದು , ಎರಡೂ ಗಿಡದ ಮಾವಿನ ಕಾಯಿಗೋಳನ್ನ ಇಳಿಸಿಸಿ , ಹಿತ್ತಲ ತುಂಬ ಬಂದ ನಿಂತ ಹಳ್ಳಿ ಹುಡುಗರ ಕೈಯಾಗ ಮಾವಿನ ಕಾಯಿ ಕೊಟ್ಟು , ಕಾಯಿ ಇಳಿಸಿದ ಆಳಗೋಳಗೂ ರೊಕ್ಕ , ಮಾವಿನಕಾಯಿ ಕೊಟ್ಟು , ಆರೋ ಏಳೋ ಗೋಣಿ ಚೀಲದಾಗ ಕಾಯಿ ತುಂಬಿಕೊಂಡು , ಟ್ರಕ್ಕಿನೊಳಗ ಹಾಕಿ , ಅದರಾಗs ಕೂತ ವಾಪಸ ಬರತಿದ್ಳು . ಮನ್ಯಾಗಿನ ಒಂದ ಖೋಲಿ ಖಾಲಿ ಮಾಡಿ , ಗೋಣಿಚೀಲ ಹಾಸಿ , ಸಾಲಾಗಿ ಮಾವಿನ ಕಾಯಿ ಒತ್ತೊತ್ತಾಗಿ ಇಡತಿದ್ವಿ . ಮ್ಯಾಲ ಹುಲ್ಲ ಹೊಚ್ಚಿ ಮುಚ್ಚಿ, , ಹಣ್ಣ ಆಗೋ ಹಾದಿ ಕಾಯತಿದ್ವಿ . ಕಾಯಿ ಮಾಗಿ ಮೆತ್ತಗಾದುಯೇನಂತ ಆವಾಗೀವಾಗಿ ಹುಲ್ಲ ಎತ್ತೆತ್ತಿ  ನೋಡೋ ಉತಾವಳಿತನಾ ಬ್ಯಾರೆ .

“ಅಯ್ಯ ಅಪ್ಪಿ ಪುಟ್ಟಿ , ನಿಮ್ಮ ಗಡಬಿಡಿ ಕಾಯಿಗೊಂದ ತಿಳಿಬೇಕಲಾ.ಅದಕ್ಕೂ ಒಂದ ಬರೋಬ್ಬರಿ ಸಮಯಾ ಅಂತಿರತದ. ಆವಾಗs ಹಣ್ಣ ಆಗತಾವ . ಉತಾವಳಿ ನವರಾ ಘುಡಗ್ಯಾಲಾ ಬಾಶಿಂಗ ಅಂತ! ( ಅಂದ್ರ , ಗಡಬಿಡಿ ಗಂಡ ಕಾಲಿಗೆ ಬಾಶಿಂಗ ಕಟಗೊಂಡಂತ.) ಗಡಬಡಿಸಿ ಕಾಯಿ ಕೆಡಸಬ್ಯಾಡ್ರೆವಾ ” ಅಂತ ಅನ್ನಾಕಿ ನಮ್ಮಜ್ಜಿ . ಸ್ವಲ್ಪ ದಿವಸಕ್ಕ ಕಾಯಿ ಹಣ್ಣಾದ ಕಂಪು ಸಣ್ಣಕ ಹಬ್ಬೋದು. ಈಗಂತೂ ತಡಿಲಿಕ್ಕಾಗದ ಹುಲ್ಲು ಎತ್ತಿ ನೋಡೇಬಿಡಾವ್ರು ನಾವು . ಆಹಾಹಾ! ಹಸರ ಬಣ್ಣ ಹೋಗಿ ,ಕೆಂಪು , ಕೇಸರಿ ಬಣ್ಣದ , ಗಿಳಿಮೂಗಿನ ಹಣ್ಣು ನೋಡಿ , ಭಡಕ್ಕನ ಎತಗೊಂಡ , ತೊಳದ ,  ಡೈರೆಕ್ಟ್ ಬಾಯಿಗ್ಹಚ್ಚಿ , ಹಲ್ಲಿಂದನs ಸಿಪ್ಪಿ ತಗದ , ಮದಲನೇ ಮಾವಿನ ಕರಣಿ , ರಸದ ಸಮೇತ ನಾಲಿಗಿಗೆ ಹತ್ತೋದs ತಡಾ , ಸ್ವರ್ಗನs ಹೊಟ್ಯಾಗ ಇಳಧಂಗ ಆಗತಿತ್ತು . ನಾ ಅಂತೂ ಮೂರ ಹೊತ್ತೂ ಮಾವಿನ ಹಣ್ಣs ತಿಂತಿರತಿದ್ದೆ . ಮುಂಝಾನೆ ಚಹಾದ ಬದ್ಲಿ ಹಣ್ಣು , ಊಟದಾಗ ಸೀಕರಣಿ , ಮಧ್ಯಾಹ್ನ ಚಹಾದ ಜಾಗದಾಗ ಮತ್ತ ಹಣ್ಣು , ರಾತ್ರಿ ಊಟದಾಗ ಸೀಕರಣಿ , ಆಮ್ಯಾಗ ಊಟ ಆದಮ್ಯಾಲ ಮತ್ತ ಹಣ್ಣು , ಅಲ್ಲದ ಯಾರರೆ ಬಂದ್ರ ಹೋದ್ರ ಹಣ್ಣು ….ಹಿಂಗ ಮಾವಿನ ಹಣ್ಣು  ಯೋಳ ಜನ್ಮಕ್ಕಾಗೋ ಅಷ್ಟ ತಿಂದ ತೃಪ್ತ ಆಗಿಬಿಟ್ಟೇನಿ . ಓಣಿ ಮಂದಿಗೆ ಹಂಚಿ, ಬಂಧು ಬಳಗದವ್ರಿಗೆ ಸಾಕಷ್ಟ ಸಲಾ ಕೊಟ್ಟು , ಬಂದ ಹೋಗೋ ಗೆಳತ್ಯಾರಿಗೂ ಅವರ ಮನ್ಯಾವರಿಗೂ ಬೀರಿ , ಮುತ್ತೈದ್ಯಾರಿಗೆ ಉಡಿ ತುಂಬಿ , ಕೆಲಸದಾವರಿಗೂ ಕೈ ತುಂಬ ನೀಡಿ, ಕಡೀಕ ಭಿಕ್ಷುಕರಿಗೂ ಅದನ್ನs ದಾನಾ ಮಾಡಿ…. ಅಬ್ಬಬ್ಬಾ , ಮಾವಿನ ಹಣ್ಣಂದ್ರ ಸೂರ್ಯಾಡಿ ಹೋಗತಿದ್ದು . ಇವತ್ತಿಗೆ ಹೆಬ್ಬಾಳದ ಮನಿನೂ ಇಲ್ಲಾ , ಹಣ್ಣೂ ಇಲ್ಲಾ . ಆದರ ಹೆಬ್ಬಾಳ ಮಾವಿನ ಹಣ್ಣಿನ ಬಣ್ಣಾ , ರುಚಿ , ವಾಸನಿ ನೆನಪ ಮಾತ್ರ ಇಂದಿಗೂ  ಮಾಸದನ ಉಳದದ . ಬ್ಯಾರೆ ಎಷ್ಟ ವರೈಟಿಯ ಶ್ರೇಷ್ಠ ಹಣ್ಣ ತಿಂದರೂ ” ನಮ್ಮ ಹೆಬ್ಬಾಳ ಹಣ್ಣಿನ್ಹಂಗ ಅಲ್ಲs ಅಲ್ಲ ಬಿಡು!” ಅನ್ನೋ ಶರಾ ಬೀಳೋದs ನಮ್ಮ ಕಡಿಂದ .ಯಾರೋ ಹಚ್ಚಿದ ಗಿಡದ ಹಣ್ಣು ಮತ್ಯಾರೋ ತಿಂತಾರಂತ!

ನಮ್ಮ ಅಜ್ಜ (ನಾವು ನೋಡೇ ಇಲ್ಲದ ಪುಣ್ಯಾತ್ಮ!) ಹಚ್ಚಿದ ಗಿಡದ ಹಣ್ಣು ನಾವು ಭರಪೂರ ತಿಂದ್ವಿ . ನಮ್ಮ ಮನ್ಯಾಗ ಭಾಡಿಗಿಗಿದ್ದ ಗುಜರಾತಿ ಪುಣ್ಯವಂತ ತಮ್ಮೂರು ಅಹಮದಾಬಾದನಿಂದ ತಂದು ನಮ್ಮೂರು ಬೆಳಗಾವ್ಯಾಗ ನಮ್ಮನಿ ಅಂಗಳದಾಗ ಹಚ್ಚಿದ ಗಿಡಾ ಇಂದ ಫಲಾ ಕೊಡಲಿಕ್ಹತ್ತೇದ . ಹಣ್ಣ ಹಂಚಿ ತಿನ್ನಬೇಕಂಬೋದು ನಮ್ಮಮ್ಮನ ಥೇರಿ! ನಾನೂ ಸಾಧ್ಯ ಆದಷ್ಟ ಹಂಗs ಮಾಡತೇನಿ .ಕದ್ದ ಹರಕೊಂಡ ಹೋಗಾವರ ಬಗ್ಗೆ ಸಿಟ್ಟ ಬಂದ್ರೂ , ” ಇರ್ಲೇಳು , ಮನ್ಯಾಗ ಗಿಡಾ ಹಚ್ಚಿ , ಅದರ ಹಣ್ಣು ತಿನ್ನೋ ಪುಣ್ಯ ಎಲ್ಲಾರಿಗೆಲ್ಲಿ ಇರ್ತದ?” ಅಂದ್ಕೊಂಡು , ಅವರ್ನ ಕರದ ಕೊಟ್ಟಬಿಡೋದು . ಈ ಸಲಾ ಹಾರ್ಟಿಕಲ್ಚರ ಆಫೀಸಗ್ಹೋಗಿ ಮಾವಿನ ಸಸಿ ತಂದ , ಕದಿಲಿಕ್ಕ ಬಂದಾವ್ರಿಗೆ ಕಾಯಿಗೂಡಾ ಸಸಿನೂ ಕೊಡಬೇಕಂತ ಮಾಡಿಕೊಂಡೇನಿ.


ನೂತನ ಕುಲಕರ್ಣಿ

One thought on “ಮಾವಿನ  ಕಾಯಿ – ಹಣ್ಣು

Leave a Reply

Back To Top