ಕಾವ್ಯ ಸಂಗಾತಿ
ಗಜಲ್
ಗಜಲ್
ಧಗಧಗ ಉರಿವ ಬಿಸಿಲೆ ತಂಪಾಗು
ನಿಗಿನಿಗಿ ಸುಡುವ ಹಗಲೆ ತಂಪಾಗು
ನೆಲ ಬಿರಿದು ಕಂಗಾಲಾಗಿ ಕಾಯುತಿದೆ
ಹಗೆ ಸಾಧಿಸುವ ಮುಗಿಲೆ ತಂಪಾಗು
ನಿತ್ಯ ಎದುರಾಗುತ್ತವೆ ನೂರು ಅಗ್ನಿದಿವ್ಯ
ಮೌನವಾಗಿ ಸುಡುವ ಒಡಲೆ ತಂಪಾಗು
ಜಗದ ನೋವಿಗೆ ಕಾವಿಗೆ ಮದ್ದೆಲ್ಲಿ ತರುವೆ
ತಲೆ ಸವರಿ ಸಂತೈಸುವ ಮಡಿಲೆ ತಂಪಾಗು
ಎಷ್ಟು ಉರಿದರು ಎಲ್ಲಾ ಕಾಲದ ಕೈಗೊಂಬೆ
ಅರುಣಾಳ ಎದೆಗೆರಗುವ ಸಿಡಿಲೆ ತಂಪಾಗು