ಕಾವ್ಯ ಸಂಗಾತಿ
ಸೋಷಿಯಲ್ ಮೀಡಿಯಾಗಳಲ್ಲಿ.
ವಿಶ್ವನಾಥ ಎನ್ ನೇರಳಕಟ್ಟೆ
ಸಂಕೇತ- ಸಂದೇಶಗಳು ಪ್ರವಹಿಸುತ್ತವೆ-
ಭಾವನೆಗಳ ಹೆಣವನ್ನು ಹೆಗಲ ಮೇಲೆ ಹೊತ್ತುಕೊಂಡು
ಲೈಕು, ಕಮೆಂಟು, ಶೇರುಗಳ ಸಾಮ್ರಾಜ್ಯದಲ್ಲಿ
ಕೃತಕತೆಯ ನೆರಳು ಕಾಣಿಸಿಕೊಳ್ಳುತ್ತದೆ
ಅಮಾನವೀಯತೆಯು ಮಾನವೀಯತೆಯ
ಬಟ್ಟೆಯನ್ನು ಧರಿಸಿಕೊಳ್ಳುತ್ತದೆ
ಅಗ್ಗದ ಧರದ ಮುಖವಾಡಗಳು
ಮಾರುಕಟ್ಟೆಯಲ್ಲಿ ಬಿಕರಿಗೊಳ್ಳುತ್ತವೆ
ಹಸಿದ ಗೋಡೆಗಳಿಗೆ ಮಣ್ಣು ಎರಚಲ್ಪಡುತ್ತದೆ
ಮಣ್ಣು ಮಡಕೆಯಾಗುತ್ತದೆ
ಮಡಕೆಯಾದ ಮಣ್ಣು, ದೊಣ್ಣೆಯ ಆರ್ಭಟಕ್ಕೆ ಸಿಲುಕಿ
ಮರಳಿ ಮಣ್ಣಿಗೆ ಸೇರಿಕೊಳ್ಳುತ್ತದೆ
ವಾದ- ಪ್ರತಿವಾದಗಳ ಜಗತ್ತು
‘ಮನುಜ’ರೇ ಇಲ್ಲದ ಕೊಳಗೇರಿಯಾಗುತ್ತದೆ
ಜಿದ್ದಿಗೆ ಬಿದ್ದ ಮನಸ್ಸು, ಶವಯಾತ್ರೆಯನ್ನೂ
ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತದೆ
ಪಟಾಕಿಗಳು ಸ್ಫೋಟಗೊಳ್ಳುತ್ತವೆ
ಸಂಕುಚಿತ ಮನಸ್ಸಿನ ಇಕ್ಕಟ್ಟಾದ ಬೀದಿಗಳಲ್ಲಿ
ಸದ್ದಿಲ್ಲದೆಯೇ ಶುರುವಾಗುತ್ತದೆ ಮೂರನೇ ಮಹಾಯುದ್ಧ
ಕದನ, ವಿರಾಮವೇ ಇಲ್ಲದೆ ನಡೆಯುತ್ತಲೇ ಹೋಗುತ್ತದೆ