ಕಾವ್ಯಸಂಗಾತಿ
ಅವನು
ಕವಿಚಂದ್ರಚಾಂದ್ ಪಾಷಾ
ಅವನು,
ಚರಿತ್ರೆಯ ಚರಮ ಗೀತೆಯ ಹೊಕ್ಕಳ ಬಳ್ಳಿ
ಮಾದಿಗರ ಮನೆಯ ಕತ್ತಲೆಗೆ ಅಂಟಿದ ಕಪ್ಪು ಮಸಿ
ಅಂಬಿಗನ ಹುಟ್ಟಲಿ, ಹುಟ್ಟಿ ಬಂದ ತೊಟ್ಟಿಕ್ಕುವ ಹನಿ.
ಅವನು ‘ಸೂಳೆ’ ಅನಿಸಿಕೊಂಡವಳ ಬಾಗಿಲಿನ ಚಿಲಕ
ಅಕ್ಕನ ಬೆತ್ತಲೆಗೆ ಬೆಳಕ ಮುಡಿಸಿದ ಮಿಂಚು ಹುಳು.
ಅವನು,
ಅಂಗದೊಳಗೆ ಲಿಂಗವ ಹೆತ್ತ ಮೌನದ ಮರ್ಮಾಂಗ!
ಹೆತ್ತ ಕೂಸಿಗೆ ಹಾಲುಣಿಸಲಾಗದ ಬತ್ತಿದ ಕೆಚ್ಚಲು.
ಅವನು ಲಿಂಗ ಕಟ್ಟಿಕೊಂಡವರಿಗೆ, ಕೋಟಿ ದೇವತೆಗಳ ಕಟ್ಟುವ ಕೊಟ್ಟಿಗೆ,
ಹಸಿದು ಕೂತವರಿಗೆ ಬೇಯಲಿಟ್ಟ ಮಾಂಸದ ಮುದ್ದೆ!
ಅವನು,
ಮೈನೆರೆತ ಮಡಿಲೊಳಗಿನ ಮಗುವಿನ ಮಾತು
ಮುದಿತನದ ಬಿಜ್ಜಳನ ಮುರಿದು ಹೋದ ಯೌವ್ವನ.
ಅವನು ಅಲ್ಲಮನ ನಾರುವ ನಾಲಿಗೆಯೊಳಗಿನ ಜ್ಯೋತಿರ್ಲಿಂಗ
ಅವನು, ಬಿದ್ದು ಹೋದ ಮಹಾಮನೆಯ ಹೊಸ ಚಿಗುರು..!!
ಅವನು,
ಜಾತಿ ಬಿಟ್ಟು, ಜಂಗಮನಾಗಲು ಹೊರಟ ಒಂಟಿ ಹೆಜ್ಜೆ!
ಜಾತಿವಂತರಿಂದಲೇ ಮೊಳೆ ಜಡಿಸಿಕೊಂಡ ಮೂಖ ಮೂರ್ತಿ!!
ಅವನು ಧರ್ಮದೇಟಿನ ಗಾಯಗಳಿಗೆ ಮುಲಾಮು ಹುಡುಕುವ ದವಾಖಾನೆ,
ಆದರೆ, ಈಗ ಅವನು
ಲಿಂಗದ ರೋಗಣು ತಗಲಿಸಿಕೊಂಡವರ ನಿತ್ಯದ ಕಾಯಿಲೆ..
ಅವನು, ಜಗತ್ತಿನ ಮಹಾನ್ ಮಾನತವಾದಿ
ಬೆಂಕಿ ಬರಹದ ಕ್ರಾಂತಿಕಾರಿ..
ಆದರೆ, ಈಗ
ಅವನು ಜಾತಿಯೊಂದರ ಜಾಹೀರಾತು,
ಮತ್ತು, ಹೆಚ್ಚು ಮಾರಾಟವಾಗುವ ದೇವರ ಫೋಟೋ…!!
ಪ್ರಸ್ತುತ ಸನ್ನಿವೇಶಕ್ಕೆ ಪೂರಕವಾಗಿ ಮೂಡಿ ಬಂದಿದೆ. ಗೆಳೆಯ all the best
“ಅವನು ಹೆತ್ತ ಕೂಸಿಗೆ ಹಾಲುಣಿಸಲಾಗದ ಬತ್ತಿದ ಕೆಚ್ಚಲು”
ಎಂತಹ ಸಾಲುಗಳು ಸಾರ್ ಇವು!! ದಿಟಕ್ಕೂ ಸೊಗಸಾಗಿವೆ. ನಿಮ್ಮೀ ಕಬ್ಬಗೆಲಸ ಹೀಗೆ ಮುಂದುವರೆಯಲಿ.