ಕಾವ್ಯಸಂಗಾತಿ
ಆ ಸಂಜೆಗೊಂದು ಕವಿತೆ
ದೇವರಾಜ್ ಹುಣಸಿಕಟ್ಟಿ
ಸಂಜೆ ಮರಳಲಿ
ಬಿಡಿ ಬಹು ಬೇಗ….
ನೆತ್ತರಿನ ನೇಸರ ಮುಳುಗಿರಲು…!
ಅಣಿಗೊಳ್ಳುವವು
ಮೊಗ್ಗು ಹೂವಾಗಲು…!
ಬರಗೆಟ್ಟ ದುಂಬಿ ಮದವಡರಿ
ಝೆoಕರಿಸಿ ಚಿಮ್ಮಿ
ರಸಗವಳ ಹೀರಲು…!
ಬೆಳ್ಳಕ್ಕಿ ಬಾನೊಕ್ಕಿ…!
ಬೆರಳ್ ತುದಿಗೆ
ಉಂಗುರವನಿಕ್ಕಿ…!
ಹಾರಿ ಗೂಡು ಸೇರಲು..!
ನನ್ನ ಜನರ
ಮೈ ದಣಿವಾರಿಸಲು…..!
ತೆರೆದು ಬಿಡುವವು ಮದಿರಿಯ
ಸ್ವರ್ಗದ ಬಾಗಿಲುಗಳು….!
ದಿಡ್ಡಿ ಇಟ್ಟಿದ್ದ ಕನಸಿನ ಕೋಣೆಯ
ತೆರೆದು ನಾಳೆಯ ಸವಿ
ಸ್ವಪ್ನಗಳಲಿ ತೇಲಿ ಬಿಡಲು….!
ಮತ್ತೇನಿದೆ ನಾಳೆ ಅದೇ
ರಕ್ತ ಬಸಿದು ನಗು
ಚೆಲ್ಲುವುದು ಹೊನಲು……!
ಅಲ್ಲಿ ಗುಡಿಸಲಲಿ ಬೆಯುತಿದೆ
ಮಾಂಸ ಮೀನು…!
ಹೆಂಗರಳೆಯರು ಕಿಚ್ಚಲಿ ರೊಟ್ಟೆ
ಬಡಿದು ಬಡಿಸಿ ಎದೆ ಹರಡಿ
ಹಾಸಿಗೆಗೆ ಇರುಳ ನಕ್ಷತ್ರ
ಮುಡಿಯಲು ಅಣಿಗೊಂಡಿರಲು..!
ಮರಳಿ ಬರಲಿ ಬಿಡಿ ಸಂಜೆ
ಬೇಗ ಹೊದ್ದು ಇರುಳು….!!
ಈ..
ರಾತ್ರಿಗೂ ಒಂದು
ಜೀವನವಿದೆ ಗೊತ್ತೇ?
ಅಲ್ಲಿಯೂ ಹೂವುಗಳು
ಅರಳುತ್ತವೆ ತರೇವಾರಿ
ಪರಿಮಳ ತುಂಬಿ ಮೈ ಮನದಲ್ಲಿ…..!
ಬೆಳದಿಂಗಳಂತೆ ನಗುವ ಚೆಲ್ಲಿ……!
ಹಸುಗೂಸು ಹಾಲುಂಡು
ನಿದ್ದೆಗೆ ಜಾರಿದೆ…
ತುಟಿಗಳಲಿ ಬುದ್ಧನ
ಮಂದಹಾಸವ
ತುಂಬಿಕೊಂಡು ಜೋಳಿಗೆಯಲ್ಲಿ…!!
ಏನುಂಟು ಏನಿಲ್ಲ ಈ
ಸಂಜೆ ಮರಳುವಲ್ಲಿ…..!!
ಕನಸು ಕೊಂದು ರಸ್ತೆ ಬದಿ
ಬಂದವಳ ಎದೆಯಲಿ
ನಾಳೆಯ ತುತ್ತಿನ ಚಿಂತೆ….!!
ಕತ್ತೆತ್ತಿ ಎದೆಯುಬ್ಬಿಸಿ ಕಣ್ಣ್
ನೋಟದಲಿ ಮಾತಾಡುತ್ತ ಗಿರಾಕಿಗಳ ಗಿರಿಕಿ ಹೊಡೆಯುತ್ತ
ಅರಸುವಳು ಹುದುಗಿಸಿ ಅಡರಿ
ನಿಂತ ಮುಪ್ಪಿನ ಕುರುಹು ಕಂತೆ…..!!
ಕಣ್ಣಿಗೆ ಕಾಡಿಗೆ ಮುಡಿಯ ಮಲ್ಲಿಗೆ..
ಮೈಗೆ ಒಂದಿಷ್ಟು ಅತ್ತರ್…
ಅದೆಷ್ಟು ಖರ್ಚು ಮರಳುವುದೇ ಇಂದಿನ ಆ ಸಭ್ಯಸ್ತನ ಮುಖವಾಡದವನಲಿ….
ಮತ್ತದೇ ಜಗಮಗಿಸುವ ದೀಪದಡಿ ಉರಿದು…ಬೆವರಲ್ಲಿ ಬೆತ್ತಲೆ ಆಗಲು
ಎಂಟದೆ ಇರಬೇಕು ಮತ್ತದೇ ಸಂಜೆ ಕಾಯಲು….
ದೇವರಾಜ್ ಹುಣಸಿಕಟ್ಟಿ
ಕವನ ತುಂಬಾ ಅರ್ಥವತ್ತಾಗಿದೆ ದೇವರಾಜ್ ಅವರೆ ನಿಮ್ಮ ಬರವಣಿಗೆಯ ಶೈಲಿ ಕೂಡ ಓದುಗರಿಗೆ ಇಷ್ಟವಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೂಪವನ್ನು ನೀಡುವ ಇಳಿಸಂಜೆ ಕೆಲವರಿಗೆ ಉದಯಿಸುವ ಸೂರ್ಯನ ನಿರೀಕ್ಷೆ ಹುಟ್ಟಿಸಿದರೆ ಮತ್ತೆ ಕೆಲವರಿಗೆ ಕತ್ತಲಲ್ಲಿಯೇ ಕರಗಿ ಹೋಗುವ ಭಯವನ್ನು ಹುಟ್ಟಿಸುತ್ತದೆ. ಧನ್ಯವಾದಗಳು.