‘ನೀ ಬರುವ ಸಮಯ’ ರೇಖಾರವವರ ಕವಿತೆ

ಕಾವ್ಯಸಂಗಾತಿ

ನೀ ಬರುವ ಸಮಯ

ರೇಖಾ

ಮಿಂಚಿನಂತೆ ಸಣ್ಣ ಹಾಜರಿ ನೀಡಿ
ನೀನು ಲೋಕ ಸುತ್ತಲೆಂದು
ಹೊರಟು ಬಿಡುತ್ತಿಯಾ
ಅಗಾಧ ಪರಿಮಳವನ್ನು
ಸೀದಾ ಎದೆಗಿಳಿಸಿ
ಕೊಂಡ ನಾನು
ನಿತ್ಯ ಹಂಬಲಿಸುತ್ತೇನೆ
ಪಾತರಗಿತ್ತಿಯಾಗಬೇಕೆಂದು
ಪರಿಮಳದ ಜಾಡು ಹಿಡಿದು
ಹೊರಡಲಣಿಯಾದರೆ
ಕಾಲುಗಳಿಗೆ ಮೂಡಿದ ಬೇರುಗಳು
ಬಿಡಿಸಲಾರದಷ್ಟು ಆಳಸೇರಿವೆ

ಹೂತ ಬೇರುಗಳ ಕೀಳುವ ಮುನ್ನ
ರೆಕ್ಕೆ ಮೂಡಬೇಡವೇ ಹೇಳು
ಅದಕ್ಕೆ ನಾನೀಗ ದೀರ್ಘ ತಪಸ್ವಿನಿ
ಯಾರು ಬಲ್ಲರು ಗೆಳೆಯಾ
ನೀ ಬರುವ ಸಮಯ
ಇಲ್ಲಿ ರೆಕ್ಕೆ ಮೂಡುವ ವೇಳೆ
ಒಂದೇ ಇರಬಹುದು
ನೆನಪಿಡು
ಈ ಸಲ ನೀ ಬಂದರೆ ಪರಿಮಳದ ಜೊತೆ
ಒಂದಿಷ್ಟು ಗಾಢ ಬಣ್ಣಗಳನ್ನು ಹೊತ್ತು ತಾ
ಇಲ್ಲಿ ಮೂಡುವ ರೆಕ್ಕೆಗಳು
ಇನ್ನಷ್ಟು ರಂಗನ್ನುಟ್ಟು ಹಾರಾಡಲು


One thought on “‘ನೀ ಬರುವ ಸಮಯ’ ರೇಖಾರವವರ ಕವಿತೆ

Leave a Reply

Back To Top