ಕಿರು ನಾಟಕ
ಮನುಜಮತ
ರಚನೆ:ಅನುಸೂಯ ಯತೀಶ್
ಪಾತ್ರಪರಿಚಯ:
ತಂದೆ: ವ್ಯಾಸರಾಯರು
ತಾಯಿ: ಜಾನಕಮ್ಮ ಮಗಳು: ಭಾರ್ಗವಿ ಆಳು : ಮಾದೇಶ
ಡಾಕ್ಟರ್ : ವಿಜಯ್
ನರ್ಸ್ : ವೇದ .
ಹಿನ್ನೆಲೆ
ವ್ಯಾಸರಾಯರು ಮತ್ತು ಜಾನಕಮ್ಮನವರು ಬಹಳ ಸಂಪ್ರದಾಯಸ್ಥ ಕುಟುಂಬದವರು. ಅವರಿಗೆ ಒಬ್ಳಳೆ ಹೆಣ್ಣು ಮಗಳು ಭಾರ್ಗವಿ. ಅನ್ಯಜಾತಿಯ ಹುಡುಗನನ್ನು ಮೆಚ್ಚಿ ವಿವಾಹವಾಗಿದ್ದಳು. ಇದನ್ನು ವಿರೋಧಿಸಿದ ತಂದೆ-ತಾಯಿಗಳು ಕರುಳ ಕುಡಿಯ ಸಂಬಂಧವನ್ನೇ ಕತ್ತರಿಸಿಕೊಂಡು ಅವಳನ್ನು ಮನೆಯಿಂದ ಹೊರಗಿಟ್ಟು ಜೀವನದ ಸಂಧ್ಯಾಕಾಲದಲ್ಲಿ ಗಂಡ ಹೆಂಡತಿ ಒಬ್ಬಂಟಿಯಾಗಿ ಜೀವಿಸುತ್ತಿದ್ದರು .
ದೃಶ್ಯ1.
ಜಾನಕಮ್ಮ:
ಕೌಸಲ್ಯ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ
ವ್ಯಾಸರಾಯರು :
ಜಾನಕಿ ನಿನ್ನ ಪೂಜೆ ಮುಗಿಯಿತೇ ? ಮುಗಿದಿದ್ದರೆ ತೀರ್ಥಪ್ರಸಾದ ಕೊಡು. ನಾನು ಪಕ್ಕದ ಊರಿಗೆ ಒಂದು ನ್ಯಾಯ ತೀರ್ಮಾನ ಮಾಡಲು ತುರ್ತಾಗಿ ಹೋಗಬೇಕಾಗಿದೆ .
ಜಾನಕಿ :
ಪೂಜೆ ಮುಗಿಯಿತು ತೆಗೆದುಕೊಳ್ಳಿ ಆರತಿಯನ್ನು ಹಾಗೆ ನನಗೂ ದೀರ್ಘ ಸುಮಂಗಲಿ ಆಗು ಎಂದು ಆಶೀರ್ವಾದ ಮಾಡಿ ಅಕ್ಷತೆಯನ್ನು ಹಾಕಿ .
ವ್ಯಾಸರಾಯರು :
ಶುಭವಾಗಲಿ ಜಾನಕಿ. ನಿನ್ನ ಮನದ ಅಭಿಲಾಷೆಗಳೆಲ್ಲಾ ಈಡೇರಲಿ .
ಜಾನಕಿ :
ಸರಿ ಬನ್ನಿ ತಿಂಡಿ ಕೊಡುವೆನು. ತಿಂಡಿ ತಿಂದು ಕಾಫಿ ಕುಡಿದು ಆಮೇಲೆ ಹೋಗುವಿರಂತೆ .
ಜಾನಕಿ :
ನೀನು ಏನೇ ಹೇಳು ನಿನ್ನ ಕೈರುಚಿಗೆ ಸರಿಸಾಟಿ ಇಲ್ಲ. ಇಂತಹ ಸವಿಯಾದ ಊಟವೇ ನನ್ನ ಆರೋಗ್ಯದ ಗುಟ್ಟು ಕಣೆ ಅನ್ನದಾತ ಸುಖಿಭವ
( ವಿವಾಹವಾಗಿ ಮನೆಯಿಂದ ಹೊರಹಾಕಿದ ಮಗಳು ಭಾರ್ಗವಿ ಮನೆಯ ಬಾಗಿಲ ಬಳಿ ತನ್ನ ಮಗುವಿನೊಂದಿಗೆ ನಿಂತಿದ್ದಳು )
ಭಾರ್ಗವಿ:
ಅಪ್ಪ ನಮಸ್ಕಾರ , ಹೇಗಿದ್ದೀರಿ ? ನನಗೆ ಆಶೀರ್ವಾದ ಮಾಡಿ .
ಜಾನಕಮ್ಮ:
ಏನ್ರೀ ಅದು ಶಬ್ದ ಯಾರು ಬಂದವರು ?
ವ್ಯಾಸರಾಯರು :
ಅನಿಷ್ಠದವಳೆ ,ಒಬ್ಬಳೇ ಮಗಳೆಂದು ಮುದ್ದಾಗಿ ಸಾಕಿ ಬೆಳೆಸಿದ್ದಕ್ಕೆ ನಮಗೆ ತಕ್ಕ ಶಾಸ್ತಿ ಮಾಡಿದೆ .ನನ್ನನ್ನು ಮುಟ್ಟಬೇಡ ದೂರ ನಿಲ್ಲು ಕೀಳು ಜಾತಿಯವನು ಮದುವೆಯಾಗಿ ನಮ್ಮ ಮಾನ ಮರ್ಯಾದೆ ಬೀದಿಪಾಲು ಮಾಡಿ ಹೋದವಳು. ಹೀಗೇಕೆ ಬಂದೆ ನನಗೆ ಮುಖ ತೋರಿಸಬೇಡ ಇಲ್ಲಿಂದ ತೊಲಗಿ ಹೋಗು .
ಭಾರ್ಗವಿ :
ಅಪ್ಪ ನೀವು ವಿಚಾರವಂತರು ಚಿಂತನಶೀಲರೂ ವಿವೇಕ ಉಳ್ಳವರು ನೀವು ಹೃದಯ ವೈಶಾಲ್ಯತೆಯಿಂದ ನೋಡಿಪಾ. ಎಲ್ಲರೂ ಮನುಷ್ಯರಲ್ವಾ ?ಎಲ್ಲರ ಮೈಯಲ್ಲಿ ಹರಿಯುವುದು ಒಂದೇ ರಕ್ತ ಅಲ್ವಾ ?
ಜಾನಕಮ್ಮ :
ಪಾಪದವಳೆ ನೀನೇಕೆ ಬಂದೆ ಇಲ್ಲಿಗೆ . ಮಾಡೋದೆಲ್ಲ ಮಾಡಿ ನಮ್ಮನ್ನೆಲ್ಲ ತಿರಸ್ಕರಿಸಿ ಹೋದೆ ಅವನು ಅರ್ಧದಲ್ಲಿ ನಿನಗೆ ಕೈಕೊಟ್ಟು ಓಡಿ ಹೋದನೆ ಕೆಟ್ಟ ಮೇಲೆ ಬುದ್ಧಿ ಬಂತು ಅಂತ ಈಗ ಇಲ್ಲಿಗೆ ಬಂದಿದ್ದೀಯಾ .
ಭಾರ್ಗವಿ :
ಅಮ್ಮ ಹೀಗೆಲ್ಲ ಹೇಳಬೇಡಿ. ನಿನ್ನ ಅಳಿಯ ತುಂಬಾ ಸಜ್ಜನರು ಅವರು ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರಿಗೊಂದು ಆಸೆ ಇದೆ .ನಿಮ್ಮಿಬ್ಬರ ಆಶೀರ್ವಾದ ಪಡೆಯಬೇಕೆಂದು. ಅದರ ಅನುಮತಿಗಾಗಿ ನಾನು ಇಂದು ನಿಮ್ಮ ಬಳಿಗೆ ಬಂದಿರುವೆನು .
ಜಾನಕಮ್ಮ:
ಲೇ ಮಾದೇಶ , ಇವಳು ಕಾಲಿಟ್ಟಿರುವ ಕಡೆಯಲ್ಲ ಗೋಮೂತ್ರ ಹಾಕಿ ಸ್ವಚ್ಛಗೊಳಿಸು ನೋಡು ಈಗ ರಾಯರು ಯಾವುದೋ ತೀರ್ಪು ನೀಡಲು ಹೋಗುತ್ತಿದ್ದಾರೆ ನಿನ್ನ ದರಿದ್ರ ಮುಖ ತೋರಿಸದೆ ಹೋಗು ನೀನು ನಮ್ಮ ಮನೆಯ ಕಡೆ ಮುಖ ಕೂಡ ಹಾಕಬೇಡ .
ಭಾರ್ಗವಿ:
ನಿಮ್ಮ ಮೊಮ್ಮಗನನ್ನು ಆದರೂ ನೋಡಮ್ಮ, ದಯಮಾಡಿ ಅವನಿಗೆ ಆಶೀರ್ವಾದ ಮಾಡು .
ವ್ಯಾಸರಾಯರು:
ಮಾದೇಶ
ಬಾ ಇಲ್ಲಿ ಈಗವಳು ನಿನ್ನ ಹಾಗೆ ಕೀಳು ಜಾತಿಯವನನ್ನು ಮದುವೆಯಾಗಿದ್ದಾಳೆ ಅವಳ ಕತ್ತು ಹಿಡಿದು ಹೊರಗೆ ದಬ್ಬು
ಮಾದೇಶ :
ರಾಯರು ಇಂದು ಶ್ಯಾನೆ ಕ್ವಾಪ ಮಾಡಿಕೊಂಡವರೆ ದಯಮಾಡಿ ನಿಮ್ಮ ಕೈ ಮುಗೀತಿನಿ ಇಲ್ಲಿಂದ ಬ್ಯಾಗ ಹೊರಟುಬಿಡಿ ಅಕ್ಕ .
ವ್ಯಾಸರಾಯರು :
ಜಾನಕಿ ನಾನು ಬರುವುದು ಮೂರು ದಿನ ಆಗುತ್ತೆ .ನೀನೇನು ಆತಂಕ ಭಯ ಪಡಬೇಡ ನಾನು ರಾಘವೇಂದ್ರರಾಯರ ಮನೆಯಲ್ಲಿ ಉಳಿಯುವೆ ಅವರ ಪತ್ನಿ ಸೀತಮ್ಮ ಅತಿಥಿಗಳ ಸೇವೆ ಮಾಡುವಲ್ಲಿ ನಿಸ್ಸೀಮರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುವುರು.
ಜಾನಕಿ:
ಸರಿ ಹೋಗಿ ಬನ್ನಿ. ಯಾವುದಕ್ಕೂ ಹುಷಾರು ಆರೋಗ್ಯದ ಕಡೆ ಗಮನ ಕೊಡಿ .
ವ್ಯಾಸರಾಯರು :
ಜಾನಕಿ ನನ್ನ ಬಗ್ಗೆ ನಿನಗೆ ಭಯ ಬೇಡ ನಿನಗೆ ಬಿಪಿ ಶುಗರ್ ಎರಡು ಇದೆ ಸಾಧ್ಯವಾದಷ್ಟು ವಾಕ್ ಮಾಡು ಒಬ್ಬಳೇ ಹೋಗಬೇಡ ಮಾದೇಶನ ಜೊತೆಯಲ್ಲಿ ಕರೆದುಕೊಂಡು ಹೋಗು ನಿನ್ನ ನೆರವಿಗೆ ಅವನಿದ್ದಾನೆ.
ದೃಶ್ಯ ಎರಡು
ಜಾನಕಮ್ಮ :
ಲೇ ಮಾದೇಶ ದನಕರ ಎಲ್ಲಾ ಆಚೆ ಕಟ್ಟು ಸಗಣಿ ಬಾಜಿ ಕೊಟ್ಟಿಗೆ ಸ್ವಚ್ಛ ಮಾಡು ನಾನು ಹಾಲು ಕರೆಯಬೇಕು .
ಮಾದೇಶ :
ಎಲ್ಲಾ ಕೆಲಸವನ್ನು ಮುಗಿಸಿರುವೆ ಅಮ್ಮೋರೆ , ಈಗ ನೀವು ಹಾಲು ಕರೆಯುವುದು ಮಾತ್ರ ಬಾಕಿ ಇರೋದು.
ಜಾನಕಮ್ಮ :
ಮಾದೇಶ ಈ
ಕರುವನ್ನು ಆ ಕಡೆ ಕಟ್ಟು ಅಯ್ಯೋ ಅನಿಸ್ಟದವನೆ , ನನ್ನ ಮುಟ್ಟು ಬಿಟ್ಟಿಯ ದೂರ ಸರಿದು ನಿಲ್ಲು .
ಮಾದೇಶ :
ಕ್ಷಮಿಸಿ ಅಮ್ಮೋರೆ , ಕರ ಹಿಡಿದು ದೂರ ನಿಂತೆ ನೋಡಿ .
ಜಾನಕಮ್ಮ:
ಅಯ್ಯಯ್ಯೋ ನನ್ನ ಪ್ರಾಣ ಹೋಯಿತು, ಈ ಗೌರಿ ನನಗೆ ಒದ್ದು ಬಿಟ್ಟಳು .ಬಹಳ ನೋವಾಗುತ್ತಿದೆ. ತಡೆಯಲು ಆಗುತ್ತಿಲ್ಲ .
ಮಾದೇಶ;
ಅಯ್ಯೋ ದೇವರೇ ಎಂತ ಕೆಲಸ ಆಯಿತು ಅವರ ತಲೆ ಕಲ್ಲಿನ ಒಡೆದು ರಕ್ತ ಸುರಿಯುತ್ತಿದೆ. ನಾನೇನು ಮಾಡಲಿ ಈಗ ಜೀವ ಹೋಗಿಬಿಟ್ಟರೆ ರಾಯರು ಬಂದ್ಮೇಲೆ ನನ್ನ ಸುಮ್ಮನೆ ಬಿಟ್ಟಾರೆ ಸಹಾಯ ಕೇಳೋಣ ಅಂದ್ರೆ ಯಾರು ಇಲ್ಲ ಇವರನ್ನ ಎತ್ತಿನಗಾಡಿಲಿ ನಾನೇ ಆಸ್ಪತ್ರೆ ಕರ್ಕೊಂಡ್ ಹೋಗ್ತೀನಿ .
ಡಾಕ್ಟರ್ ವಿಜಯ್:
ಏನಾಯ್ತಪ್ಪ? ಇವರಿಗೆ ಇಷ್ಟೊಂದು ಪೆಟ್ಟಾಗಿ ತಲೆಯಲ್ಲಿ ರಕ್ತ ಸುರಿಯುತಿದೆ. ನರ್ಸ್ ಬೇಗ ಬನ್ನಿ ಇವರನ್ನು ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿ.
ಮಾದೇಶ :
ಬುದ್ಧಿ, ರಾಯರು ಊರಲ್ಲಿಲ್ಲ ಅಮ್ಮವರು ಹಾಲು ಕರೆಯಲು ಹೋದಾಗ ಹಸ ಒದ್ದು ಕಲ್ಲಿನ ಮೇಲೆ ಬಿದ್ದಿರು ಏನಾರ ಮಾಡಿ ಅಮ್ಮಾವ್ರ ಬೇಗ ಗುಣ ಮಾಡಿ ಬುದ್ಧಿ.
ಡಾಕ್ಟರ್ ವಿಜಯ್:
ಹೌದಾ, ಸರಿ ಅಳಬೇಡ ನಾವಿದ್ದೇವೆ . ನಾವು ನೋಡಿಕೊಳ್ಳುತ್ತೇವೆ .
ಮಾದೇಶ :
ನಾನು ಅವರ ಮನೆಹಾಳು ಕೀಳು ಜಾತಿಯವನು ವಿಧಿ ಇಲ್ಲದೆ ಇವತ್ತು ಅಮ್ಮವರನ್ನ ಮುಟ್ಟು ಮುಟ್ಟೆ ಬುದ್ಧಿ.
ಡಾಕ್ಟರ್ ವಿಜಯ್:
ಅಯ್ಯೋ ಮುಗ್ದ ನೀನು ಇಲ್ಲಿಯೇ ಕುಳಿತುಕೋ ನಾನು ಅವರನ್ನು ನೋಡುವೆ .
ನರ್ಸ್ ವೇದ :
ಈ ತಲೆಗೆ ಏಟಾಗಿರುವ ಪೇಷಂಟ್ ಕಡೆಯವರು ಯಾರು ? ಅವರಿಗೆ ಬಹಳ ಪೆಟ್ಟಾಗಿದೆ ,ಬೇಗ ಹೋಗಿ ರಕ್ತ ತಂದು ಕೊಡಿ ಇಲ್ಲದಿದ್ದರೆ ಅವರನ್ನು ಉಳಿಸಲು ಸಾಧ್ಯವಿಲ್ಲ .
ಮಾದೇಶ:
ಅಯ್ಯೋ ! ಅಮ್ಮಾವ್ರೇ ರಕ್ತನಾ ನಾನು ಎಲ್ಲಿಂದ ತರಲಿ ? ಅದೇನು ಅಂಗಡಿ ಸಿಗಕ್ಕೆ ಸಾಮಾನ
?
ಡಾಕ್ಟರ್ ವಿಜಯ್:
ನರ್ಸ್ ಅವನಿಗೆ ಅದೆಲ್ಲ ಏನು ಗೊತ್ತಾಗಲ್ಲ, ಅಮಾಯಕ ಅವನು ನೀವೇ ಬೇಗ ಬ್ಲಡ್ ಬ್ಯಾಂಕಿಗೆ ಫೋನ್ ಮಾಡಿ ರಕ್ತದ ವ್ಯವಸ್ಥೆ ಮಾಡಿ.
ನರ್ಸ್ ವೇದ :
ಡಾಕ್ಟರ್ O ನೆಗೆಟಿವ್ ರಕ್ತ ಸಿಗುತ್ತಿಲ್ಲ .ಏನು ಮಾಡುವುದು ಈಗ ಯಾರಾದರೂ ರಕ್ತ ಕೊಡುವವರು ಇದ್ದಾರಾ ಎಂದು ಹುಡುಕಬೇಕಷ್ಟೇ ?
ಮಾದೇಶ :
ಸ್ವಾಮಿ ನಾನು ರಕ್ತ ಕೊಡಬಹುದಾ ?
ಡಾಕ್ಟರ್ ವಿಜಯ್:
ಅವರ ರಕ್ತಕ್ಕೆ ನಿಮ್ಮ ರಕ್ತ ಮ್ಯಾಚ್ ಆದರೆ ಖಂಡಿತ ಕೊಡಬಹುದು .
ಮಾದೇಶ :
ಬುದ್ಧಿ ಅದು ಆಗಲ್ಲ ಮತ್ತೆ ,ಮತ್ತೆ ,
ಡಾಕ್ಟರ್ ವಿಜಯ್:
ಏನು ಅಂತ ಬೇಗ ಹೇಳು.
ಮಾದೇಶ :
ಅಮ್ಮಾವ್ರು ಮೇಲು ಜಾತಿಗೆ ಸೇರಿದವರು. ನಾನು ಕೇಳು ಜಾತಿಯವನು .ನನ್ನ ರಕ್ತ ಕೊಟ್ಟರೆ ಅವರಿಗೆ ಮೈಲಿಗೆಯಾಗುತ್ತದೆ ? ಎಂಬ ಭಯ ಆಗ್ತಿದೆ ಬುದ್ಧಿ ನನಗೆ.
ಡಾಕ್ಟರ್ ವಿಜಯ್:
ಅಯ್ಯೋ ನಿನ್ನಂತ ಹೃದಯವಂತ ಮನುಷ್ಯತ್ವ ಇರುವವನ ರಕ್ತ ಯಾರಿಗಾದರೂ ಕೊಡಬಹುದು ನೀನು ಆರಾಮಾಗಿ ರಕ್ತ ಕೊಡು ಬಾ .
ಮಾದೇಶ :
ಆಗಲಿ ಬುದ್ಧಿ ,ಆದರೆ ಈ ವಿಷಯ ಅಮ್ಮವರಿಗೆ ಆಗಲಿ ರಾಯರಿಗೆ ಆಗಲಿ ತಿಳಿಸಬೇಡಿ ನೊಂದುಕೋತಾರೆ.
ವ್ಯಾಸರಾಯರು:
ನಮಸ್ಕಾರ ಡಾಕ್ಟರ್ ನಾನು ವ್ಯಾಸರಾಯ ಅಂತ .ಜಾನಕಮ್ಮನವರ ಗಂಡ ಅವರಿಗೆ ತುಂಬಾ ಪೆಟ್ಟಾಗಿದೆ ಅಂತ ತಿಳಿತು. ನಾನು ಊರಲ್ಲಿ ಇರಲಿಲ್ಲ .
ಡಾಕ್ಟರ್ ವಿಜಯ್:
ನಮಸ್ಕಾರ ರಾಯರೇ ಬನ್ನಿ ನಿಮ್ಮ ಹೆಂಡತಿಯನ್ನು ನೋಡುವಿರಂತೆ ಈಗ ಅವರು ಆರಾಮಾಗಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ .
ವ್ಯಾಸರಾಯರು :
ಡಾಕ್ಟರೇ, ನಿಮ್ಮ ಋಣವನ್ನು ನಾನು ಹೇಗೆ ತೀರಿಸಲಿ ?ನೀವು ನನ್ನ ಹೆಂಡತಿಯ ಜೀವವನ್ನು ಉಳಿಸಿದ ದೇವರು .ನಿಮಗೆ ನನ್ನ ಧನ್ಯವಾದಗಳು .
ಡಾಕ್ಟರ್ ವಿಜಯ್:
ರಾಯರೇ ನೀವು ಧನ್ಯವಾದ ಹೇಳಬೇಕಾಗಿರುವುದು ನನಗಲ್ಲ ನಿಮ್ಮ ಮನೆಯ ಕೆಲಸದವನಾದ ಮಾದೇಶನಿಗೆ. ಅವನು ವೇಳೆಗೆ ಸರಿಯಾಗಿ ಜಾನಕಮ್ಮನವರು ಆಸ್ಪತ್ರೆಗೆ ಕರೆತಂದು ಅವನ ರಕ್ತವನ್ನು ಕೊಟ್ಟು ಅವರ ಪ್ರಾಣವನ್ನು ಉಳಿಸಿದ್ದಾನೆ .ಆದರೆ ನಿಮಗೆ ಈ ವಿಷಯ ತಿಳಿಸಬಾರದೆಂದು ಬೇಡಿಕೊಂಡಿದ್ದಾನೆ. ತಪ್ಪು ತಿಳಿಯಬೇಡಿ ರಾಯರೇ ನಾನೊಂದು ಮಾತು ಹೇಳುತ್ತೇನೆ ಎಲ್ಲರ ಮೈಯಲ್ಲಿ ಹರಿಯುವುದು ಒಂದೇ ರಕ್ತ. ಇದಕ್ಕೆ ಮೇಲು-ಕೀಳು ಎಂಬ ಯಾವುದೇ ಭೇದವಿಲ್ಲ ಸಾಯುವ ಕಾಲದಲ್ಲಿ ಪ್ರಾಣ ಉಳಿಸುವುದು ಅದರ ಗುಣ ಇಂದು ಮಾದೇಶ ರಕ್ತ ಕೊಡದಿದ್ದರೆ ನಿಮ್ಮ ಮಡದಿ ಉಳಿಯುತ್ತಿರಲಿಲ್ಲ.
ವ್ಯಾಸರಾಯರು :
ಹೌದು ಡಾಕ್ಟ್ರೇ ,ನೀವು ಇಂದು ನನ್ನ ಕಣ್ಣು ತೆರೆಸಿದಿರಿ ನನಗೆ ನನ್ನ ತಪ್ಪಿನ ಅರಿವಾಗಿದೆ ಲೇ ಮಾದೇಶ ಬಾರೋ ಎಲ್ಲಿದ್ದೀಯಾ ?
ಮಾದೇಶ :
ತಪ್ಪಾಯ್ತು ಬುದ್ಧಿ ,ನನ್ನ ಕ್ಷಮಿಸಿ ಬಿಡಿ ನಾನು ಅವರಿಗೆ ರಕ್ತ ಕೊಡಬಾರದಿತ್ತು ನಾನು ಕೀಳು ಕುಲದವನು .
ವ್ಯಾಸರಾಯರು :
ಇಲ್ಲಪ್ಪ ಮಾದೇಶ ನೀನಲ್ಲ ಕೀಳು ಕುಲದವನು ,ನಾನು ಕೀಳು ಮನಸ್ಥಿತಿಯವನು, ನೀನು ನಿಜವಾದ ಪ್ರಜ್ಞಾವಂತ ನನ್ನ ಕಣ್ಣು ತೆರೆಸಿದ ದೇವದೂತ ನೀನು ಮನುಷ್ಯತ್ವದ ಸಾಕಾರಮೂರ್ತಿ.
ಮಾದೇಶ :
ಬುದ್ಧಿ ನೀವು
ಅಂಗೆಲ್ಲಾ ಮಾತಾಡಬೇಡಿ
ವ್ಯಾಸರಾಯರು :
ಇಲ್ಲ ಮಾದೇಶ ದಿನ ನಾನು ನೂರಾರು ಜನಕ್ಕೆ ಬುದ್ಧಿ ಹೇಳುತ್ತಿದ್ದವನು. ಇಂದು ನಿನ್ನಿಂದ ಮನುಷ್ಯತ್ವದ ಪಾಠವನ್ನು ಕಲಿತಿದ್ದೇನೆ ಬಾ ಮಗನೇ ನನ್ನನ್ನು ಆಲಂಗಿಸು .
ದೃಶ್ಯ 3
======
ವ್ಯಾಸರಾಯರು :
ಜಾನಕಿ ಇವತ್ತು ಹೋಳಿಗೆ ,ಪಾಯಸ, ಪಲ್ಯ ಸೇರಿದಂತೆ ಎಲ್ಲಾ ಹಬ್ಬದ ಅಡುಗೆಗಳನ್ನು ಮಾಡು
ಜಾನಕಮ್ಮ :
ಯಾಕ್ರೀ ಏನಿವತ್ತು ವಿಶೇಷ ಇವತ್ತು ಯಾವ ಹಬ್ಬ ಹರಿದಿನಗಳು ಇಲ್ಲವಲ್ಲ ಸಿಹಿ ಅಡುಗೆ ಏಕೆ ?
ವ್ಯಾಸರಾಯರು :
ನಿನಗೊಂದು ಆಶ್ಚರ್ಯ ಕಾದಿದೆ ಜಾನಕಿ , ಇವತ್ತು ನಿನಗೆ ಒಂದು ಇಷ್ಟವಾದ ಉಡುಗೊರೆಯನ್ನು ಕೊಡುತ್ತೇನೆ.
ಭಾರ್ಗವಿ:
ಅಪ್ಪ ನಾನು ಒಳಗೆ ಬರಬಹುದಾ ?
ವ್ಯಾಸರಾಯರು:
ಭಾರ್ಗವಿ ಇದು ನಿನ್ನ ಮನೆ ನೀನು ಹುಟ್ಟಿ ಬೆಳೆದ ಮನೆ .ಇಲ್ಲಿಗೆ ಬರಲು ನಿನಗೆ ಯಾರ ಅನುಮತಿಯೂ ಬೇಕಾಗಿಲ್ಲ . ಬಾ ಮಗಳೆ
ಜಾನಕಮ್ಮ:
ಏನ್ರಿ ಇದೆಲ್ಲ ,ನನಗೆ ನಂಬಲು ಆಗುತ್ತಿಲ್ಲ ಅಚ್ಚರಿಯಾಗುತ್ತಿದೆ .
ವ್ಯಾಸರಾಯರು :
ಹೌದು ಜಾನಕಿ ಇದುವರೆಗೂ ನನ್ನ ಕಣ್ಣಿಗೆ ಅಜ್ಞಾನದ ಪೊರೆ ಕವಿದಿತ್ತು .ಜಾತಿಯ ಭೂತ ಹಿಡಿದಿತ್ತು. ಮಾದೇಶನ ನಡವಳಿಕೆ ನನಗೊಂದು ಪಾಠವನ್ನು ಕಲಿಸಿದೆ. ಈ ಜಾತಿ-ಕುಲಗಳ ಎಲ್ಲ ಮನುಷ್ಯರು ಮಾಡಿಕೊಂಡಿರುವುದು ದೇವರ ಸೃಷ್ಟಿಯಲ್ಲಿ ಎಲ್ಲರೂ ಸಮಾನರು .
ಜಾನಕಿ :
ಭಾ ಮಗಳೇ ಮದುವೆಯಾದ ಮೇಲೆ ಮೊದಲ ಸಲ ತವರುಮನೆಗೆ ಬರುತ್ತಿರುವೆ .ನನ್ನ ಮುದ್ದು ಕಂದ ಹೇಗಿದ್ದೀಯ ಮೊಮ್ಮೊಗನೆ ?
ವ್ಯಾಸರಾಯರು :
ಅಳಿಯಂದಿರೆ ಏಕೆ ಬಾಗಿಲಲ್ಲೇ ನಿಂತಿರುವಿರಿ ?ಒಳಗೆ ಬನ್ನಿ ದಯಮಾಡಿ ನನ್ನ ತಪ್ಪನ್ನು ಕ್ಷಮಿಸಿ ಬಿಡಿ. ಇಷ್ಟು ದಿನ ಕುಲ ಕುಲವೆಂದು ಒದ್ದಾಡಿದೆ ಆದರೆ ಈಗ ನನಗೆ ಬುದ್ಧಿ ಬಂದಿದೆ ಎಲ್ಲ ಜಾತಿ ಕುಲಗಳಿಗಿಂತ ಮನುಜಮತ ದೊಡ್ಡದು ಎಂದು ಅರಿವಾಗಿದೆ. ಇಂದಿನಿಂದ ನಾವೆಲ್ಲರೂ ಸುಖ ಸಂತೋಷವಾಗಿ ಯಾವುದೇ ಜಾತಿಯ ಹಂಗಿಲ್ಲದೆ ಬಾಳೋಣ .
ನಾಟಕದ ಪರದೆ ಬೀಳುತ್ತದೆ .
ಮೇಡಂ ನಾಟಕ ತುಂಬಾ ಚೆನ್ನಾಗಿದೆ ಜಾತಿಯ ಭೂತ ಹಿಡಿದವರನ್ನು ಬದಲಿಸುವುದು ಕಷ್ಟ. ಜೀವನ್ಮರಣದ ಸಂದರ್ಭಗಳು ಹೆಚ್ಚಾಗಿ ಮನುಷ್ಯತ್ವದ ಪಾಠ ಕಲಿಸುತ್ತವೆ. ಚಿಕ್ಕ ಮಕ್ಕಳಿಗೆ ಇಂಥ ನಾಟಕಗಳನ್ನು ಕಲಿಸಿ ಆಡಿಸಿದರೆ ಉತ್ತಮವಾಗಿರುತ್ತದೆ. ಧನ್ಯವಾದಗಳು ತಮಗೆ.