ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಸುದ್ದಿ

ಒಲವು

Menstruation Symptoms FAQs

ನಾನು ದೊಡ್ಡವಳಾದೆನೆಂಬ ಸುದ್ದಿ
ನನಗೆ ತಿಳಿಯುವ ಮುನ್ನವೇ
ಗಾಳಿ ಹೊತ್ತೊಯ್ದ ಗಂಧದಂತೆ
ಊರನ್ನೇ ಪಸರಿಸಿಬಿಟ್ಟಿತ್ತು

ಪರಿಚಿತರು ಒಂದಷ್ಟು ಜನ
ಕೂಡಲೇ ಮನೆಗೆ ಬಂದರು
ಅದೇನೋ ಬಯಸದ ಭಾಗ್ಯ
ಎಂಬಂತೆ ಸಂಭ್ರಮಿಸತೊಡಗಿದರು

ಏನೊಂದೂ ಅರ್ಥವಾಗದೇ ತಬ್ಬಿಬ್ಬಾದೆ ನಾನು
ನೀನು ದೊಡ್ಡವಳಾಗಿದ್ದೀಯ
ಇನ್ನು ಮುಂದೆ ಜವಾಬ್ದಾರಿ ಜಾಸ್ತಿ
ಜನರೊಡನೆ ಮಾತನಾಡುವಾಗ ಎಚ್ಚರವಿರಲಿ

ಈ ಮಾತುಗಳು ಒಂದೆಡೆಯಾದರೆ
ಬೇಗ ಹುಡುಗನನ್ನು ಹುಡುಕಿ
ಹೆಚ್ಚು ಓದಿಸಬೇಡಿ
ಹುಡುಗಿಗೆ ಬುದ್ಧಿ ಕಡಿಮೆ ಅನ್ಸುತ್ತೆ

ಕಿವಿಯ ಮುತ್ತಿಕ್ಕುತ್ತಿದ್ದ ಮಾತುಗಳು
ತಲೆನೋವಾಗಿ ಕಾಡತೊಡಗಿದವು
ಅತ್ತ ಶಾಸ್ತ್ರವೊಂದಕ್ಕೆ ಅಣಿ ಮಾಡುತ್ತಿದ್ದರು
ಎಲ್ಲವುಗಳ ಮಧ್ಯೆ ನಾನು ಮಾತ್ರ ಮೂಲೆಯೊಂದರಲ್ಲಿ ಒಂಟಿ

ಹಳೆಯದೊಂದು ಸೀರೆ ಸುತ್ತಿದರು
ಉಳಿದಂತೆ ಅಲಂಕಾರ ಜೋರು
ಎಲ್ಲ ಗೊಂದಲಗಳ ನಡುವೆ
ಮದುವಣಗಿತ್ತಿಯಂತೆ ಕಾಣುತ್ತಿದ್ದೆನಷ್ಟೆ

ನೆಂಟರು, ಪರಿಚಯಸ್ಥರು
ಪೂಜೆ, ಶಾಸ್ತ್ರ ಮುಗಿಸಿದರು
ಊಟ, ಫೋಟೋ ಮುಗಿಯುವುದನ್ನೇ
ಕಾಯುತ್ತಾ ನಿಂತ ಹೆಂಗಸೊಬ್ಬಳು

ನಾನು ಉಟ್ಟ ಬಟ್ಟೆಯನ್ನೇ ದಿಟ್ಟಿಸುತ್ತಿದ್ದವಳ
ನೋಟವೇಕೋ ಸರಿಯಿಲ್ಲವೆನಿಸಿತು
ಶಾಸ್ತ್ರದ ಕೊನೆಯಲ್ಲಿ ನಾ ಉಟ್ಟ ಬಟ್ಟೆಗಳನ್ನೆಲ್ಲಾ
ಆ ಹೆಂಗಸು ಹೊತ್ತೊಯ್ದಾಗ ನನ್ನ ಅನುಮಾನ ಸರಿಯೆನಿಸಿತು

ಸ್ವಲ್ಪ ಸಮಯವಷ್ಟೇ ಉಟ್ಟ
ಬಟ್ಟೆ ಗಳಾದರೂ ಅದಾಗಲೇ
ಅವುಗಳ ಮೇಲೆ ಮೋಹ ಬೆಳೆದಿತ್ತು
ಶಾಸ್ತ್ರ-ಸಂಪ್ರದಾಯಗಳ ಮೇಲೆ ತಾತ್ಸಾರ ಕೂಡ ಬೆಳೆಯಿತು

ನಾನು ದೊಡ್ಡವಳಾದ ವಿಷಯವ
ಊರಿಗೆಲ್ಲ ಹಬ್ಬಿಸಿ ಸಂಭ್ರಮಿಸುವ
ಹಿಂದಿನ ಕಾರಣವ ಇಂದಿಗೂ ಹುಡುಕುತ್ತೇನೆ
ಹೆಣ್ಣೆಂಬ ಕಾರಣಕ್ಕೆ ನನ್ನೊಪ್ಪಿಗೆ ಇಲ್ಲದೆ
ನಡೆದು ಬಿಡುವ ಶಾಸ್ತ್ರಗಳ ಧಿಕ್ಕರಿಸುತ್ತೇನೆ.


About The Author

2 thoughts on “ಸುದ್ದಿ”

Leave a Reply

You cannot copy content of this page

Scroll to Top