ಅಂಕಣ ಸಂಗಾತಿ

ನೆನಪಿನದೋಣಿಯಲಿ

ಅಮ್ಮಾ ಎಂದರೇ……

ನಮ್ಮ ಜಾನಪದರು ಹೇಳುತ್ತಾರೆ “ತಾಯಿದ್ರೆ ತವರ್ಹೆಚ್ಚು ತಂದಿದ್ರೆ ಬಳಗ್ಹೆಚ್ಚು “ಎಂದು .ಹೌದು ತಾಯಿ ಮತ್ತು ತವರು ಬೇರ್ಪಡಿಸಲಾಗದು ಎಂದೂ ಹಾಗೂ ತವರು ಇರುವುದು ತಾಯಿಯಿರುವವರೆಗೂ ಎನ್ನುವುದು ಅಷ್ಟೇ ಕಟು ವಾಸ್ತವ .ಅಮ್ಮನಿರದ ತವರಿಗೆ ಬಂದ ಹೆಣ್ಣುಮಕ್ಕಳು ತಾಯ ನೆನೆದು ಅಳುವ ಎಷ್ಟೋ ಜಾನಪದ ಹಾಡುಗಳು ತಾಯಿಯ ಮಹತ್ವವನ್ನು ಸಾರುತ್ತವೆ .ಆ ಹಿರಿಯಾಲದ ನೆರಳು ತಪ್ಪಿದ ವ್ಯಥೆಯನ್ನು ಬಣ್ಣಿಸುತ್ತದೆ.

ಇಂತಹ ಅತ್ಯದ್ಭುತ  ದೈವೀಕ ಪ್ರೀತಿಯನ್ನು ಹೊಗಳುತ್ತೇವೆ ಕೊಂಡಾಡುತ್ತೇವೆ ಮೇಲೆತ್ತಿ ಕೂರಿಸುತ್ತೇವೆ ಆದರೆ ಅಮ್ಮನಿಗೆ ಸಿಗಬೇಕಾದ ಸ್ಥಾನಮಾನ ಗೌರವ ಸಿಗುತ್ತಿದೆಯೇ ಎಂದರೆ ಉತ್ತರ ನಕಾರಾತ್ಮಕವೇ. ಅತಿ ಸಲುಗೆಯಲ್ಲಿ  take it for granted ಆಗಿರುವ ಸಂಬಂಧವೆಂದರೆ ಇದೇ. ಬೆಲೆ ಕಟ್ಟಲಾಗದ ಪ್ರೀತಿ ಎಂದು ಬೆಲೆ ಕೊಡುವುದನ್ನೇ ಬಿಟ್ಟು ಬಿಡುತ್ತೇವೆ .ಅದಕ್ಕೇ ಗಾದೆ ಮಾಡಿರುವುದು “ಕರುಳಬಳ್ಳಿಗೆ ನಾಚಿಕೆಯಿಲ್ಲ ಅಂಗಾಲಿಗೆ ಹೇಸಿಗೆ ಇಲ್ಲ “ಎಂದು. ಏನು ಮಾಡಿದರೂ ಮರೆತು ಕ್ಷಮಿಸಿ ಶುಭ್ರ ಬಿಳಿ ಹಾಳೆಯಾಗುವವಳು ಅಮ್ಮಾ ಎಂದೇ.? ಜಗತ್ತಿನಲ್ಲಿ ಹಣವಿದ್ದರೆ ಏನು ಬೇಕಾದರೂ ಕೊಳ್ಳಬಹುದು ತಾಯಿಯನ್ನು ಹೊರತು. ಆದರೆ ವಿರೋಧಾಭಾಸವೆಂದರೆ ತುಂಬಾ ಸಂದರ್ಭಗಳಲ್ಲಿ ಅಮ್ಮ ಇರುವವರೆಗೂ ಅವಳ ಇರುವಿಕೆಗೆ ಅಸ್ತಿತ್ವಕ್ಕೆ ಗಮನವಿರುವುದಿಲ್ಲ .ಕಳೆದುಕೊಂಡ ಮೇಲೆಯೇ ಅವಳ ಮೌಲ್ಯ ಅರಿವಾಗುವುದು. ನಾಗರಿಕತೆಯ ಭರದಲ್ಲಿ ದೈನಂದಿನ ಜಂಜಾಟದಲ್ಲಿ ಅತೀ ಉದಾಸೀನ ಕ್ಕೊಳಗಾಗುವ ವ್ಯಕ್ತಿಯೆಂದರೆ ಅಮ್ಮ .ಅವಳಿಂದಲೇ ನಾವು ಎಂದರಿತಿದ್ದರೂ ಅವಳ ಹಿರಿಮೆಯನ್ನರಿಯದ ದಿವ್ಯ ನಿರ್ಲಕ್ಷ್ಯ ಧೋರಣೆಯ ಮನೋಭಾವ ಮಕ್ಕಳದು. ಅವರವರ ಲೋಕದಲ್ಲಿ ವ್ಯಸ್ತರಾಗಿ ಬಿಡುವಿರದ ವಿಷವರ್ತುಲದಲ್ಲಿ ಸುತ್ತುವಾಗ ತಮಗಾಗಿ ಜೀವ ತೇದ ಅಮ್ಮನಿಗೆ ಅವರ ಪ್ರಪಂಚದಲ್ಲಿ ಸ್ಥಾನವಿಲ್ಲ. ಆ ಮಹಾತಾಯಿ ಅದನ್ನೆಲ್ಲಾ ಉದಾರವಾಗಿ ಕ್ಷಮಿಸಿ ಬಿಡುವಳಲ್ಲ ಅದಕ್ಕೆ. ಪರಿಸ್ಥಿತಿಗೆ ಶರಣಾಗಿ ತಾಯಿ ತಂದೆಯರನ್ನು ವೃದ್ಧಾಶ್ರಮಕ್ಕೆ ಕಳಿಸುವವರೇ ಹೆಚ್ಚಿನ ಜನ ಈಗ .ಇನ್ನು ಕೆಲವರು ಕೈಗೊಂದಿಷ್ಟು ಹಣ ಇಟ್ಟು ತಮ್ಮ ಕರ್ತವ್ಯ ತೀರಿತು ಎಂದುಕೊಳ್ಳುತ್ತಾರೆ. ತಮಗಿತ್ತ  ಪ್ರೀತಿ ವಾತ್ಸಲ್ಯಗಳ ನಂಟು ಕಡಿದೇ ಹೋಗಿರುವುದೇ ಇಂತಹ ವ್ಯವಹಾರಸ್ಥ ಜನರಿಗೆ ?ಸತ್ತ ಮೇಲೆ ವೈಭವವಾಗಿ ತಿಥಿ ವೈಕುಂಠ ಸಮಾರಾಧನೆ ದಾನ ದತ್ತಿ ಮಾಡುವ ಬದಲು ಇರುವಾಗ ನಿಮ್ಮ ಪ್ರೀತಿ ವಿಶ್ವಾಸ ತೋರಿಸಿ ನಿಮ್ಮ ಸಮಯ ಕೊಟ್ಟರೆ ಸಾಕು ಆ ಜೀವ ಸಂತೃಪ್ತ. ಅಷ್ಟನ್ನು ಮಾಡದ ಕಟುಕರು ನಾವಾಗಿದ್ದೇವೆ ಅಂದರೆ ಈ ಸಮಾಜ ಎತ್ತ ಸಾಗಿದೆ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಲೇಬೇಕಾದ ಪ್ರಶ್ನೆ .ಒಬ್ಬ ತಾಯಿ ಹತ್ತು ಮಕ್ಕಳನ್ನು ಸಾಕಿ ಸಲಹುತ್ತಾಳೆ ಆದರೆ ಆ ಹತ್ತು ಮಕ್ಕಳಿಗೆ ಒಬ್ಬ ತಾಯಿಯ ಪೋಷಣೆ ಮಾಡಲು ಆಗದು ನುಣುಚಿಕೊಳ್ಳಲು ಯತ್ನಿಸುತ್ತಾರೆ ಮುಂದುವರಿದ ಸಮಾಜದ ಅತಿ ದೊಡ್ಡ ಘೋರ ದುರಂತ ಇದು.

ನನ್ನಮ್ಮ ಶಕುಂತಲಾ ಅವರಪ್ಪನ ಮುದ್ದಿನ ಮಗಳು. ಅಣ್ಣ ತಮ್ಮ ಇಬ್ಬರು ಅಕ್ಕ ಇಬ್ಬರು ತಂಗಿಯರು ಎಲ್ಲಾ ಸಂಬಂಧಗಳನ್ನು ಹೊಂದಿದ್ದ ಅದೃಷ್ಟಜೀವಿ. ನನ್ನ  ತಂದೆಯಂತೂ ಕಣ್ಣುರೆಪ್ಪೆಯಲ್ಲಿಟ್ಟು ನೋಡಿಕೊಂಡರು. 

ಅವಳು ಅಷ್ಟೇ .ಎಲ್ಲರಿಗೂ ತನ್ನ ಮಮತೆಯ ರಸಧಾರೆಯನ್ನು ಹರಿಸಿದಳು. ನಾವು ಮೂವರು ಮಕ್ಕಳನ್ನು ಮುಚ್ಚಟೆಯಿಂದ ಸಾಕಿದಷ್ಟೇ ಶಿಸ್ತು ಸಂಯಮವನ್ನು ಕಲಿಸಿದಳು. ಅಮ್ಮನನ್ನು ಪ್ರತಿಯೊಬ್ಬರು ಇಷ್ಟಪಡುತ್ತಿದ್ದರು, ಅಜಾತಶತ್ರು ಎಂದರೆ ತಪ್ಪಾಗಲಾರದು .

ಅಮ್ಮನೊಡಲು ಮಡಿಲುಗಳ ಸುಖ ಅನುವಿಸಿಹೆನಾದರೂ ಮೂರು ವರ್ಷಗಳವರೆಗಿನ ನೆನಪು ದಾಖಲಿಸುವಷ್ಟು ಉಳಿದಿಲ್ಲ .ನನಗೆ  ೩.೫

ವರ್ಷವಾದ ಅಂದಿನಿಂದ ನೆನಪು ಸ್ಲೇಟ್ನಲ್ಲಿ ಬರೆದು ತಿದ್ದಿಸುತ್ತಿದ್ದಳು. ನನ್ನ ಕಲಿಕೆಯ ಸಂತಸವನ್ನು ಅಣ್ಣ 

ಆಫೀಸಿನಿಂದ ಬಂದಾಗ ಹಂಚಿಕೊಳ್ಳುತ್ತಿದ್ದಳು. ಆಗ ಅಮ್ಮ ಬೇರೆ ನನ್ನ ಎರಡನೆಯ ತಂಗಿಯನ್ನು ಗರ್ಭದಲ್ಲಿ ಹೊತ್ತಿದ್ದಳು. ನನ್ನ ಹೊಟ್ಟೆಯಲ್ಲಿ ಪಾಪು ಇದೆ .ಅದಕ್ಕೆ ನೀನೇ ಅಕ್ಕ .ಅದನ್ನು ನೋಡಿಕೊಳ್ಳಬೇಕು ನೀನು ಎಂದೆಲ್ಲಾ ಹೇಳುತ್ತಿದ್ದ ಮಸುಕು ನೆನಪು .ಈಗಿನ sobling rivalry ಎನ್ನುವವುದನ್ನು ಅದು ಬಾರದಂತೆ ಎಷ್ಟು ಜಾಣ್ಮೆ ವಹಿಸಿದ್ದೇಯಲ್ಲಾ ನನ್ನಮ್ಮ ನೀನು. ಹುಟ್ಟುವ ಮೊದಲೇ ತಂಗಿಯೋ  ತಮ್ಮಾನೋ ತಿಳಿಯುವ ಮೊದಲೇ ಅದರ ಮೇಲೆ ಮಮಕಾರ ಹುಟ್ಟಿತ್ತು .  ಎರಡನೆಯ ತಂಗಿ ಹುಟ್ಟಿದಾಗಲೂ ಹಾಗೆಯೇ ನಡೆದುಕೊಂಡಿದ್ದು .

ಆಗಿನ ಕಾಲದಲ್ಲಿ sslc ಮುಗಿಸಿದ್ದ ನೀನು ಸಾಕಷ್ಟು ಜಾಣೆ. ಪ್ರಸ್ತುತ ರಾಜಕೀಯದ ಚರ್ಚೆ ನಡೆಸುವಷ್ಟು ಜಾಣ್ಮೆ ಇತ್ತು .ಓದುವಿಕೆಯ ಬಗೆಗಿನ ನಿನ್ನ ಆಸಕ್ತಿ ಮದುವೆಯ ನಂತರ ಹೆಚ್ಚಿತ್ತು ಎಂದು ನೀನೇ ಹೇಳುತ್ತಿದ್ದೆ

 ಕನ್ನಡ ಓದಲು ಕಲಿಯುತ್ತಿದ್ದಂತೆಯೇ ಪುಸ್ತಕಗಳ ಮಾಯಾಲೋಕಕ್ಕೆ ನನ್ನ ಪರಿಚಯಿಸಿದ್ದೆ. ಜೀವನದ ಅತ್ಯಂತ ಒಳ್ಳೆಯ ಹವ್ಯಾಸ ಬೆಳೆಸಿದ್ದೆ. ಅಕ್ಕಪಕ್ಕದ ಗೆಳತಿಯರಿಗೆ ಸಮಾಧಾನ ಸೂಕ್ತ ಸಲಹೆಗಳನ್ನು ಕೊಟ್ಟು ಮಾರ್ಗದರ್ಶನ ಕೊಡುತ್ತಿದ್ದೆ .ನೀನೊಬ್ಬ ಒಳ್ಳೆಯ ಕೌನ್ಸೆಲರ್ ಅಂತ ಆಗ ನನಗೆ ಅರ್ಥವೇ ಆಗಿರಲಿಲ್ಲ .

ಬೆಳಿಗ್ಗೆ ಸ್ನಾನವಾದ ನಂತರ ತಲೆ ಬಾಚಿ ಹೂ ಮುಡಿದು ಮತ್ತೆ ಸಂಜೆ ಬೇರೆ ಸೀರೆಯುಟ್ಟು ಸಿದ್ಧವಾಗಿರುತ್ತಿದ್ದ ನಿನ್ನ ಅಚ್ಚುಕಟ್ಟುತನ ಪ್ರಾಯಶಃ ನಮಗ್ಯಾರಿಗೂ ಬರಲೇ ಇಲ್ಲ. ಇದೊಂದು ವಿಷಯದಲ್ಲಿ ನಾವು ನಿನ್ನ ಅನುಸರಿಸಲೇ ಇಲ್ಲ .ಸೋಂಬೇರಿಗಳು. ಇದ್ದುದ್ದರಲ್ಲಿ ಅಚ್ಚುಕಟ್ಟಾಗಿದ್ದು ಅತಿ ಆಸೆಗೆ ಬೀಳದೆ ಕೊಳ್ಳು ಬಾಕ ತನಕ್ಕೆ ಈಡಾಗದ ನಿನ್ನ ಆದರ್ಶವನ್ನು ನಾವು ಸ್ವಲ್ಪವಾದರೂ ಪಾಲಿಸುತ್ತಿದ್ದೇವೆ.

ಇನ್ನು ಆತಿಥೇಯಳಾಗಿಯಂತೂ ನೀನು ಮಾದರಿ .ಮನೆಗೆ ಬರುವವರನ್ನು ಏನಾದರೂ ಕೊಡದೆ ಕಳುಹಿಸುತ್ತಲೇ 

ಇರಲಿಲ್ಲ .ಸೊಪ್ಪು ಮೊಸರು ಮಾರುವರಾಗಲಿ ತೋಟದ ಕೆಲಸಕ್ಕೆ ಬರುತ್ತಿದ್ದ ಆಳಾಗಲಿ ಯಾರಿಗಾದರೂ ಹೊಟ್ಟೆ ತುಂಬಾ ಬಡಿಸುತ್ತಿದ್ದ ಅನ್ನಪೂರ್ಣೆ. ಪೋಸ್ಟ್ ಮಾನು ಗಳಿಗೂ ನಿನ್ನ ಆತಿಥ್ಯ ಸಲ್ಲುತ್ತಿತ್ತು. ವಿಶೇಷವಾಗಿ ಏನಾದರೂ ಹೆಚ್ಚು ಗಟ್ಟಲೆ ಮಾಡಿದರಂತೂ ನೆರೆಯವರಿಗೆ ಹಂಚಿಯೇ ಸಿದ್ಧ .

ಇದ್ದ ವಸ್ತುಗಳಲ್ಲೇ ರುಚಿಕಟ್ಟಾಗಿ ಅಡುಗೆ ಮಾಡುತ್ತಿದ್ದ ನೀನು ನಿನ್ನ ಅಡುಗೆಯ ಕ್ರೆಡಿಟ್ ಎಲ್ಲಾ ಅಣ್ಣನಿಗೆ ಕೊಡುತ್ತಿದ್ದೆ .ಸ ನನಗೆ ಮದುವೆಯಾದಾಗ ಅಡುಗೆ ಬರುತ್ತಿರಲಿಲ್ಲ ಅಣ್ಣನ್ನೇ ಹೇಳಿಕೊಟ್ಟಿದ್ದು ಅಂತ ಹೇಳುತ್ತಿದ್ದುದು ಇನ್ನೂ ಈಗ ಕೇಳುತ್ತಿರುವಂತಿದೆ.ಆದರೂ ಅಣ್ಣಾ ಮಾಡಿದ ಅಡುಗೆ ತಿಂಡಿ ರುಚಿ ಎಂದರೆ ನೀನು “ಇದ್ದದ್ದೆಲ್ಲ ಸುರಿಯುತ್ತಾರೆ ನಾಳೆಗಿರಲಿ ಅನ್ನುವುದೇ ಇಲ್ಲ ರುಚಿಯಾಗಿದೆ ಇನ್ನೇನು “ಎಂದು ಹುಸಿ ಮುನಿಸು ತೋರಿಸಿತ್ತುದ್ದಿದು ಕಣ್ಣಿಗೆ ಕಟ್ಟಿದಂತಿದೆ .

Illustration Art Of A Mother Is Kissing Baby With Isolated Background  Royalty Free SVG, Cliparts, Vectors, And Stock Illustration. Image 21085170.

ಮಕ್ಕಳಷ್ಟು ಎಂದು ಕೇಳಿ ಮೂರೂ ಹೆಣ್ಣಾ ಎಂದು ಮೂಗು ಮುರಿದವರಿಗೆ ನನ್ನ ಮೂರು ಮಕ್ಕಳು ಮೂರು ಮುತ್ತುಗಳಂತೆ ಎಂದು ವಹಿಸಿಕೊಳ್ಳುತ್ತಿದ್ದಂತೆ ನಮ್ಮ ಸಾಧನೆಗಳನ್ನು ಎಲ್ಲರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದದು ನೆನೆದಾಗ ಎದೆ ಭಾರವಾಗುತ್ತದೆ. ಹೆಣ್ಣು ಭ್ರೂಣ ಹತ್ಯೆ ಗಂಡುಮಗುಬೇಕು ಎನ್ನುವ ಕಾಲದಲ್ಲಿ ನೀನು ಅಣ್ಣ ಮಾದರಿಯಾಗಿದ್ದೀರಿ .ಆಗ ಅದು ಅರ್ಥವಾಗುತ್ತಿರಲಿಲ್ಲ ಈಗ ಯೋಚಿಸಿದರೆ ನಿಮ್ಮ ಬಗ್ಗೆ ಹೆಮ್ಮೆಯಾಗುತ್ತದೆ .

ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಸಿದ್ಧಾಂತ ನಂಬಿದ ನೀನು ಸಾಲ ಮಾಡುವುದನ್ನು ಅದೆಷ್ಟು ವಿರೋಧಿಸುತ್ತಿದ್ದೆ. ಆದರೆ ಸ್ವಂತ ಸೂರು ಹೊಂದುವ ವಿಷಯದಲ್ಲಿ ಮಾತ್ರ ಅದಕ್ಕೆ ವಿನಾಯಿತಿ .. ಸ್ವಂತ ಮನೆ ಮಾಡಿಕೊಂಡಾಗಿನ ಸಂಭ್ರಮ  ದ್ವಿಚಕ್ರ ವಾಹನ ತೆಗೆದುಕೊಂಡಾಗಿನ ಸಂತೋಷ ಜೀವನವನ್ನು ಅನುಭವಿಸುವ ಆನಂದಿಸುವ ಕಲೆಯನ್ನು ನಮಗೆ ಪರಿಚಯಿಸಿತು. ಸಣ್ಣಪುಟ್ಟ ವಿಷಯಗಳಲ್ಲೂ ಜೀವನವನ್ನು ಆಸ್ವಾದಿಸುವ ಕಲೆ ನಿನಗೆ ಜನ್ಮಜಾತ ವಾಗಿತ್ತು .ಅಣ್ಣನಿಗೆ ಅರುವತ್ತು ವರ್ಷ ತುಂಬಿದಾಗ ಷಷ್ಠಿಪೂರ್ತಿ ಸಮಾರಂಭ ಏರ್ಪಡಿಸಿದಾಗ ನಿನ್ನ ಮೊಗದಲ್ಲಿ ಕಂಡ ಆ ಸಂತಸ ನಗು ನಮಗೆ ಕೃತಾರ್ಥ ಭಾವ ತಂದಿತ್ತು .ಬರೀ ಹೆಣ್ಣುಮಕ್ಕಳೇ ಎಂದು ಹಂಗಿಸಿದವರ ಮುಂದೆ ನಿನ್ನ ಹೆಮ್ಮೆ ಆವಿರ್ಭಾವ ವಾಗಿತ್ತು .ತೋಟಗಾರಿಕೆಯ ಬಗ್ಗೆ  ನಿನ್ನ ಆಸಕ್ತಿ !ಅಬ್ಬಾ ಅದೆಷ್ಟು ಹೂವುಗಳನ್ನು ಅರಳಿಸಿದ್ದೆ ನಮ್ಮ ಮನಗಳಲ್ಲೂ ಅಂಗಳದಲ್ಲೂ.

ಚಿಕ್ಕ ವಯಸ್ಸಿನಲ್ಲಿ ಡಯಾಬಿಟಿಸ್ಗೆ ತುತ್ತಾಗಿ ನೋಡು ನೋಡುತ್ತಾ ಸವೆದು ಹೋದೆಯಲ್ಲ ಅಮ್ಮ. ನಮ್ಮ ಕೈಲೇನು ಉಳಿಸದೆ ಅರವತ್ತು ವರ್ಷಕ್ಕೆ ಇಹಲೋಕ ವ್ಯಾಪಾರ ಮುಗಿಸಿದಾಗ ನಾವು ನಾಲ್ವರು ಅಕ್ಷರಶಃ ಅನಾಥರಾಗಿದ್ದೆವು. ಆ ಆಘಾತದಿಂದ ಹೊರಬರಲು ಆಗಿಲ್ಲ ಅಮ್ಮ .ಮತ್ತೆ ಆರು ಏಳು ವರ್ಷದಲ್ಲಿ ಅಣ್ಣನೂ ನಿನ್ನ ಹತ್ತಿರಕ್ಕೆ ಬಂದ ಮೇಲಂತೂ ನಮ್ಮ ಪಾಡು ಕೇಳುವುದೇ ಬೇಡ .ಆ ದೇವರಿಗೇಕೆ ಇಷ್ಟು ಕೆಟ್ಟ ಬುದ್ಧಿ? ಜೀವನದಲ್ಲಿ ಒಳ್ಳೆಯದಾಗುತ್ತಾ ಹೋದಂತೆ ಅನುಭವಿಸಲು ಬಿಡದೆ ಕರೆಸಿಕೊಂಡು ಬಿಡುತ್ತಾನೆ .

ಈಗಲೂ ಅಮ್ಮ ನನ್ನ ಸುಖದ ಕ್ಷಣಗಳಲ್ಲಿ ನಿನ್ನ  ನೆನೆದು ಕಣ್ಣಂಚಿನಲ್ಲಿ ಹನಿ . ನನ್ನ ಅಡಿಗೆಯನ್ನು ಹೊಗಳುವಾಗ ನಿನ್ನ  ಕೃಪೆ ಎಂಬ ಸಂತಸ .ಯಾರಾದರೂ ಏನಾದರೂ ನಮ್ಮ ಬಗ್ಗೆ ಒಳ್ಳೆಯದಾಗಿ ನುಡಿದಾಗ ಆ ಹೊಗಳಿಕೆಯೆಲ್ಲ ನಿನಗೆ ಅರ್ಪಣೆ. ಇತ್ತೀಚೆಗೆ ಶುರು ಮಾಡಿದ ಬರವಣಿಗೆಯ ಅಭ್ಯಾಸ ನಿನಗೂ ಸಂತಸ ತರುತ್ತಿತ್ತು. ಅದಕ್ಕೆ ಅಮ್ಮ ನನ್ನ ಪ್ರಥಮ ಕವನ ಸಂಕಲನ “ಅಂತರಂಗದ ಅಲಾಪ”   ನಿನಗೆ ಮತ್ತು ಅಣ್ಣನಿಗೆ ಅರ್ಪಿತ.

ಅಮ್ಮ ದುಃಖವಾದಾಗಲೆಲ್ಲ ನಿನ್ನ ಬಳಿ ಹೇಳಿಕೊಂಡರೆ ಸಾಕು ಆ ಕ್ಷಣಕ್ಕೆ ಸಮಾಧಾನವಂತೂ ಸಿಗುತ್ತದೆ .ಆದರೆ ಆಶ್ಚರ್ಯವೆಂಬಂತೆ ಸ್ವಲ್ಪ ಹೊತ್ತು ಅಥವಾ ದಿನಗಳಲ್ಲಿ ಅದಕ್ಕೆ ಪರಿಹಾರ ಸಿಕ್ಕು ನೆಮ್ಮದಿಯೂ ಶತಃಸಿದ್ಧ. ಅಗೆಲ್ಲಾ ನನಗೆ ಖಚಿತವಾಗುತ್ತದೆ ಅಮ್ಮ ನೀನೆಲ್ಲೂ ದೂರ ಹೋಗಿಲ್ಲ. ನಮ್ಮ ಸುತ್ತಲೇ ಇದಚದು ನಮ್ಮ ಯೋಗ ಕ್ಷೇಮ ಕಾಳಜಿ ವಹಿಸುತ್ತಿದ್ದೀಯಾ ಅಂತ. ಸಾವೆಂದರೆ ನನಗೆ ಭಯವಂತೂ ಇಲ್ಲ ಯಾಕೆ ಗೊತ್ತಾ ಆಗಲಾದರೂ ನಾ ಬಂದು ನಿನ್ನ ಮತ್ತೆ ಸೇರಬಹುದೆಂದು 


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

  1. ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಧನ್ಯವಾದಗಳು .

    ಸುಜಾತಾ ರವೀಶ್

Leave a Reply

Back To Top