ಕಾವ್ಯ ಸಂಗಾತಿ
ವ್ಯರ್ಥ ಪ್ರಯತ್ನ
ಒಲವು
ದೂರದೂರಿಗೆ ಸಾಗಿ ನಡೆದೆ
ನಿನ್ನ ಮರೆಯುವ ಹಂಬಲಕ್ಕೆ
ನಿನ್ನ ನೆನಪುಗಳು ಜೊತೆಯಾಗುವ
ನಿಜವನರಿಯದೆ
ಕಡಲತೀರದಲ್ಲಿ ಒಂಟಿಯಾಗಿ ಅಲೆದೆ
ನಿನ್ನ ಹೆಜ್ಜೆಗುರುತುಗಳು ನೆರಳಾಗುವುದ ಮರೆತೆ
ನಿನ್ನ ಒಲವನ್ನು ಮಣ್ಣಿನೊಳಗೆ
ಹುದುಗಿಸಿಟ್ಟೆ
ಸಾವಿಲ್ಲದ ಒಲವು
ಮತ್ತೆ ಚಿಗುರುವುದ ನೆನೆಯದೆ
ಆಗಸದ ಚುಕ್ಕಿ ಆಗಬೇಕೆಂದುಕೊಂಡೆ
ನನ್ನ ನೋಡಿ ನೀ ನಲಿವುದ ಮರೆತುಹೋದೆ
ನಿನ್ನ ಮರೆಯಬೇಕೆಂಬ ಹಂಬಲಕ್ಕೆ
ದಾರಿಯಿಲ್ಲದ ಊರಿಗೆ ವ್ಯರ್ಥವಾಗಿ ನಡೆದೆ