ಅಗ್ಗಿಷ್ಟಿಕೆಗೆ ನೀರು ತುಂಬಿದೆ

ಬೆಂಶ್ರೀ ರವೀಂದ್ರ

ಕಾರ್ಮಿಕ ದಿನದಂದೇ ಕಾವಳವು ಮುಚ್ಚಿದೆ
ಮುಂಗಾರಿಗೆ ಮುನ್ನವೆ ಕಪ್ಪು ಮೋಡಗಳೆಲ್ಲ
ಗಗನದಲಿ ಗುಂಪುಗೂಡಿ
ಎಡಬಿಡದೆ ಮಳೆಯು ಸುರಿಯುತ್ತಿದೆ
ಮಂಗಾರಮಾರುತದ ದರದು ಅವಕಿಲ್ಲವೆಂದು ತೋರುತ್ತದೆ

ಅದಕೆ ಇರಬೇಕು ಈ ಗಾಳಿ
ಸುಮ್ಮನಾಗಿ ಅಬ್ಬರದ ಜೊತೆಗೂಡಿದೆ.
ಧೋ…. ದೋ… ಧೋ..ಒ.. ಓ.. ಒಒ …..ಡಂ …ಢಂ….ಢಾಂ.. ಢಮಾರ್…..
ಕೇಳುತಿದೆಯೆ ಆಗಸದ ಆರ್ಭಟ
ಢಕ್ಕಾಡಿಕ್ಕಿ…ಕಿವಿಯೊಡೆವ ಸದ್ದು…
ಹುಶ್… ಹುಶ್್್ ಸದ್ದು.. ಸದ್ದು
ಇಂದು ಕಾರ್ಮಿಕರ ದಿನ

ರಾಜಧಾನಿಯ ರಸ್ತೆಗಳೆಲ್ಲ ಬರಿಯ ರಾಜ ಕಾಲುವೆಯಲ್ಲ!
ಅಬ್ಬರಬ್ಬರದ ಹುಚ್ಚು ಹೊಳೆಯ ಮೇರು ಪ್ರವಾಹವಾಗಿದೆ
ಗಲ್ಲಿ.. ಗಲ್ಲಿ…ಸಂಧಿ..ಸಂಧಿಗಳಲ್ಲಿ
ಕೆನ್ನೀರಿನ ಕಬರು
ಸೋರುವ ಮನೆಗಳು ಬುಡಮೇಲಾಗಿದೆ
ಮಾಡತೂತುಗಳಿಗೆ ಬಕೇಟುಗಳೆ ಭಂಡವಾಳ
ಅಡಿಗೆಯ ಪಾತ್ರೆಗಳು ಮುರುಕು ದೋಣಿಗಳಾಗಿವೆ
ಅಗ್ಗಿಷ್ಟಿಕೆಗೆ ನೀರು ತುಂಬಿದೆ
ಇನ್ನು ನಿಟ್ಟುಪವಾಸವೇ ಗತಿ.

ಸಂಚಾರದಾಚಾರ ಹರಿದು ಹಂಚಾಗಿದೆ
ಒಳಚರಂಡಿಗಳು ಬಾಯ್ಬಿಟ್ಟು ಬಲಿಗಾಗಿ ಕಾಯುತ್ತಿವೆ

ಊರ ಕಾಮಗಾರಿಗಳಿನ್ನೂ ಮುಗಿದಿಲ್ಲ
ನಲವತ್ತು ಪರ್ಸೆಂಟ ಸೆಂಟು ಅಲವತ್ತುಕೊಂಡಿದೆ
ಹಳೆಯ ಮರಗಳು ಮುರಿದು ಹಾದಿಹೋಕರ ತಲೆ ತೂತಾಗಿದೆ

ಸಂಜೆ ಮಾಧ್ಯಮದಲ್ಲಿ ನಾಳೆ ಪತ್ರಿಕೆಯಲ್ಲಿ ಪುಂಖಾನುಪುಂಖ
ತುಂಬ ಬಿಸಿಲಿತ್ತಲ್ಲ ಅದಕ್ಕೆ ನಾವೇ ಮಳೆ ತರಿಸಿದ್ದು
ಪರ್ಜನ್ಯ ಜಪ ಮಾಡಿದ್ದು
ವಿಧಾನವೀಧಿಯ ಕೂಗು ; ನೂರಾರು ಡೆಸಿಬೆಲ್ಲು

ಜಗದ ಕಾರ್ಮಿಕರೇ ಒಂದಾಗಿ
ನೀವು ಕಳೆದು‌ಕೊಳ್ಳಲು ಏನೂ ಇಲ್ಲ (ಆಹಾ … ಎಷ್ಟು ಸತ್ಯ)
ನಿಮ್ಮ ಬೇಡಿಗಳಲ್ಲದೆ!.

ಅವನ ಬೆವರೆಲ್ಲ
ಈ ಹುಚ್ಚು ಮಳೆಯಲ್ಲಿ ಕೊಚ್ಚಿಹೋಯ್ತು
ಕೈಗೆ ಕೋಳ ಬಿದ್ದಿದೆ

ಬಾಲಂಗೋಚಿಗಳು ಆಡುತ್ತಿವೆ
ಕೋಟ್ಯಾಧೀಶರ ಪಟ್ಟಿಯಲಿ ನಾವು ಮೇಲಿದ್ದೇವೆ
ಆಗೋ… ಆ… ಅವನು… ಈಗ ನಂಬರ್.. ಒನ್.


Leave a Reply

Back To Top