ಕಾವ್ಯ ಸಂಗಾತಿ
ಸ್ವರ ಕಾಫಿಯಾ ಗಜಲ್
ನಯನ. ಜಿ. ಎಸ್.
ಅರಳಿ ನಲಿದು ಮಾಸುವ ಜೀವಕೆ ನೆಮ್ಮದಿಯ ನವವರ್ಷ ಅಕ್ಷತೆಯಿತ್ತ ಬಳುವಳಿ
ತುಂಬು ಚೆಲ್ವ ಜಲ ಬುಗ್ಗೆಯಂತ ಅಸುವಿನ ಅಸ್ಮಿತೆಗೆ ಹರ್ಷ ಅಕ್ಷತೆಯಿತ್ತ ಬಳುವಳಿ
ತೂಗಿ ಬಾಗುತ ಬದ್ಧನಾಗು ಭವಿಷ್ಯಕೆ ಬಿಗಿದಪ್ಪಿ ಆಲಿಂಗಿಸುವುದು ವಿಜಯ ಗಮ್ಯದಿ
ನಕ್ಕು ಗೆಲುವಿನಲಿ ಬೀಗುವ ಹೃದಯಕೆ ಸಂತೃಪ್ತಿಯ ಪರ್ವ ಅಕ್ಷತೆಯಿತ್ತ ಬಳುವಳಿ
ಮಸ್ತಕದ ಪುಟಗಳಿಗೆ ಬಸಿರೆಂದು ಹಡೆಯದಿರು ಸರ್ವಜ್ಞನೆನುತ ಗರ್ವದ ಪಲ್ಲವವ
ಜ್ಞಾನ ದಾಹದಿ ಮಗುವಾಗಿ ಅತಿಥಿಯಾಗು ಇಳೆಯಲಿ ಸುಖ ಅಕ್ಷತೆಯಿತ್ತ ಬಳುವಳಿ
ಮಾಸಿದ ಬಣ್ಣಕೆ ರಂಗೇರಲು ಮರುಜನ್ಮ ದಿಟ ಶುಭ್ರಭಾವಗಳ ಕಲಾ ಕುಸುರಿಯಲಿ
ಸ್ವಾರ್ಥ ಬೇಡಿಯೊಳು ಖೈದಿಯಾಗದಿರು ಮರುಳೆ ಪಾಂಡಿತ್ಯ ಅಕ್ಷತೆಯಿತ್ತ ಬಳುವಳಿ
ಬೊಗಸೆ ಸಿಹಿ ಪಾನದಿ ಮತ್ತನಾಗಿ ಓಲಾಡಿ ಜರೆಯದಿರು ತುಂಬಿತು ಉದರವೆಂದು
ವಿದ್ಯಾ ದೇವತೆಗೆ ಶಿರಬಾಗಿ ನಮಿಸು ‘ನಯನ’ಗಳಲಿ ಹಾಸ ಅಕ್ಷತೆಯಿತ್ತ ಬಳುವಳಿ.