ಎಲ್ಲಿಂದಲೋ ಬಂದವರು

ಕಾವ್ಯ ಸಂಗಾತಿ

ಎಲ್ಲಿಂದಲೋ ಬಂದವರು

ವೈ ಜಿ ಅಶೋಕ್ ಕುಮಾರ್.

ಒಂದು ರಂಜಾನಿನ ಮುಂಜಾವಿನಲ್ಲಿ ಮೆಲ್ಲನೆ ಉದ್ಯಾನವನದೊಳಗೆ ಬಂದ ಅವರು ಹುಲ್ಲುಹಾಸಿನ ಮೇಲೆ ಕುಳಿತರು.

ಆ ಮುಸ್ಲಿಂ ಮುದುಕ ತಲೆಯ ಮೇಲಿನ ಮುಂಡಾಸನ್ನು ತೆಗೆದು ಒದರಿ ನಿಟ್ಟುಸಿರುಬಿಟ್ಟ.
ಆ ಹುಡುಗಿ ಉದ್ಯಾನವನದ ಮೂಲೆಯಲ್ಲಿ ನೇತಾಡುತ್ತಿದ್ದ ಜೋಕಾಲಿಯೆಡೆಗೆ ಆಸೆಗಣ್ಣಿನಿಂದ ನೋಡುತ್ತಿದ್ದಳು.
ಅನುಮತಿ ಸಿಕ್ಕೊಡನೆ ಚಿಗರೆಯಂತೆ ಜಿಗಿಯುತ್ತ ಜೋಕಾಲಿಯೆಡೆಗೆ ಓಡಿ
ಹೋಗಿ ಕುಳಿತಳು.

ಎಲ್ಲಿಂದ ಬಂದನೋ ಕಾವಲುಗಾರ ಆ ಹುಡುಗಿಯನ್ನು ಗದರಿಸಿ ಇದು ದೊಡ್ಡ
ಮಕ್ಕಳಿಗಲ್ಲ ಎಂದು ಕೆಕ್ಕರಿಸಿದ.
ಬೆದರಿದ ಆ ಹುಡುಗಿ ನಿರಾಸೆಯಿಂದ ಹಿಂತಿರುಗಿದಳು.
ಮುದುಕನ ಮುಖ ಗಂಭೀರವಾಗಿತ್ತು.

ಆತ ತನ್ನ ಮಾಸಲು ಚೀಲದಿಂದ ಪುಟ್ಟ ಪೆಟ್ಟಿಗೆಯೊಂದನ್ನು ಹೊರಗೆ ತೆಗೆದಿಟ್ಟ.
ಸುಕ್ಕುಗಟ್ಟಿದ ಕೂದಲನ್ನು ಬೆರಳಿಂದ ಬಿಡಿಸುತ್ತಾ ತಲೆಯನ್ನು ಒತ್ತಿ ಒತ್ತಿ ಬಾಚಿಕೊಂಡು ಅಂಗೈಯಗಲದ ಕನ್ನಡಿ ನೋಡುತ್ತಾ ಪೌಡರ್ ಹಚ್ಚಿ, ಹುಬ್ಬು ತೀಡಿ ಹಣೆಗೆ ಕುಂಕುಮ ಇಟ್ಟಕೊಂಡ
ಹುಡುಗಿ ನಗುತ್ತಾ ಮುದುಕನೆಡೆಗೆ ದಿಟ್ಟಿಸಿದಳು
ಆತನ ಮುಖ ಅರಳಿತು.

ಅತ್ತಿತ್ತ ಕಣ್ಣಾಡಿಸಿ ಮತ್ತೆ ಜೋಕಾಲಿಯೆಡೆಗೆ ನಡೆದಳು .
ದೂರದಿಂದ ಎಲ್ಲವನ್ನೂ ಗಮನಿಸುತ್ತಿದ್ದ ಕಾವಲುಗಾರ ಈಗ ಆ ಹುಡುಗಿ ಉಯ್ಯಾಲೆಯಲ್ಲಿ ಕುಳಿತರೂ ಸುಮ್ಮನಿದ್ದ.
ಮೆಲ್ಲನೆ ಅತ್ತ ನಡೆದು ಬಂದ ಮುದುಕ ಜೋಕಾಲಿಯನ್ನು ನೂಕುತ್ತ ನಿಂತ.

ಮಂದಸ್ಮಿತಳಾಗಿದ್ದ ಆ ಹುಡುಗಿ ಬುರ್ಖಾವನ್ನಾಗಲೀ ಹಿಜಾಬನ್ನೂ ಧರಿಸಿಲಿಲ್ಲ.


Leave a Reply

Back To Top