ಕಾವ್ಯ ಸಂಗಾತಿ
ಸೀರೆ
ಅನಸೂಯ ಜಹಗೀರದಾರ
ಅದೆಷ್ಟು ಮೋಹವೋ ಸೀರೆಗೆ
ಆ ನೀರೆಯ ಮೇಲೆ..!
ಬಳಸಿ ನಿಂತರೂ ಮೈಯ
ಮೃದುವಾಗಿ ಒತ್ತುತ್ತ
ಮತ್ತೇ ಮತ್ತೇ ಸುತ್ತಿಕೊಳ್ಳುತ್ತದೆ
ಅವನ ನೆನಪಿನಂತೆ
ಮನದ ಮನೆಯ
ಕಪಾಟಿನ ತುಂಬ ತುಂಬಿಕೊಂಡು
ಬಾಗಿಲು ತೆಗೆದಾಗೊಮ್ಮೆ
ಸಮುದ್ರದದಲೆಯಂತೆ
ಒಲೆಯ ಮೇಲಿನ ಹಾಲಂತೆ
ಉಕ್ಕುತ್ತ ಉಕ್ಕುತ್ತ ನೊರೆಗಟ್ಟಿ
ಕೆಳಕ್ಕಿಳಿಯುವಾಗಲೇ…
ಬೀಳದಂತೆ ತಡೆ ಒಡ್ಡಿದ
ಆ..
ಕರಗಳಲಿ ಮಡಿಕೆಯಾಗಿ
ಶಿಸ್ತಿನಿಂದ ತನ್ನ ಸ್ಥಾನ ಅಲಂಕರಿಸುತ್ತದೆ
ಇಟ್ಟಲ್ಲೇ ಇದ್ದಲ್ಲೇ ಸದ್ದಿಲ್ಲದೇ
ತನ್ನಿರುವ ಸೂಚಿಸುತ್ತಲೇ ಇರುತ್ತದೆ
ಬೆಂಬಿಡದ ಅವನ ನೆನಪಿನಂತೆ..!
ಆನ್ ಲೈನ್ ನಲ್ಲಿ ಬ್ರೌಸ್ ಮಾಡುವಾಗ
ವ್ಯಾಟ್ಸ್ಯಾಪ್ ಗಳಲಿ ಜೂಮು ಮಾಡುವಾಗ
ಬಣ್ಣ ಬಣ್ಣಗಳಲಿ ಮಿಂದೆದ್ದು
ಮತ್ತೊಂದು ಕನಸು ಬಣ್ಣವನು ಹೊದ್ದು
ಕಣ್ಣ ಕಡಲೊಳಗೆ ಅಡಗಿಕೊಂಡು
ಎದೆಯಾಳದೊಳಗೆ ಹೂತುಕೊಂಡು
ಉಸಿರುಸಿರಿನಲಿ
ನವಿರು ಗಂದವ ಪೂಸಿ
ಕಣ್ಮುಚ್ಚಿ ಅಂತರ್ಧ್ಯಾನದಲಿ ಲೀನವಾಗುತ್ತದೆ
ಬಿಲ್ ಕುಲ್..
ನವಿಲ ನಲಿವಿನ ಅವನ ನೆನಪಿನಂತೆ..!!
ಕಾಟನ್, ಲೈಲನ್, ಸಿಲ್ಕ, ಶೀಫಾನ್,
ಕ್ರೇಪು ಜಾರ್ಜೈಟು, ಮೆಟಲ್,
ಮೆತ್ತನೆಯ ಸಾಫ್ಟು ಸಿಲ್ಕು
ಅರ್ಧರ್ಧ ಕಾಟನ್ ಅರ್ದರ್ಧ ಸಿಲ್ಕು
ಮತ್ತೊಂದಿಷ್ಟು ಸಮ್ಮಿಶ್ರಣಗಳು ವಿವಿಧ ವರ್ಣಗಳು
ಬೆಳಕ ಕಿರಣಗಳ ಪ್ರತಿಫಲಿಸುತ್ತವೆ
ಇಂದ್ರಚಾಪವನೇರಿ ಸುಂದರ ಸ್ವೈರ ವಿಹಾಗೈಯುತ್ತವೆ
ಬೇಷಕ್ ಅವನ ನೆನಪಿನಂತೆ..!!
ಮೋಹದಮಲಿನ ನೂಲಿನೆಳೆಗಳ ಬಂಧದಲಿ
ಬೆರಳು ಬೆರಳಿನಲಿ ಆ ಎಲ್ಲ ನೋಟಗಳಲಿ
ಲೋಕದ ಅನುಬಂಧಗಳಲಿ
ಜೀವನಾನುಭವಗಳ ಸಾರದಲಿ
ಅದ್ದಿ ಅದ್ದಿ ಒದ್ದೆಯಾಗುತ್ತವೆ
ಲಾಜವಾಬ್ ..!!
ಅವನದೇ ನೆನಪುಗಳಂತೆ..
ಮೋಹ ಗಾರುಡಿಯ ಸೀರೆಗಳು
ಆ ನೀರೆಯ ಸುತ್ತ…..!!!
ಕಾಲ ಚಕ್ರವ ಎಳೆವ ಕೀಲೆಣ್ಣೆಯಾಗಿ
ನೆನಪುಗಳೂ
ಮಾನ ಮುಚ್ಚುವ ಬಟ್ಟೆಗಳಾಗಿ
ಸೀರೆಗಳೂ
ಬದುಕಿನ ಮೈಲುಗಲ್ಲುಗಳಾಗುತ್ತವೆ