ಬದುಕು ತಂತಿಯ ಆಟ
ಡಾ.ಗೋವಿಂದ ಹೆಗಡೆ
ಮೊನ್ನೆ ೧೧ರಂದು ಅಪರಾತ್ರಿಯಲ್ಲಿ ಬೇಲೂರು ತಲುಪಿದ್ದು. ನಿನ್ನೆ ಬೆಳಿಗ್ಗೆ (೧೨/೧/೨೦) ಚೆನ್ನಕೇಶವನ ದರ್ಶನ ಮುಗಿಸಿ ಚಪ್ಪಲಿ ಸ್ಟ್ಯಾಂಡ್ ಗೆ ತೆರಳಿದೆ. ನಾಲ್ಕು ಹೆಜ್ಜೆ ಗಳ ದೂರದಲ್ಲಿ ಆ ವೃದ್ಧರು ಕೂತಿದ್ದರು. ಕೈಯಲ್ಲಿ ಮೇಲೆ ತೋರಿಸಿದ ಚಿತ್ರದ ತಂತಿಗಳ ಗೊಂಚಲು . “ಯಜಮಾನರೇ ಏನಿದು” ಅಂದೆ. ಇವು ಪಜಲ್ಸ್ ಅಂದರು. ತಮ್ಮ ಕೈಯಲ್ಲಿ ಬಿಡಿಯಾಗಿ ಇರಿಸಿಕೊಂಡಿದ್ದ ತಂತಿಯ ಆಟಿಕೆಯನ್ನು ತೋರಿಸಿ “ನೋಡಿ ಈ ರಿಂಗ್ ಇದೆಯಲ್ಲ, ಇದನ್ನು ಹೊರತೆಗೆಯಬೇಕು” ಅಂತ ತೋರಿಸಿದರು. ಕುತೂಹಲದಿಂದ ಕೈಯಲ್ಲಿ ತೆಗೆದುಕೊಂಡು ನೋಡಿದೆ. ನಮ್ಮ ಬುದ್ಧಿಶಕ್ತಿಯನ್ನು ಕೆಣಕುವ ಸಾಧನಗಳು ಅವು.
“ಅಜ್ಜಾ, ನೀವು ತಂದು ಮಾರತೀರಾ ಅಥವಾ ನೀವೇ ತಯಾರು ಮಾಡ್ತೀರಾ?” ಕೇಳಿದೆ.”ನಾನೇ ತಯಾರು ಮಾಡೋದು, ನಾನು ಫಜಲ್ ಮೇಕರ್” ಎಂದು ಉತ್ತರಿಸಿದರು.
ಈಗ ಅವರನ್ನು ಮತ್ತಷ್ಟು ಗಮನಿಸಿದೆ. ಹಳೆಯದಾದರೂ ಶುಭ್ರವಾಗಿದ್ದ ಬಟ್ಟೆಗಳ, ಮಿಂಚು ಕಣ್ಣುಗಳ, ಎಪ್ಪತ್ತರ ಆಸುಪಾಸಿನ ವಯಸ್ಸಿನ ಈ ವೃದ್ಧರು ಜೀವನೋಪಾಯಕ್ಕಾಗಿ ಈ ಪಜಲ್ ಗಳನ್ನು ತಯಾರಿಸಿ ಹೀಗೆ ದೇಗುಲದ ಎದುರು ಬಿಸಿಲಿನಲ್ಲಿ ಕೂತು ಮಾರುವ ದೃಶ್ಯ… ಕರುಳು ಹಿಂಡಿತು. ಪ್ರಾಯಶಃ ಹೆಚ್ಚೇನೂ ಓದಿರದ ಅವರ ಬುದ್ಧಿಶಕ್ತಿ,ಕೌಶಲಗಳ ಬಗ್ಗೆ ಮೆಚ್ಚುಗೆ ಕೂಡ.
“ಅಜ್ಜಾ, ಹೇಗೆ ಇವು” ಅಂದೆ. “ಒಂದಕ್ಕೆ ಇಪ್ಪತ್ತು ರೂಪಾಯಿ. ಹತ್ತರ ಗೊಂಚಲಿಗೆ ನೂರೈವತ್ತು” ಎಂದರು. ಆ ಗೊಂಚಲಿನ ಚಿತ್ರ ಇದು.
ಬೇಲೂರಿಗೆ ಹೋದರೆ ನೀವು, ದೇಗುಲದ ಚಪ್ಪಲಿ ಸ್ಟ್ಯಾಂಡ್ ಬಳಿ ಅವರು ಸಿಕ್ಕರೂ ಸಿಗಬಹುದು. ಇಲ್ಲವೇ ಸ್ಟ್ಯಾಂಡ್ ನಲ್ಲಿನ ಅಶೋಕ್ ಅವರನ್ನು ಕೇಳಿ.
ಅವರು ಕೃಷ್ಣಪ್ಪ,ಫಜಲ್ ಮೇಕರ್.
ಅವರ ಬಳಿ ಫಜಲ್ ಕೊಂಡು ತನ್ನಿ. ನಿಮ್ಮ ಬುದ್ಧಿಶಕ್ತಿಯನ್ನು ಪರೀಕ್ಷಿಸಿಕೊಳ್ಳಿ. ಜೊತೆಗೆ ಈ ವಯಸ್ಸಿನಲ್ಲೂ ಸಕ್ರಿಯರಾಗಿರುವ ಅವರ ಕಾಯಕ ನಿಷ್ಠೆಗೆ,ಕೌಶಲಕ್ಕೆ, ನಿಮ್ಮದೂ ಒಂದು ಸೆಲ್ಯೂಟ್ ಇರಲಿ.
*******
ಚಿತ್ರ-ಬರಹ : ಗೋವಿಂದ ಹೆಗಡೆ
ಚೆನ್ನಾಗಿ ಬರೆದು ತಿಳಿಸಿದ್ದೀಯಾ ಗೋವಿಂದ….,, ಶುಭಾಶಯ ಗಳು