ಕಾವ್ಯಸಂಗಾತಿ
ಜೀವನ — ಕಬ್ಬಿಣ
ಜಿ.ಎಸ್.ಹೆಗಡೆ
ಮೂಲ ಯಾವುದೆಂದು ಅರಿತಿಲ್ಲ ನಾವು
ಜೀವನದುದ್ದಕೂ ತಿಂದಿದ್ದೇ ಬೇವು
ಮೆತ್ತನೆಯ ಹಾಸಿಗೆ ಕಂಡಿಲ್ಲ ಎಂದೂ
ಕಲ್ಲು ಮುಳ್ಳುಗಳೇ ಹಾಸಿಗೆಯು ಇಂದು
ಬಗಲಲಿ ಜೋಳಿಗೆ ಮಕ್ಕಳ ಕೂಳಿಗೆ
ಇಂದಿನದು ಇಂದಿಗೆ ನಾಳಿನದು ನಾಳೆಗೆ
ಉಕ್ಕನೇ ಕರಗಿಸುವ ನಮ್ಮಯ ತೋಳು
ಎದೆಯಲಿ ನೆಲೆಸಿಲ್ಲ ಒಂಚೂರು ಹಾಳು
ಕಬ್ಬಿಣವ ಕಾಯಿಸುತ ಎತ್ತೆತ್ತಿ ಬಡಿಯುತ
ನಿಮ್ಮಿಷ್ಟ ಆಯುಧ ನಿಮಗೆ ಬಿಡಿಗಾಸು ಆದಾಯವೆಮಗೆ
ಒಂದೊಂದು ಹೊಡತಕೂ ಒಂದು ತುತ್ತಿನ ಕಾಸು
ಆ ತುತ್ತಿನಲೇ ನಮಗೆ ನಾಲ್ಕಾರು ಪಾಲು
ದೇವನೇ ಕೊಟ್ಟಿಹನು ಆರೋಗ್ಯ ಭಾಗ್ಯ
ಕಸಿದುಕೊಳದಿರೆ ಅದವೆಮಗೆ ಸೌಭಾಗ್ಯ
ಬೆಂಕಿಯೇ ನಮ್ಮಯ ಕುಲದೇವರು
ಆತನಿಗೆ ನೈವೇದ್ಯ ಕಾಯದ ಆ ಬೆವರು
ಬೆವರಿನಿಂದಲೇ ನಮಗೆ ಅಭ್ಯಂಗ ಸ್ನಾನ
ಸುತ್ತಿಗೆಯ ಹೊಡೆತವು ಗಂಟಾನಾದ
ಕುಶಲತೆಯೇ ನಮಗೆ ಮಾನ ಸಮ್ಮಾನ
ಮೋಸ ಮಾಡುವವರಲ್ಲ ಬೇಡ ಅನುಮಾನ