ಕಾವ್ಯಸಂಗಾತಿ
ಪ್ರಾರ್ಥನೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಕ್ಯಾಲಂಡಿರಿನಲಿ ಕಂಡ ಚಿತ್ರದಂತೆ
ಭವ್ಯ ದೇಗುಲದ ಗರ್ಭಗುಡಿಯ
ಪ್ರಶಾಂತ ನಿಲುವಿನ ಮೂರ್ತಿ ಎದುರು
ಭಕ್ತಿ ಸಮಾಧಿಯಾಳದಲಿದ್ದಂತೆ ನಿಂತು
ಕೈಜೋಡಿಸಿ ಪ್ರಾರ್ಥನೆಯಲಿ ಹಸುಳೆ
ಮಗು ಯಾರಿಗಾಗಿ ನಿನ್ನೀ ಪ್ರಾರ್ಥನೆ
ಯಾರು ನೀ ಪ್ರಾರ್ಥಿಸುವ ಆ ದೇವತೆ
ಎಲ್ಲಿರುವನು ತಿಳಿವಿದೆಯಾ ನಿನಗೆ
ಆ ದೇವರಲ್ಲೇನದು ನಿನ್ನ ನಿವೇದನೆ
ನಿನ್ನ ಈ ಇಂಥ ಎಳೆ ವಯಸಿಗೆ!
ಧ್ಯಾನಾಸಕ್ತ ಮುಚ್ಚಿದ ಕಣ್ಣುಗಳಲಿ
ಭಕ್ತಿ ಹೆಣ್ಣ ಪ್ರತಿಕೃತಿ ತಳೆದ ತದೇಕತೆ
ದೇವ ದೇವತೆಗಳ ಸಮೂಹ ಸ್ಪರ್ಧೆಯಲಿ
ಯಾರು ಜಯಿಸಿರಬಹುದು
ಈ ಮುಗ್ಧ ಪ್ರಾರ್ಥನೆಯ ವರವನು!
ಎಲ್ಲ ಪ್ರಾರ್ಥನೆಗಳ ಮಮತಾ ಮಾತೆ
ಈ ಮುಗ್ಧ ಸ್ನಿಗ್ಧ ಪ್ರಾರ್ಥನೆ!
ಜಗದೆಲ್ಲ ಪ್ರಾರ್ಥನಾ ಮಂದಿರಗಳ
ಮುಗಿಲೆತ್ತರ ಜೋಡಣೆಯ
ತುಟ್ಟಿ ತುದಿ ಮೇಲೆ ನಿಂತಂಥ ನಿಲುವಿದು!
ಭುವಿಯ ಎಲ್ಲ ಪ್ರಕಾರ ಮಂದಿರಗಳ
ಒಳಗಿನೆಲ್ಲ ಮಾದರಿ ಘಂಟಾನಾದಗಳ
ಸಮ್ಮಿಳಿತ ಸಮ್ಮೇಳನದ ಹಾಗಿದು!
ದೈವತ್ವವನೆ ತಳೆದ ನಿಜ ದೇವತೆಯಂತೆ
ಅಸದೃಶ ಋಷಿ ಮುನಿಗಳ ಸುದೀರ್ಘ ತಪಗಳ ಮೀರಿದಂತೆ
ಈ ಮುಗ್ಧ ಭಕ್ತೆಯ ತದೇಕಚಿತ್ತ ನಿಲುವು!
ಸೊಗಸಾಗಿ ಧ್ವನಿಸಿದ್ದೀರಿ ಮೂರ್ತಿ.
congrats
ಧನ್ಯವಾದಗಳು, ವೆಂಕಟೇಶ್
Beautiful poem neela
Beautiful lines uncle