ಗಾಳಿಯ ಉತ್ಸವ
ಪ್ರೇಮಶೇಖರ
ಗಕ್ಕನೆ ಹಾರಿ
ಗಬಕ್ಕನೆ ಹಿಡಿದು
ನುಂಗೇಬಿಟ್ಟಿತು
ನಮ್ಮೂರ ಕೆರೆಯ
ಮೀನೊಂದನು
ಸಾವಿರ ಸಾವಿರ ಮೈಲು
ದೂರದ ಸೈಬೀರಿಯಾ
ದಿಂದ ಹಾರಿ ಬಂದು ಬೆಳ್ಳಂಬೆಳಿಗ್ಗೆ ಕೆರೆ ಏರಿ
ಮೇಲಿನ ಅರಳೀಮರದ ಕೊಂಬೆಯೇರಿ ಕೂತ
ಸ್ವಾಲೋ ಹಕ್ಕಿಯೊಂದು.
ಇಂದು ನವೆಂಬರ್ ಒಂದು.
ತುರ್ತಾಗಿ ಹೋಗ
ಬೇಕಿದೆ ನಾನೀಗ
ರಾಜ್ಯೋತ್ಸವದಾಚರಣೆಗೆ,
ನನಗಾಗಿ ಕಾದು ನಿಂತಿದೆ
ಕಾರ್ಯಕರ್ತನ ಬೈಕು,
ಕೂಗಿ ಕರೆಯುತ್ತಲೂ ಇದೆ ಮೈಕು.
ಭದ್ರವಾಗಿದೆ ನನ್ನ ಜೇಬಿನಲಿ
ಭಾಷಣದ ಹಾಳೆ,
ಸಿಕ್ಕಿನಿಂತಿದೆ ನನ್ನ ಗಂಟಲಲಿ
ಸ್ವಾಲೋ ನುಂಗಿದ ಮೀನು ಮೂಳೆ.
ಇದೇರೀ ಯುಗಯುಗದ ಕತೆ
ಅನ್ನುತ್ತಿದ್ದಾಳೆ ಅರಳೀಮರ ಸುತ್ತಿಬಂದ ಲಲಿತೆ.
ಹೌದು,
ನೀರಲೊಂದು ಮೀನು ಆಡುತಿದೆ,
ಮೇಲೊಂದು ಸ್ವಾಲೋ ಹೊಂಚು ಹಾಕುತಿದೆ
ಅರಳೀಮರ ನಿಂತು ನೋಡುತಿದೆ.
ಗಾಳಿ…?
ಅದು ತನ್ನ ಪಾಡಿಗೆ ತಾನು
ಬೀಸುತ್ತಿದೆ, ಇಂದಿಲ್ಲಿ,
ನಾಳೆ ಇನ್ನೆಲ್ಲೋ.
**********