ಕಥಾಗುಚ್ಛ

ಒಂದೇ ಮನಸ್ಸಿನಿಂದ

Silhouette of Couple Standing during Nighttime

ಹರೀಶ್ ಬೇದ್ರೆ

ಕೈಮುಗಿದು ಕೇಳ್ತಿನಿ, ದಯವಿಟ್ಟು ಇದೊಂದು ವಿಚಾರದಲ್ಲಿ ನನ್ನ ಇಷ್ಟದಂತೆ ನಡೆಯಲು ಬಿಡು. ಚಿಕ್ಕ ಹುಡುಗಿ ಇರುವಾಗಿನಿಂದ ಈಗಿನವರೆಗೂ ನೀನು ಹೇಳಿದ್ದನ್ನೇ ಕೇಳಿರುವೆ. ಇದು ನನ್ನ ಭವಿಷ್ಯದ ಪ್ರಶ್ನೆ.  ನೀನು ಏನೇನೋ ಹೇಳಿ ನನ್ನ ಇಷ್ಟದ ವಿರುದ್ಧ ನಡೆದುಕೊಳ್ಳುವಂತೆ ಮಾಡಬೇಡ…
 ಆಯ್ತು, ನಾನು ಇಲ್ಲಿಯವರೆಗೆ ಏನೇ ಹೇಳಿದ್ದರೂ ಅದು ನಿನ್ನ ಒಳ್ಳೆಯದಕ್ಕಾಗಿ ತಾನೇ…?
ಹೌದು, ಅದಕ್ಕೆ ನಾನು ನಿನ್ನ ಮಾತು ಕೇಳಿದೆ. ಆದರೆ ಇದೊಂದು ವಿಚಾರಕ್ಕೆ ನನ್ನ ಇಷ್ಟದಂತೆ ಬಿಡು.
 ಅದು ಹೇಗೆ ಸಾಧ್ಯ , ಹೊರಗೆ ನಿನ್ನನ್ನು ನೋಡಲು ಬಂದಿದ್ದಾರೆ.
ಅವರಿಗೆ ನಾನೇನೂ ಬರಲು ಹೇಳಿಲ್ಲ.
ನಿನ್ನ ಈ ಮಾತು ಕೇಳಿದರೆ ಬಂದವರಿಗೆ ಬೇಜಾರಾಗುತ್ತೆ.
ಹಾಗಂತ ಮನಸ್ಸಿನ ವಿರುದ್ಧ ಹೋಗಬೇಕಾ…?
ಯಾರು ಹೇಳಿದ್ದು ಹಾಗೆ ಮಾಡು ಅಂತ..
ಈಗ ನೀನೇ ಹೇಳುತ್ತಿರುವೆಯಲ್ಲ…
 ನಾನು ಹೇಳೋದನ್ನ ಸರಿಯಾಗಿ ಅರ್ಥ ಮಾಡಿಕೊ, ನಿನಗೆ ತಿಳಿಯುತ್ತೆ.
ಏನೂ, ಮನಸ್ಸಲ್ಲಿ ನೀನೇ ಇದ್ದರೂ ಅದನ್ನು ಹಾಗೇ ಮುಚ್ಚಿಟ್ಟುಕೊಂಡು,  ಈಗ ನೋಡಲು ಬಂದವನನ್ನು ಒಪ್ಪಿಕೊಳ್ಳಬೇಕಾ? 
ಖಂಡಿತಾ ಒಪ್ಪಿಕೊ, ಏಕೆಂದರೆ ಜನ್ಮ ಕೊಟ್ಟು ಸಾಕಿ ಬೆಳೆಸಿದ ತಂದೆ ತಾಯಿ ಯಾವತ್ತೂ ಮಕ್ಕಳ ಹಿತವನ್ನೇ ಬಯಸುತ್ತಾರೆ. ಅವರಿಗಲ್ಲದೇ ಮತ್ಯಾರಿಗೆ  ನಿನ್ನ ಒಳಿತು ಕೆಡುಕು ತಿಳಿಯುತ್ತೆ ಹೇಳು.  ಅವರಿಗೆ ನೋವು ಕೊಟ್ಟರೆ ನಿನಗೆ ಒಳ್ಳೆಯದಾಗುತ್ತಾ…
ನಾನೇನಾದರೂ ಅವರಿಗೆ ಗಂಡು ನೋಡಲು ಹೇಳಿದ್ದೇನೆ, ನನಗೆ ಕೇಳದೆ ಅವರು ಹುಡುಗನನ್ನು ಮನೆಗೆ ಕರೆದರೆ ನಾನೇನು ಮಾಡಲಿ?
 ಹೆಣ್ಣು ವಯಸ್ಸಿಗೆ ಬಂದ ಮೇಲೆ ಎಲ್ಲಾ ತಂದೆತಾಯಿ ಏನು ಮಾಡುತ್ತಾರೋ ಇವರು ಅದನ್ನೇ ಮಾಡಿದ್ದಾರೆ,  ಅಷ್ಟೇ..
ಇವತ್ತು ನೀನು ಏನೇ ಹೇಳಿದರೂ ನಿನ್ನ ಮಾತನ್ನು ಕೇಳುವುದಿಲ್ಲ. ಮನಸ್ಸು ಒಬ್ಬರಿಗೆ, ಮದುವೆ ಮತ್ತೊಬ್ಬರೊಂದಿಗೆ ಸಾಧ್ಯವೇ ಇಲ್ಲ.
  ಹುಚ್ಚಿ ಹಾಗೆ ಮಾತನಾಡಬೇಡ, ಸುಮ್ಮನೆ ಹೋಗಿ ಬಂದವರಿಗೆ ಕಾಫಿ ತಿಂಡಿ ಕೊಟ್ಟು ಹುಡುಗನನ್ನು ನೋಡು.
ಈ ಮಾತು ಹೇಳಲು ನನ್ನನ್ನು ಅಂದು ಕಾಪಾಡಿದ್ದ?
ಯಾವಾಗ?
 ನಾನು  ಆಯಾ ತಪ್ಪಿ ನೀರಲ್ಲಿ ಬಿದ್ದಾಗ.
ನಿನ್ನ ಜಾಗದಲ್ಲಿ ಯಾರೇ ಇದ್ದಿದ್ದರೂ ನಾನು ಅದನ್ನೇ ಮಾಡುತ್ತಿದ್ದೆ.  ಅದಕ್ಕೂ ಇದಕ್ಕೂ ಸಂಬಂಧವಿಲ್ಲ.
ಹೌದಾ, ಹಾಗಾದರೆ ನಾನು ಪಿ.ಯು. ಓದುವಾಗ  ನನ್ನನ್ನು ಇಷ್ಟಪಟ್ಟು ಹೂ ಕೊಟ್ಟ ಹುಡುಗನನ್ನು ಬೇಡ ಎಂದು ಒಪ್ಪಿಸಿದೆ ಏಕೆ?
 ಅವನು ಸರಿ ಇರಲಿಲ್ಲ ಅದಕ್ಕೆ.
ಅವನು ಸರಿಯಿರಲಿಲ್ಲ ಅಂದರೆ ನಿನಗೇನು ತೊಂದರೆ ಆಗುತ್ತಿತ್ತು? 
ನನಗೇನೂ ಆಗುತ್ತಿರಲಿಲ್ಲ ಆದರೆ ನಿನಗೆ ತೊಂದರೆ ಆಗುತ್ತಿತ್ತು, ಅದಕ್ಕೆ ಒಪ್ಪಬೇಡ ಅಂದೆ.
 ಅದು ನನಗೆ ತಾನೇ, ನೀನು ಸುಮ್ಮನೆ ಇರಬೇಕಿತ್ತು.
ಗೊತ್ತಿದ್ದೂ ಹೇಗೆ ಸುಮ್ಮನಿರಲಿ…
ಹಾಗಿದ್ದರೆ ಈಗ ಬಂದ ಹುಡುಗ ಸರಿ ಇದ್ದಾನಾ?
ಹೌದು, ಅದಕ್ಕೆ ಒಪ್ಪಿಕೊ ಅಂದಿದ್ದು.
ನಿನಗೆ ಹೇಗೆ ಗೊತ್ತು?
ನನಗೆ ಗೊತ್ತು, ಅದಕ್ಕೆ ಹೇಳುತ್ತಿರುವೆ ಸುಮ್ಮನೆ ನನ್ನ ಮಾತನ್ನು ಕೇಳು.
ಹೌದೌದು, ನಿನಗೆ ಏನು ಗೊತ್ತಿಲ್ಲ ಹೇಳು?  ಎಷ್ಟೆಂದರೂ ನೀನು ಜಗವ ಕಾಯುವ ಪರಮಾತ್ಮ ಅಲ್ಲವೇ.  ದೇವರು ಮನುಷ್ಯಳೊಂದಿಗೆ ಮದುವೆ ಆಗುವುದು ಹೇಗೆ ಸಾಧ್ಯ. ಹಾಗೇನಾದರೂ ಆಗಿಬಿಟ್ಟರೆ ದೇವಕುಲದ ಮರ್ಯಾದೆಗೆ ಕುಂದುಂಟಾಗುತ್ತದೆ ಅಲ್ಲವೇ….? 
ನೋಡು…
ಏನೂ ನೋಡುವುದು..?   ಸುಖ ದುಃಖ, ಬೇಸರ ಇನ್ನೊಂದು ಮತ್ತೊಂದು ಏನೇ ಇರಲಿ, ಅಪ್ಪ ಅಮ್ಮ, ಗೆಳೆಯರು, ಯಾರೆಂದರೇ ಯಾರ ಬಳಿಯೂ ಹೇಳಿಕೊಳ್ಳದೆ ಕೇವಲ ನಿನ್ನನೇ ನಂಬಿ, ನಿನ್ನ ಬಳಿ ಮಾತ್ರ ಕೇಳುತ್ತಿದ್ದೆ. ಆಗ ನಿನಗೆ, ನಾನು ಕೇವಲ ಮನುಷ್ಯಳಾಗಿ ಕಾಣಲಿಲ್ಲ. ಪ್ರತಿಯೊಂದನ್ನೂ ನಗುನಗುತ್ತಾ ಕೇಳಿದೆ, ಸಮಾಧಾನ ಮಾಡಿದೆ, ಪ್ರೀತಿಯಿಂದ ಸ್ಪಂದಿಸಿದೆ.  ಈಗ..
………
ನನ್ನ ಅಣುಅಣುವಿನಲ್ಲೂ ನೀನೇ ತುಂಬಿರುವೆ, ಪ್ರತಿದಿನ ಪ್ರತಿಕ್ಷಣ ನಿನ್ನನೇ ನಂಬಿರುವೆ. ಇದ್ದರೂ ನಿನಗಾಗಿ, ಹೋದರೂ ನಿನಗಾಗಿ ಎಂದು ನಿನ್ನನ್ನೇ ಆರಾಧಿಸಿ, ಪೂಜಿಸಿ ಬದುಕುತ್ತಿರುವ ನನಗೆ ಅನ್ಯರೊಂದಿಗೆ ಮದುವೆ ಆಗಲು ಹೇಳುವೆಯ?ಎಲ್ಲಾ ಗೊತ್ತು ಎನ್ನುವ ನಿನಗೆ, ನನ್ನೊಳಗಿನ ಪ್ರೀತಿ ಕಾಣಲಿಲ್ಲವೇ? ಅದು ಚಿಗುರೊಡೆದು ಹೆಮ್ಮರವಾಗಲು ಏಕೆ ಬಿಟ್ಟೆ?  ಇಲ್ಲಿಯವರೆಗೆ ಏಕೆ ಬಿಟ್ಟೆ ಹೇಳು?  
ನಾನೆಲ್ಲಿ ನಿನಗೆ, ನಿನ್ನ ಪ್ರೀತಿ ಕಾಣಲಿಲ್ಲ ಎಂದು ಹೇಳಿದೆ.  ಇನ್ನೂ ಮುಂದೆಯೂ, ಮದುವೆಯ ನಂತರವೂ ಹೀಗೇ ಇರಬಹುದಲ್ಲ.
ಅದು ಹೇಗೆ ಸಾಧ್ಯ? ಅಸಾಧ್ಯದ ಮಾತು.
 ಏಕೆ ಸಾಧ್ಯವಿಲ್ಲ ಹೇಳು.
ನೀನು ಬಿಡಪ್ಪ ದೇವರು, ನಿನಗೆ ಎಲ್ಲಾ ಸಾಧ್ಯ. ಆದರೆ ನನ್ನಿಂದ ಖಂಡಿತಾ ಸಾಧ್ಯವಿಲ್ಲ.
ಹೋಗಿ ಹುಡುಗನ ನೋಡು.
ನಿನ್ನ ಹೊರತು ಬೇರೆ ಯಾರೂ ಬೇಡ ಎನ್ನುವಾಗ ಅವನನ್ನು ಏಕೆ ನೋಡಲಿ? 
ಒಮ್ಮೆ ನೋಡು
ಇಲ್ಲ ನೋಡುವುದಿಲ್ಲ.
ನನಗೊಸ್ಕರ
ಖಂಡಿತಾ ಇಲ್ಲ, ಬೇಕೆಂದರೆ ಸಾಯಲು ಹೇಳು ಸಂತೋಷವಾಗಿ ಹಾಗೇ ಮಾಡುವೆ.
ನಿನ್ನ ಪ್ರಾಣ ತೆಗೆದುಕೊಂಡು ನಾನೇನು ಮಾಡಲಿ, ನಿಜವಾಗಿಯೂ ನಿನಗೆ, ನನ್ನ ಮೇಲೆ ಪ್ರೀತಿ ಇದ್ದರೆ ಹೋಗಿ ಹುಡುಗನನ್ನು ನೋಡು. ನೋಡಿದ ಮೇಲೂ ನಿನಗೆ ಅವನು ಬೇಡವೆನಿಸಿದರೆ ನಾನು ಮತ್ತೆಂದಿಗೂ ಮದುವೆಯ ಬಗ್ಗೆ ಮಾತನಾಡಲಾರೆ.
ಇದೆಂತಹ ಮಾತು, ಏಕೆ ನನ್ನನ್ನು ಪರೀಕ್ಷೆ ಮಾಡುವೆ.
ನನಗಾಗಿ ಒಮ್ಮೆ ನೋಡು.
ಸರಿ ಕೇವಲ ಬಂದ ಹುಡುಗನನ್ನು ನೋಡಿ ಬರಬೇಕು ಅಷ್ಟೇ ತಾನೇ, ಹೋಗಿಬರುವೆ. ನೀನು ನಿನ್ನ ಮಾತನ್ನು ಉಳಿಸಿಕೊಳ್ಳಬೇಕು.
ಆಗಲಿ, ಈಗ ಅಪ್ಪ ಅಮ್ಮ ನಿನಗಾಗಿ ಕಾಯುತ್ತಿದ್ದಾರೆ ಹೋಗಿ ಬಾ…
                           ——*—–
ಹುಡುಗನನ್ನು ನೋಡಿದೆಯಾ?
………
ನಿನಗೆ ಕೇಳಿದ್ದು, ಹುಡುಗನನ್ನು ನೋಡಿದೆಯಾ?
ಹೂಂ…..
ಮತ್ತೆ?
ಏನು ಹೇಳಲಿ, ತಿಳಿಯುತ್ತಿಲ್ಲ…
ಏಕೆ?
ನನ್ನನ್ನು ನೋಡಲು ಬಂದಿರುವುದು ನೀನೇನೋ ಅಥವಾ ನಿನ್ನ ಪ್ರತಿರೂಪವೋ….
ಮುಂದೆ..,.?
ತಿಳಿಯುತ್ತಿಲ್ಲ…,
ಹೋಗಿ ಅಪ್ಪ ಅಮ್ಮನಿಗೆ ಒಂದೇ ಮನಸ್ಸಿನಿಂದ ಹೇಳು.
..,..,.

3 thoughts on “ಕಥಾಗುಚ್ಛ

Leave a Reply

Back To Top