ಮಂಗ್ಲೇಶ್ ಡಬರಾಲ್
ಹಿಂದಿ ಕವಿ
ಕನ್ನಡಕ್ಕೆ:ಕಮಲಾಕರ ಕಡವೆ
“ನಮ್ಮ ಹೆದರಿಸುವಾತ”
ನಮ್ಮನ್ನು ಹೆದರಿಸುವವ
ಹೇಳುತ್ತಾನೆ ಹೆದರುವಂತದ್ದು ಏನೂ ಇಲ್ಲ
ನಾನು ಯಾರನ್ನೂ ಹೆದರಿಸುತ್ತಿಲ್ಲ
ನಮ್ಮನ್ನು ಹೆದರಿಸುವವ
ಗಾಳಿಯಲ್ಲಿ ಸೆಟೆದ ತನ್ನ ಬೆರಳು ತಿವಿದು ಹೇಳುತ್ತಾನೆ
ಯಾರಿಗೂ ಹೆದರುವ ಅಗತ್ಯವಿಲ್ಲ
ಅವನು ತನ್ನ ಮುಷ್ಟಿ ಬಿಗಿದು ಗಾಳಿಯಲ್ಲಿ ಬೀಸುತ್ತಾನೆ
ಮತ್ತು ಹೇಳುತ್ತಾನೆ ನೀವು ಹೆದರುತ್ತಿಲ್ಲ ತಾನೇ.
ನಮ್ಮನ್ನು ಹೆದರಿಸುವವ
ಕನ್ನಡಕದ ಹಿಂದಿನಿಂದ
ತನ್ನ ತಣ್ಣಗಿನ ಕ್ರೂರ ಕಣ್ಣಿಂದ ನಮ್ಮೆಡೆ ದುರುಗುಟ್ಟುತ್ತಾನೆ
ನೋಡುತ್ತಾನೆ ಯಾರು ಯಾರು ಹೆದರಿದ್ದಾರೆ
ಯಾವಾಗ ಜನರು ಹೆದರ ತೊಡಗುತ್ತಾರೋ ಅವನು ಹಿಗ್ಗಲು ತೊಡಗುತ್ತಾನೆ
ಮುಗುಳ್ನಗುತ್ತ ಹೇಳುತ್ತಾನೆ ಹೆದರುವ ಪ್ರಸಂಗವೇನೂ ಇಲ್ಲ
ನಮ್ಮನ್ನು ಹೆದರಿಸುವವ
ತಾನೇ ಹೆದರಿಕೊಳ್ಳುತ್ತಾನೆ
ಯಾರೂ ಹೆದರುತ್ತಿಲ್ಲವೆಂದು ಅವನಿಗೆ ಕಂಡಂತೆ
====