ಹೊಸ ವರ್ಷದ ಹೊಸಿಲಲ್ಲಿ….
ಡಿ.ಎಸ್.ರಾಮಸ್ವಾಮಿ
ಇವತ್ತು
ಈ ವರ್ಷಕ್ಕೆ ಕಡೆಯ ಮೊಳೆ
ಹೊಡೆದಾಯಿತು.
ಮತ್ತಷ್ಟು ಬಿಳಿಯ ಕೂದಲು
ಗಡ್ಡದಲ್ಲಿ ಹಣುಕಿವೆ
ತೆಲೆ ಮತ್ತಷ್ಟು ಬೊಕ್ಕಾಗಿದೆ.
ಇರುವ ಸಾಲದ ಕಂತುಗಳ
ಲೆಕ್ಕ ಹಾಕಿದರೆ ಬರೀ ನಿಟ್ಟುಸಿರು
ಆದಾಯ ತೆರಿಗೆಯ ಸ್ಲಾಬು ಏರಿದೆ.
ಎದೆ ಎತ್ತರ ಬೆಳೆದು ನಿಂತಿದ್ದಾಳೆ ಮಗಳು, ಮುಂದೆ ಹೇಗೋ ಎಂದು ತಳಮಳಿಸುವುದು ಜೀವ, ಮದುವೆಯ ಮಾತೆತ್ತಿದರೆ ಸಿಡುಕುತ್ತಾಳೆ.
ಚಿನ್ನದ ಸರ ಕೊಳ್ಳುವ ಇವಳ ಮಾತು,
ಅಪಥ್ಯ. ಸ್ವರ್ಣ ಬಾಂಡಿನ ಕಂತು ಮುಗಿದು
ಆಭರಣಗಳ ಆಯಬೇಕಿದೆ ಅಷ್ಟೆ.
ಜೊತೆಯಲ್ಲಿ ಇರದ ಸಂಜೆಗಳ ಲೆಕ್ಕ
ಮಗ ಮುಂದಿಡುತ್ತಿರುವಾಗ, ತಾಳೆಯಾಗದ
ಖಾತೆಗಳ ಯಾದಿಯ ಪಟ್ಟಿ ಮುಂದಿದೆ.
ಅನಾರೋಗ್ಯದ ಅಮ್ಮನ ನೋಡಲು
ಹೋಗದ ದಿನಗಳ ಲೆಕ್ಕ ಸಿಕ್ಕಿದರೂ
ಅಂದುಕೊಂಡದ್ದೊಂದೂ ಘಟಿಸದೆ,
ಬರಿಯ ನಿರಾಶೆ ಮರುಗಟ್ಟಿದೆ.
ಹಳೆಯ ನಿರ್ಧಾರಗಳ ನೆನಪು
ಮತ್ತೆ ಮರುಕಳಿಸಿ ತಲೆಶೂಲೆ
ಗೆ ಯಾವುದು ರಾಮಬಾಣ?
ಆಗೀಗ ಹುಕಿ ಹತ್ತಿದರೆ ಕರೆ ಮಾಡುವ ಗೆಳೆಯ ಇಯರ್ ಎಂಡ್ ಪಾರ್ಟಿಗೆ ಕರೆಯುತ್ತಿದ್ದಾನೆ, ಬಾರದಿದ್ದರೆ ಠೂ ಬಿಡುತ್ತೇನೆ ಎಂದಿದ್ದಾನೆ.
ಹುಟ್ಟುತ್ತಿದೆ ಹೊಸ ವರ್ಷ ಬೆಚ್ಚಿಬೀಳುವ ವೇಗದಲ್ಲಿ.ಕನ್ನಡಿಯ ಹಿಂದಣ ಪಾದರಸ ಸವೆದಿದೆ ಹೊಸ ಕನ್ನಡಿ ಇನ್ನಾದರೂ ತರಬೇಕು.
*****