ಮುಂದಾಗಲಿಲ್ಲ
ಇಷ್ಟು ವರುಷ ಎದೆಯೊಳಗಡಗಿಸಿಟ್ಟ ಮಾತುಗಳ ಮೂಟೆಗಳ
ಬಾರವನ್ನಿಳಿಸಿ ಹಗುರಾಗಲೆಂದೇ ಆ ಬೇಟಿಯನ್ನು ನಿಕ್ಕಿ ಮಾಡಿದ್ದರು
ಅಪರಿಚಿತ ಊರಿನ ಜನಸಂದಣಿಯಿರದ ಜಾಗ ಹುಡುಕಿ
ಕೂತರು.
ಮಾತು ಶುರು ಮಾಡುವುದಾದರೂ ಯಾರೆಂಬುದು ಅರ್ಥವಾಗದೆ
ಕುಳಿತೇ ಇದ್ದರೂ ದ್ಯಾನಸ್ಥ ಪ್ರತಿಮೆಗಳಂತೆ
ಬೆಳಿಗ್ಗೆ ಬಂದು ಕೂತವರು ಮೊದಲ ಮಾತಾಡುವ ಹೊತ್ತಿಗೆಮದ್ಯಾಹ್ನವಾಗಿತ್ತು
‘ಹೇಳು’ ಕೇಳಿದವನಿಗೇನೆ ಅನುಮಾನವಿತ್ತು
ತನ್ನ ದ್ವನಿಯವಳ ಕಿವಿ ತಲುಪಿದ್ದರ ಬಗ್ಗೆ ಅಷ್ಟುಮೆಲುವಾಗಿ ಮಾತಾಡಿದ್ದ
ಏನಿದೆ ಹೇಳಲು ಎಲ್ಲ ಮಾಮೂಲು
ಇವತ್ತು ಒಂದು ದಿನ ಬಿಡುವು ಮಾಡಿಕೊಂಡು ಬರುವಷ್ಟರಲ್ಲಿ ಸಾಕುಸಾಕಾಯ್ತು
ಎಲ್ಲಿಗೆ ಹೋಗುತ್ತಿದ್ದೀ ಏನು ಕೆಲಸ ಎಷ್ಟು ಹೊತ್ತಿಗೆ ತಿರುಗಿ ಬರುತ್ತೀ
ಪ್ರಶ್ನೆಗಳ ರಾಶಿಯನೆದುರಿಸಿ ಉತ್ತರಿಸಿ ಬರುವುದಿದೆಯಲ್ಲ ಇದರಷ್ಟು ಯಾತನಾದಾಯಕ ಮತ್ತೊಂದಿಲ್ಲ
ನಿನ್ನಂತೆ ಗಂಡಸಾಗಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ
ಒಂದು ಕ್ಷಣ ನಕ್ಕ!
ಬಾಯಿಬಿಟ್ಟು ಕೇಳುವ ಪ್ರಶ್ನೆಗಳಿಗುತ್ತರ ಹುಡುಕಿ ಹೇಳುವುದು ಸುಲಭ
ಮೌನದೊಳಗೆ ಎಕ್ಸರೆ ಕಣ್ಣುಗಳ ಮೂಲಕ
ಅನುಮಾನದ ಹಲವು ಹುತ್ತ ಕಟ್ಟುವವರಿಗೇನು ಮಾಡುವುದು.
ನನಗೀಗ ಥಯರಾಯ್ಡ್ ಶುರುವಾಗಿದೆಯಂತೆ
ಅದಕ್ಕೆ ಹೀಗೆ ದಪ್ಪವಾಗುತ್ತಿದ್ದೇನಂತೆ
ಸಾಯೋತನಕ ಮಾತ್ರೆನುಂಗುವ ರ‍್ಮ ನಲವತ್ತಕ್ಕೇ ಹೀಗಾದರೆ
ಎಪ್ಪತ್ತಕ್ಕೇನು ಕಾದಿದೆಯೊ
ಅದೇನು ಮಹಾ ಬಿಡು
ನನಗೂ ಈಗ ಶುಗರ್ ಶುರುವಾಗಿದೆ ಅನ್ನ ತಿನ್ನುವಂತಿಲ್ಲ ಡಯೆಟ್ ಹೇಳಿದ್ದಾರೆ
ನಿತ್ಯ ಮಾತ್ರೆ ಸೇವನೆ ಅನಿವಾರ್ಯ
ನಿನಗಿಂತ ಮೂರು ವರ್ಷ ದೊಡ್ಡವನು
ಇದಕ್ಕಿಂತ ಹೆಚ್ಚೇನು ಆಗದಿದ್ದರೆ ಸಾಕೆಂದು ದೇವರನ್ನು ಪ್ರಾರ್ಥಿಸೋಣ
ಅವಳ ಥೈರಾಯಿಡಿಗೆ ಇವನು
ಇವನ ಶುಗರಿಗೆ ಅವಳೂ ಸಲಹೆ ಸೂಚನೆ ಸಾಂತ್ವಾನ
ಹೇಳುವಷ್ಟರಲ್ಲಿ ಸಂಜೆಯಾಗಿತ್ತು
ಹೊರಡೋಣವಾ ಲೇಟಾಯ್ತು ಕೇಳಿದವಳಿಗೆ ಗೋಣು ಆಡಿಸಿ ಬಸ್ಸು ಹತ್ತಿಸಿ
ತಾನೂ ತನ್ನ ಬಸ್ಸು ಹತ್ತಿ ಕೂತ
ಹೇಳಬೇಕಾದ್ದೆಲ್ಲ ಎದೆಯೊಳಗುಳಿದು
ಹೊತ್ತು ತಂದಿದ್ದ ಮೂಟೆಗಳೊಂದಿಗೆ ಮನೆಗೆ ಮರಳಿದರು.
ಮತ್ತೆ ಬೇಟಿ ಮಾಡಲು ಇಬ್ಬರೂ ಮುಂದಾಗಲಿಲ್ಲ.