ಕವಿತೆಯ ಜಾಡು ಹಿಡಿದು
ಸ್ಮಿತಾಅಮೃತರಾಜ್. ಸಂಪಾಜೆ
ಈ ಕವಿತೆ ಒಮ್ಮೊಮ್ಮೆ ಅದೆಷ್ಟು ಜಿಗುಟು ಮತ್ತುಅಂಟಂಟು ಅಂದ್ರೆ ಹಲಸಿನ ಹಣ್ಣಿನ ಮೇಣದ ತರ.ಮತ್ತೆ ಮತ್ತೆ ತಿಕ್ಕಿದಷ್ಟೂ ಅಂಟಿಕೊಳ್ಳುತ್ತಾ,ಬಿಡದೇ ಕಾಡುತ್ತಾ ,ಸತಾಯಿಸುತ್ತಾ,ಹಿಂದೆ ಮುಂದೆ ಸುತ್ತಿಸುಳಿದು ಯಾವುದೋ ಭಾವನಾ ತೀರಕ್ಕೆ ಲಗ್ಗೆಯಿಡುತ್ತಾ ತನ್ನನ್ನು ತಾನು ಮರೆವಿಗೆ ನೂಕಿಬಿಡುತ್ತದೆ.ಅರೆ ಕ್ಷಣವೂ ಬಿಟ್ಟೂ ಬಿಡದ ಆತ್ಮಸಂಗಾತಿಯಂತೆ ಪಕ್ಕಕ್ಕಿರುತ್ತದೆ.ಕವಿತೆ ಯಾವೊತ್ತೂ ನನ್ನ ಕೈ ಬಿಡಲಾರದು ಎಂಬ ಗುಂಗಿನಲ್ಲೇ, ತುಸು ಹೆಚ್ಚೇ ಹಚ್ಚಿಕೊಂಡು,ಯಾವುದಕ್ಕೂವಿನಾಕಾರಣ ತಲೆಕೆಡಿಸಿಕೊಳ್ಳದೇ,ಕವಿತೆಯನ್ನು ನನ್ನ ತೆಕ್ಕೆಯೊಳಗಿಟ್ಟೋ..ಅಥವಾ ಕವಿತೆಯತೆಕ್ಕೆಯೊಳಗೆ ತಾನು ಬಿದ್ದೋ,ಒಟ್ಟಿನಲ್ಲಿ ಕವಿತೆಯ ಸಾಂಗತ್ಯದಲ್ಲಿ ಬದುಕು ಸುಖಿ ಅಂತಗುನುಗಿಕೊಳ್ಳುತ್ತಿರುವಾಗಲೇ..ಹಾದಿಯುದ್ದಕ್ಕೂ ಜತೆಗೂಡಿ ಹೆಜ್ಜೆ ಹಾಕಿದಕವಿತೆ,ಯಾವುದೋ ಇಳಿಜಾರಿನಲ್ಲಿ ಕಳೆದು ಹೋಗಿ ಬಿಟ್ಟಿದೆ.ಅಥವಾ ಆವರಿಸಿಕೊಂಡ ಯಾವುದೋ ಹಾಳುಮರೆವಿನಲ್ಲಿ,ಕವಿತೆಯ ಕೈಯ ನಾನೇ ಬಿಟ್ಟು ದೂರ ಸಾಗಿ ಬಂದಿರುವೆನೋಅರ್ಥವಾಗುತ್ತಿಲ್ಲ.ಅಂತೂ ಇಂತು ಕವಿತೆ ನಾಪತ್ತೆಯಾಗಿದೆ.ಕವಿತೆ ಈ ಕ್ಷಣ ನನ್ನಜೊತೆಗಿಲ್ಲ.ಹಾಗಂತ ಕವಿತೆ ಇರದ ಊರಿನಲ್ಲಿ ನಾ ಬದುಕಲು ಸಾಧ್ಯವೇ?.
ಕವಿತೆ ಇರದ ಗಳಿಗೆಯನ್ನು ಊಹಿಸಲು ಸಾಧ್ಯವೇ?.ಜೀವಚೈತನ್ಯದಿಂದ ಉಕ್ಕಿ ಹರಿಯುತ್ತಿದ್ದ ಭಾವಗಳೆಲ್ಲಾ ಬರಡು ಬರಡಾಗಿವೆ.ಪ್ರಪಂಚ ಇಷ್ಟೊಂದುನೋವಿನಲ್ಲಿ ತುಂಬಿದೆಯಾ ಅಂತ ಖೇದವಾಗುತ್ತಿದೆ.ಪ್ರತಿದಿನ,ಪ್ರತಿ ಕ್ಷಣ ನೋವಿನಸಂಗತಿಗಳೇ.ಅಲ್ಲಿ ಕೊಲೆ,ರಕ್ತಪಾತ,ಹಾದರ, ಅತ್ಯಾಚಾರ,ಆತ್ಮಹತ್ಯೆ. ಅಯ್ಯೋ..! ಬದುಕುಎಷ್ಟೊಂದು ಕೆಟ್ಟದ್ದು ಮತ್ತು ಘೋರವಾಗಿದೆಯಲ್ಲಾ..?.ಇವರೆಲ್ಲರ ಎದೆಯೊಳಗೆ ಭಾವದಸೆಲೆಗಳೇ ಇರಲಿಲ್ಲವೇ?.ಒಂದೇ ಒಂದು ಗುಟುಕು ಭಾವದೊರತೆ ಸಾಕಿತ್ತಲ್ಲವೇ..?
ಅತ್ಯಾಚಾರಿಗೆಆಚಾರ ತುಂಬಿಸಲು,ಆತ್ಮಹತ್ಯೆ ಮಾಡಿಕೊಂಡವರಿಗಚೈತನ್ಯಮರುಕಳಿಸಿಜೀವದಾಯಿನಿಯಾಗಲು, ಬಂದೂಕು ಬಾಂಬು ಹಿಡಿದ ಕೈಗಳಲ್ಲಿ ಪೆನ್ನು ಹಿಡಿದು ಅಕ್ಷರದಹೂವರಳಿಸಲು.ಅಬ್ಭಾ! ಎದೆ ನಡುಗುತ್ತಿದೆ.ಕಣ್ಣೆದುರಿಗೆ ಭಯಾನಕ ಭವಿಷ್ಯದ ನೆರಳುಸೋಕಿ ಹೋದಂತಾಗುತ್ತಿದೆ. ಕವಿತೆ ಇರದ ಊರಿನಲ್ಲಿ ಮಾತ್ರ ಇಂತಹ ಅವಘಡಗಳುಸಂಭವಿಸುತ್ತಿವೆಯಾ..ಅಂತ ಒಂದು ಅನುಮಾನ ಕೂಡ ಸುಳಿದುಹೋಗುತ್ತದೆ.ಯಾಕೆಂದರೆ ಕವಿತೆ ಕಪಟವಿಲ್ಲದ್ದು ಅಂತ ಬಲ್ಲವರು ನುಡಿದಿದ್ದಾರೆ.ಜಗತ್ತಿನಎಲ್ಲಾ ಸಂಕಟಗಳಿಗೆ ಮೂಕ ಸಾಕ್ಷಿಯಾಗುತ್ತಾ ಹೃದಯ ಬಿಕ್ಕಿ ಬಿಕ್ಕಿ ಮೊರೆಯುತ್ತಿದೆ.ಕವಿತೆಪಕ್ಕಕ್ಕಿದ್ದರೆ ಎಲ್ಲವನ್ನೂ ಹೇಳಿಕೊಂಡು ನಿರಾಳವಾಗಿ ಬಿಡುತ್ತಿದ್ದೆನೇನೋ.ಮನೆಯ ಬಾಗಿಲುತೆರೆಯಲೇ ಭಯವಾಗುವಷ್ಟು ಆತಂಕ ಕಾಡುತ್ತಿದೆ.ಅಕ್ಕ ಪಕ್ಕದ ಊರಿನ ಭಯವಿಹ್ವಲಸಂಗತಿಗಳು,ಯಾವ ಕ್ಷಣ ಎಲ್ಲಿ ಇಲ್ಲಿಗೂಬಂದೆರಗಿ ಬಿಡಬಹುದೆಂಬ ಗುಮಾನಿಯಲ್ಲೇ ಬದುಕು ಕಳೆಯುವಂತಾಗಿದೆ. ಇಷ್ಟಕ್ಕೆಲ್ಲಾಕಾರಣ ಈ ಕವಿತೆ.
ಹೇಳದೇ ಕೇಳದೇ ಕಣ್ತಪ್ಪಿಸಿಕೊಂಡು ಪರಾರಿಯಾಗಿ ಬಿಟ್ಟಿದೆ.ಕವಿತೆಯಬಗಲಲ್ಲಿ ನಾನು ಎಷ್ಟು ನಿಶ್ಚಿಂತಳು ಎಂಬುದು ಈಗ ಕವಿತೆಯ ಅನುಪಸ್ಥಿತಿಯಲ್ಲಿ ನನಗೆಮನವರಿಕೆಯಾಗುತ್ತಿದೆ.ಆದರೆ ಒಂದಂತೂ ದಿಟ.ಕವಿತೆಯ ಮೇಲೆ ನಾ ಎಷ್ಟೇ ಹರಿಹಾಯ್ದರೂ,ಕೋಪಗೊಂಡರೂ,ಮುನಿಸಿಕೊಂಡರೂ..ಕವಿತೆ ಮತ್ತೆ ನನ್ನ ಹತ್ತಿರ ಕುಳಿತುತಲೆ ನೇವರಿಸಿ,ಜಗದ ಸಂಕಟಗಳಿಗೆ,ನೋವುಗಳಿಗೆ,ಕಂಬನಿ ಮಿಡಿಯುತ್ತಾ,ಅಕ್ಷರದಮುಲಾಮು ಲೇಪಿಸುತ್ತಾ ನಿರಾಳವಾಗುವುದನ್ನ ತಾಳ್ಮೆಯಿಂದ ಕಲಿಸಿ ಕೊಟ್ಟೆ ಕೊಡುತ್ತದೆ.ಈಗಅದೆಲ್ಲಿಯೋ ಅಳುವ ಮಗುವ ರಮಿಸಲು,ಅವಳ ಕಣ್ಣೀರಿಗೆ ಸಾಂತ್ವಾನವಾಗಲು,ಮತ್ಯಾರದೋಬದುಕಿನ ಸಂಕಟಕ್ಕೆ ಕಿವಿಯಾಗಲು ಕವಿತೆ ತೆರಳಿರಬಹುದೆಂಬ ಬಲವಾದ ನಂಬಿಕೆಯಂತೂನನಗೆ ಇದ್ದೇ ಇದೆ.ಕವಿತೆಯ ಬಲದಿಂದಷ್ಟೇ ಬದುಕು ಚಲಿಸುತ್ತಿದೆಯೆಂಬುದು ನನಗಂತೂಅರಿವಿಗೆ ಬಂದ ಸಂಗತಿ.
ಈ ಚುಮು ಚುಮು ನಸುಕಿನಲ್ಲಿ ಚಳಿ ಕೊರೆಯುತ್ತಿದೆ.ಸಣ್ಣಗೆಬಿಸಿಲೇರುತ್ತಿದೆ.ಹೊರಗೆ ಅಂಗಳದಲ್ಲಿ ಯಾವುದೋ ಕೆಲಸಕ್ಕೆ ಕೈ ಹಚ್ಚಿಕೊಳ್ಳುತ್ತಾ,ಬಿಸಿಲುಬಿದ್ದ ಕಡೆಯೇ ಬೆನ್ನು ಮಾಡಿ ನಿಲ್ಲಬೇಕೆಂದು ಅನ್ನಿಸುತ್ತಿರುವಾಗಲೇ.. ಆ ಹೂ ಬಿಸಿಲಲ್ಲಿ ಸಣ್ಣರೆಂಬೆಯ ಮೇಲೆ ಬಣ್ಣ ಬಣ್ಣದ ರೆಕ್ಕೆಯ ಚಿಟ್ಟೆಯೊಂದು ಮೆಲ್ಲಗೆ ರೆಕ್ಕೆ ಕದಲಿಸುತ್ತಾಹಾಗೇ ಎಷ್ಟೋ ಹೊತ್ತಿನಿಂದ ಅದೇ ಭಂಗಿಯಲ್ಲಿ ಕುಳಿತು ಕೊಂಡಿದೆ.ಅಹಾ! ರೆಕ್ಕೆಯಕದಲುವಿಕೆಯಲ್ಲೇ ನಾ ಅಂದಾಜಿಸಬಲ್ಲೆ.ಕವಿತೆ ಯಾವುದೋ ಭಾವನಾ ತೀರಕ್ಕೆ ಯಾನಕೈಗೊಂಡು,ಕವಿತೆಯೊಂದಿಗೆ ಮೌನ ಸಂವಾದಕ್ಕಿಳಿದಿದೆ ಅಂತ.ಚಿಟ್ಟೆಯ ರೆಕ್ಕೆಯಲ್ಲಿ ಕುಳಿತುಗುನುಗುವ ಕವಿತೆ, ಸಧ್ಯ! ನನ್ನ ಮನೆಯ ಅಂಗಳದವರೆಗೆ ಬಂದುಕುಳಿತ್ತಿದೆಯೆಂಬುದು ನಿಚ್ಚಳವಾಗುತ್ತಿದೆ.ಎಷ್ಟೋ ಹೊತ್ತಿನವರೆಗೂ ನಾನೂ ಇದೇ ಗುಂಗಿನಲ್ಲಿಚಿಟ್ಟೆಯನ್ನು ನೋಡುತ್ತಾ ಕುಳಿತುಕೊಂಡಿರುವೆನಲ್ಲಾ..!.ನನಗೂ ರೆಕ್ಕೆಬಂದಂತೆನ್ನಿಸುತ್ತಿದೆ.
ಕವಿತೆಯೊಂದು ಎಲ್ಲರ ಜೀವಗಳಲ್ಲಿ ಮಿಡುಕಾಡುವ ಭಾವವಾಗಲಿ.ಕವಿತೆಬದುಕು ಹಸನುಗೊಳಿಸಬಹುದು ಅಂತ ನೆನೆದುಕೊಳ್ಳುತ್ತಲೇ ಕವಿತೆಯೊಂದಿಗೆಒಳಗಡಿಯಿಡುತ್ತಿರುವೆ.ಬದುಕು ಸುಂದರ ಅಂತ ಅನ್ನಿಸುತ್ತಿದೆ ಈ ಹೊತ್ತಲ್ಲಿ.
=============
ಚೆಂದ ಲಹರಿ.. ಕವಿತೆ ತರಹನೇ ಸಾಚಾ..
ಚಿಟ್ಟೆಯ ನೋಡುತ್ತಾ ಕವಯಿತ್ರಿ ಚಿಟ್ಟೆಯಾಗಿ ಕವಿತೆಯ ಧ್ಯಾನಿಸಿದಂತಿದೆ …..ಕವಿತೆ ದುಃಖಿಗಳ ಸಂತೈಸಲು ಹಳ್ಳಿಯ ಕಾಡಿನಿಂದ ನಗರಕ್ಕೆ ಪಯಣ ಹೊರಟಿದೆ. ಆದರೆ ನಗರದಲ್ಲಿ ಕವಿತೆ ಬುದ್ಧನಂತೆ ಏಕಾಂಗಿಯಾಗಿದೆ. ಆದರೆ ಆತ್ಮ ವಿಶ್ವಾಸ ಕಳೆದುಕೊಂಡಿಲ್ಲ. ಕವಿತೆ ಎಂದರೆ ಸಾಂತ್ವಾನ, ಕವಿತೆ ಎಂದರೆ ಎಲೆಯ ಮೇಲೆ ಧ್ಯಾನಿಸುವ ಎಳೆ ಬಿಸಿಲು ….
ಪದ್ಯದಂತಹ ಗದ್ಯ. ಚೆನ್ನಾಗಿದೆ ಸ್ಮಿತಕ್ಕ