ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—48

ಮತ್ತೆ ಮರುದನಿಗೊಂಡ ಅಸ್ಪೃಶ್ಯತೆ ನೋವುಗಳು……

ನನ್ನ ವಿವಾಹವೇನೋ
ಸಹಜ ಪ್ರಕ್ರಿಯೆಯಂತೆ ನಿರಾತಂಕವಾಗಿ ನಡೆಯಿತು. ಹಲವರು ಶುಭಹಾರೈಕೆಗಳಿಂದ ನಮ್ಮ ನಿಲುವುಗಳನ್ನು ಬೆಂಬಲಿಸಿದರು. ಕೆಲವರು ನೇರ ನನ್ನ ಕಿವಿಗೂ ಕೇಳಿಸುವಂತೆ ಟೀಕಾಸ್ತ್ರಗಳ ಬಳುವಳಿಯನ್ನೂ ಕೊಡಮಾಡಿದರು. ಬಹುತೇಕ ನಮ್ಮ ಜಾತಿಯ ಬಂಧುಗಳಿಗೆ ನಾನು ಅಂತರ್ಜಾತಿಯ ವಿವಾಹ ಮಾಡಿಕೊಂಡದ್ದು ಸಮಂಜಸವೆನಿಸಲಿಲ್ಲ. “ಉತ್ತಮ ಶಿಕ್ಷಣ ಪಡೆದು ಒಂದು ಒಳ್ಳೆಯ ಉದ್ಯೋಗದಲ್ಲಿ ಇದ್ದವನು ಸ್ವಜಾತಿಯ ಹುಡುಗಿಯನ್ನೇ ಮದುವೆ ಮಾಡಿಕೊಂಡು ಸ್ವಜಾತಿಯ ಹುಡುಗಿಯೊಬ್ಬಳಿಗೆ ಬದುಕು ನೀಡಬಹುದಿತ್ತು. ಓದಿದ ಮತ್ತು ಉತ್ತಮ ಉದ್ಯೋಗ ಪಡೆದ ಯುವಕರೆಲ್ಲ ಹೀಗೆ ಬೇರೆ ಸಮುದಾಯದ ಹುಡುಗಿಯನ್ನು ಇಷ್ಟಪಟ್ಟು ಮದುವೆ ಮಾಡಿಕೊಂಡರೆ ನಮ್ಮ ಸಮುದಾಯದ ಯುವತಿಯರ ಭವಿಷ್ಯದ ಗತಿಯೇನು? ಇದು ಸ್ವಜಾತಿಗೆ ಮಾಡಿದ ಅನ್ಯಾಯವೇ ಅಲ್ಲವೇ?” ಇತ್ಯಾದಿ ತರ್ಕಗಳೂ ಅಲ್ಲಲ್ಲಿ ವ್ಯಕ್ತವಾದವು.

            ನನ್ನ ಬಳಿ ಉತ್ತರ ಇರಲಿಲ್ಲ. ಇದರ ಪರಿಣಾಮವಾಗಿ ಒಂದಷ್ಟು ಸ್ವಜಾತಿ ಬಂಧುಗಳು ನನ್ನಿಂದ ದೂರವಾದದ್ದೂ ನಿಜವೇ...

            ಪ್ರಾಚಾರ್ಯ ಕೇ.ಜಿ.ನಾಯ್ಕರು ಕಾಲೇಜಿನ ಎಲ್ಲ ಸಿಬ್ಬಂದಿಗಳ ಪರವಾಗಿ ಸ್ಟಾಫ್ ಮೀಟಿಂಗಿನಲ್ಲಿ ನನ್ನನ್ನು ಅಭಿನಂದಿಸಿದರು. ನಮ್ಮ ನೆರೆಯ ವಸತಿಗೃಹದಲ್ಲಿಯೇ ವಾಸಿಸುತ್ತಿದ್ದ ಭೌತಶಾಸ್ತ್ರ ವಿಭಾಗದ ಪ್ರೊ. ಏ.ಡಿ. ಗಾಂವಕರ ಅವರು, ಇತಿಹಾಸ ಬೋಧಿಸುವ ಪ್ರೊ. ಓ.ಟಿ. ತಾಂಡೇಲ್ ಅವರು ನಮ್ಮನ್ನು ತಮ್ಮ ಮನೆಗೇ ಕರೆಸಿಕೊಂಡು ಉಡುಗೊರೆ ನೀಡಿ ಆಶೀರ್ವದಿಸಿದರು.

            ಬಡ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ ನಡೆಸುತ್ತಿದ್ದ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಪ್ರೊ. ನಿರ್ಮಲಾ ಗಾಂವಕರ ತಮ್ಮ ಗಾಂಧಿ ನಿವಾಸಕ್ಕೆ ಕರೆದು ಊಟ ಉಡುಗೊರೆಗಳನ್ನು ನೀಡಿ ಆಶೀರ್ವಾದ ಮಾಡಿದರು. ಅಂದಿನ ದಿನಗಳಲ್ಲಿ ಇವೆಲ್ಲವೂ ನಮಗೆ ಆತ್ಮವಿಶ್ವಾಸ ತುಂಬುವ ಚೇತೋಹಾರಿ ಸಂಗತಿಗಳಾಗಿದ್ದವು. ನನ್ನ ನೆಚ್ಚಿನ ಗುರುಗಳೂ ನಮ್ಮ ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಪ್ರೊ.ವಿ.ಏ ಜೋಷಿಯವರು, ನಮ್ಮ ಆಫೀಸ್ ಅಧೀಕ್ಷಕರಾದ ಶ್ರೀಕೃಷ್ಣಾನಂದ ಶೆಟ್ಟಿಯವರು ನಮ್ಮ ಮನೆಗೇ ಬಂದು ನಮ್ಮನ್ನು ಹರಿಸಿದರಲ್ಲದೆ ನಮ್ಮ ಆತಿಥ್ಯವನ್ನು ಸ್ವೀಕರಿಸಿ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.

            ನನ್ನ ಆತ್ಮೀಯರಲ್ಲಿಯೇ ಒಬ್ಬರಾಗಿದ್ದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಎಂ.ಡಿ.ರಾಣಿ ನಮ್ಮ ಮನೆಗೆ ಬಂದು ನಮ್ಮನ್ನು ಅಭಿನಂಧಿಸಿದರಾದರೂ ನಾವು ನೀಡಿದ ಆತಿಥ್ಯವನ್ನು ಯಾವುದೋ ಕಾರಣ ನೀಡಿ ನಿರಾಕರಿಸಿದ್ದು, ನಮ್ಮಂತೆಯೇ ಅಧ್ಯಾಪಕರ ವಸತಿಗೃಹದಲ್ಲಿ ನೆಲೆಸಿದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಆರ್.ಪೈ ದಂಪತಿಗಳು ನಮ್ಮ ವಿವಾಹ ಸಂಬಂಧಕ್ಕೆ ಆಶೀರ್ವಾದ ಮಾಡಿದರೂ ನನ್ನ ಶ್ರೀಮತಿ ನಿರ್ಮಲಾ ಅವರೊಡನೆ ಮರಾಠಿಯಲ್ಲಿ ಮಾತನಾಡುವುದನ್ನು ಕೇಳಿ ಅಚ್ಚರಿಗೊಂಡರಲ್ಲದೇ “ಮರಾಠಾ ಸಮುದಾಯದ ಹುಡುಗಿ ದಲಿತ ಹುಡುಗನ ಕೈ ಹಿಡಿವ ದುರ್ದೈವಕ್ಕೆ ವಿಷಾದವನ್ನು ವ್ಯಕ್ತಪಡಿಸಿದ ಸನ್ನಿವೇಶಗಳು ನನ್ನೊಳಗೆ ಸುಪ್ತವಾಗಿದ್ದ ಅಸ್ಪೃಶ್ಯತೆಯ ನೋವುಗಳಿಗೆ ಮರುದನಿಗೊಡುವಂತೆ ಮಾಡಿದ್ದವು.

            ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಇನ್ನೊಂದು ಅಹಿತಕರ ಘಟನೆಯೂ ನಡೆಯಿತು.

            ಕಾಲೇಜಿನ ನನ್ನ ಸಹೋದ್ಯೋಗಿಗಳಿಗೂ ನಮ್ಮ ವಿದ್ಯಾರ್ಥಿ ಬಳಗಕ್ಕೂ “ನಮ್ಮ ಪ್ರೇಮ ವಿವಾಹದ ಸಂಗತಿ ಕೆಲವು ದಿನಗಳ ವರೆಗೆ ಕುತೂಹಲದಿಂದ ಚರ್ಚೆಯ ವಿಷಯವಾದದ್ದು ಸಹಜವೇ ಆಗಿತ್ತು. ಅದರಲ್ಲಿಯೂ ಮುಖ್ಯವಾಗಿ ವಿದ್ಯಾರ್ಥಿನಿಯರಲ್ಲಿ ಈ ಕುತೂಹಲ ಇನ್ನಷ್ಟು ಅಧಿಕವಾಗಿಯೇ ಇರುತ್ತದೆ.

            ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಆಯ್ದುಕೊಂಡ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಹಜವಾಗಿಯೇ ಅಧ್ಯಾಪಕರಿಗೆ ಇತರ ವಿದ್ಯಾರ್ಥಿಗಳಿಗಿಂತ ನಿಕಟವಾಗಿ ಇರುತ್ತಾರೆ. ಅಂಥ ವಿದ್ಯಾರ್ಥಿನಿಯರ ಒಂದು ಗುಂಪು ನಾನು ಕಾಲೇಜಿನಲ್ಲಿ ಪಾಠ ಮಾಡುತ್ತಿರುವ ಸಮಯ ನೋಡಿಕೊಂಡು ನಮ್ಮ ವಸತಿಗೃಹಕ್ಕೆ ಹೋಗಿ ನನ್ನ ಪತ್ನಿಯನ್ನು ಮಾತಾಡಿಸಿ ಪರಿಚಯ ಮಾಡಿಕೊಂಡಿದ್ದಾರೆ. ಅವಳ ಓದು ಅಭಿರುಚಿಯ ಕುರಿತು ಚರ್ಚಿಸಿ ತಿಳಿದುಕೊಂಡಿದ್ದಾರೆ. ಮಾತುಕತೆಗಳು ಮುಗಿಯುತ್ತಿದ್ದಂತೆ ನನ್ನ ಪತ್ನಿ ಅವರ ಉಪಚಾರಕ್ಕಾಗಿ ಒಂದಿಷ್ಟು ಚಹಾ-ತಿಂಡಿಗಳ ವ್ಯವಸ್ಥೆ ಮಾಡಲು ಅಡುಗೆ ಮನೆಗೆ ಹೋಗಿದ್ದಾಳೆ. ಹತ್ತು ನಿಮಿಷದಲ್ಲಿ ಅವಳು ಎಲ್ಲವನ್ನೂ ಸಿದ್ಧಪಡಿಸಿಕೊಂಡು ಹೊರಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ. ವಿದ್ಯಾರ್ಥಿನಿಯರ ಇಡಿಯ ಗುಂಪು ಏನೂ ಹೇಳದೆ ಕೇಳದೆ ಅಲ್ಲಿಂದ ಕಾಲ್ಕಿತ್ತಿದೆ!

            ನಾನು ಮನೆಗೆ ಬಂದಾಗ ನನ್ನ ಪತ್ನಿ ವಿಷಯವನ್ನು ವಿಷಾದದಿಂದ ತೋಡಿಕೊಂಡಳು. “ಅವರು ಯಾಕೆ ಹೀಗೆ ಮಾಡಿದರು?.... ಹೇಳಿಯಾದರೂ ಹೋಗಬಹುದಿತ್ತಲ್ಲ!” ಎಂದು ಬೇಜಾರು ಮಾಡಿಕೊಂಡಳು. ಅವಳ ಪ್ರಶ್ನೆಗಳಿಗೆ ಉತ್ತರ ತಿಳಿದಿದ್ದರೂ ನಾನು ಹೇಳಲಾರದ ಅಸಹಾಯಕನಾಗಿದ್ದೆ. “ಅವರಿಗೆ ಮುಂದಿನ ಪಿರಿಯಡ್ ವೇಳೆ ಆಗಿರಬೇಕು”ಎಂದು ನಾನು ಅನಿವಾರ್ಯ ಸುಳ್ಳು ಹೇಳಿ ಸಮಾಧಾನ ಪಡಿಸಿದ್ದೆ.

            ಎಂಟು ಹತ್ತು ವರ್ಷಗಳ ಬಳಿಕ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಒಂದು ಕಾರ್ಯಕ್ರಮ. ಅಲ್ಲಿ ಡಾ. ಆರ್.ವಿ. ಬಂಢಾರಿಯವರು ಹುಟ್ಟು ಹಾಕಿದ ‘ಸಹಯಾನ’ ಎಂಬ ಸಂಸ್ಥೆಯಿದೆ. ಪ್ರತಿವರ್ಷವೂ ಪ್ರಗತಿಪರ ಚಿಂತನೆಯ ಮಹತ್ವದ ಕಾರ್ಯಕ್ರಮಗಳನ್ನು ಸಂಘಟಿಸುವುದು ಸಂಸ್ಥೆಯ ಉದ್ದೇಶ.

            ಅಂದಿನ ಕಾರ್ಯಕ್ರಮದಲ್ಲಿ ನಾನೂ ವೇದಿಕೆಯಲ್ಲಿ ಉಪಸ್ಥಿತನಾಗಿದ್ದೆ. ಇದೇ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನಾಡಿನ ನಾಮಾಂಕಿತ ಲೇಖಕಿ ಡಾ. ವಿನಯಾ ವಕ್ಕುಂದ ಹತ್ತು ವರ್ಷಗಳ ಹಿಂದೆ ತಾನು ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಸಂಗತಿಯನ್ನು ನೆನಪಿಸಿಕೊಂಡು ನವವಿವಾಹಿತನಾಗಿದ್ದ ನಮ್ಮ ಮನೆಗೆ ಗೆಳತಿಯರ ಗುಂಪಿನೊಡನೆ ಭೇಟಿ ನೀಡಿದ ಸಂದರ್ಭವನ್ನು ವಿವರಿಸಿದರು. ಅಂದು ನನ್ನ ಶ್ರೀಮತಿ ಸಿದ್ಧಪಡಿಸಿದ ಚಹಾತಿಂಡಿಯನ್ನು ಸ್ವೀಕರಿಸಿದರೆ ನಮಗೆ ಮೈಲಿಗೆಯಾಗುತ್ತದೆ ಎಂಬ ಭಯದಿಂದ ನಾವೆಲ್ಲ ಹೇಳದೇ ಕೇಳದೇ ಮರಳಿ ಕಾಲೇಜಿಗೆ ಬಂದಿದ್ದೆವು ಎಂಬ ಸಂಗತಿಯನ್ನೂ ವಿವರಿಸಿ ತಮ್ಮ ಅಂದಿನ ಅಜ್ಞಾನ ಮತ್ತು ಮೂಢನಂಬಿಕೆಯ ಕುರಿತು ತಮ್ಮ ಭಾಷಣದಲ್ಲಿಯೇ ವಿಷಾದ ವ್ಯಕ್ತಪಡಿಸಿದ್ದರು!

            ನಾನು ಬಾಲ್ಯದಿಂದಲೂ ಎದುರಿಸಿದ ಅಸ್ಪೃಶ್ಯತೆಯ ನೋವಿನ ಪ್ರಸಂಗಗಳಲ್ಲಿ ಕೆಲವನ್ನು ಹಿಂದಿನ ನನ್ನ ಬರಹಗಳಲ್ಲಿ ಪ್ರಸ್ತಾಪಿಸಿದ್ದೇನೆ. ಅವುಗಳಲ್ಲಿ ಮುಖ್ಯವಾದದ್ದು ದೇವಾಲಯಗಳ ಪ್ರವೇಶಕ್ಕೆ ನಮಗೆ ನಿಷೇಧವಿರುವುದೂ ಒಂದು.

            ನನ್ನ ಕಾಲೇಜಿನ ದಿನಗಳಲ್ಲಿಯೂ ನಮ್ಮೂರಿನ ಯಾವುದೇ ದೇವಾಲಯಗಳಿಗೆ ಪ್ರವೇಶಿಸುವ ಸ್ವಾತಂತ್ರ್ಯ ನಮಗೆ ಇರಲಿಲ್ಲ. ದೇವಾಲಯದ ಕಂಪೌಂಡಿನ ಆಚೆಯೇ ನಿಂತು ನಮ್ಮ ಜಾತಿ ಬಂಧುಗಳು ಹಲಗೆ ವಾದ್ಯ ಮತ್ತು ಪಂಚವಾದ್ಯದ ಸೇವೆ ಸಲ್ಲಿಸುತ್ತಿದ್ದರು. ಅಪರೂಪದ ಸಂದರ್ಭದಲ್ಲಿ ನಾನು ದೇವರ ಪೂಜಾ ಕಾರ್ಯಕ್ರಮಕ್ಕೆ ಹೋದರೂ ನಮ್ಮ ಜಾತಿಯ ಜನರೊಡನೆಯೇ ಕಂಪೌಂಡಿನ ಈಚೆಯೇ ನಿಂತು ಕೈಮುಗಿದು ಬರುತ್ತಿದ್ದೆ. ದೇವಾಲಯದ ಒಳಗೆ ಹೋಗುತ್ತಿದ್ದ ನನ್ನ ಮೇಲ್ಜಾತಿಯ ಸಹಪಾಠಿಗಳು ನನಗೆ ದೇವಾಲಯದೊಳಗೆ ಬರುವಂತೆ ಒತ್ತಾಯ ಮಾಡಿ ಕರೆಯುತ್ತಿದ್ದರು. ಆದರೆ ನಮ್ಮ ಜಾತಿಯ ಹಿರಿಯ ಜನರೇ “ನಾವು ದೇವಾಲಯದ ಒಳಗೆ ಹೋದರೆ ದೇವರಿಗೆ ಮೈಲಿಯಾಗುತ್ತದೆ” ಎಂದು ನನ್ನನ್ನು ಭಯಪಡಿಸಿ ತಡೆಯುತ್ತಿದ್ದರು.

            ನಾನು ಕಾಲೇಜು ಅಧ್ಯಾಪಕನಾದ ಮೇಲೆ ಸುಶಿಕ್ಷಿತರ ಪಂಕ್ತಿಯನ್ನು ಸೇರಿದೆನಾದ್ದರಿಂದ ಈಗ ಅಲ್ಲಲ್ಲಿ ದೇವಾಲಯಗಳ ಪ್ರವೇಶಾವಕಾಶ ದೊರೆಯುತ್ತಿತ್ತು. ಸಾಮಾಜಿಕ ವಾತಾವರಣದಲ್ಲಿಯೂ ಉಂಟಾದ ಬದಲಾವಣೆಯಿಂದ ತೀರ ವಿರಳವಾಗಿಯಾದರೂ ನಮ್ಮ ಜಾತಿ ಬಂಧುಗಳು ಕೆಲವು ದೇವಾಲಯಗಳಿಗೆ ಅಂಜುತ್ತಲೇ ಪ್ರವೇಶ ಮಾಡಿ ಬರುತ್ತಿದ್ದರು.

            ನನಗೆ ಇಂಥ ಹಠವೇನೋ ಇರಲಿಲ್ಲ. ಹಾಗೆಂದು ದೈವ ಭಕ್ತಿಯೇ ಇರಲಿಲ್ಲವೆಂದು ಅರ್ಥವಲ್ಲ. ಆದರೆ ಇದುವರೆಗಿನ ವಿದ್ಯಮಾನಗಳಿಂದ ನನಗೆ ದೇವಾಲಯಗಳಿಗೆ ಹೋಗಬೇಕೆಮಬ ಆಸಕ್ತಿಯೇ ಕಳೆದು ಹೋಗಿತ್ತು. ಜಾತ್ರೆ ಮೆರವಣಿಗೆ ಇತ್ಯಾದಿಗಳಲ್ಲಿ, ದಾರಿಯಲ್ಲಿ ಆಕಸ್ಮಿಕವಾಗಿ ಸಿಗುವ ದೇವಾಲಯಗಳಿಗೆ ದೂರವೇ ನಿಂತು ಕೈಮುಗಿಯುತ್ತಿದ್ದೆ. ಇದರಿಂದ ನನಗೆ ನಷ್ಟವೇನೂ ಆದಂತೆ ತೋರಲಿಲ್ಲ.

            ನನ್ನ ಶ್ರೀಮತಿ ಸಂಪ್ರದಾಯಸ್ಥ ಕುಟುಂಬದ ಹೆಣ್ಣು ಮಗಳಾದ್ದರಿಂದ ಅವಳು ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಆರಂಭಿಸಿದಳು. ದೇವರ ಮೂರ್ತಿಗಳು, ಭಾವಚಿತ್ರಗಳು ಅಲ್ಲಲ್ಲಿ ಸ್ಥಾನ ಪಡೆದಿದ್ದವು. ನಾವು ವಾಸಿಸುವ ಅಧ್ಯಾಪಕರ ವಸತಿಗೃಹದ ಅಂಗಳದಲ್ಲಿಯೇ ಚಿಕ್ಕದೊಂದು ತುಳಸಿ ಕಟ್ಟೆಯನ್ನು ನಿರ್ಮಿಸಿಕೊಂಡು ನಿತ್ಯಪೂಜೆಯನ್ನು ಆರಂಭಿಸಿದಳು. ಇವು ಯಾವುದಕ್ಕೂ ನಾನು ಅಡ್ಡಿಪಡಿಸುವ ಗೋಜಿಗೆ ಹೋಗಲಿಲ್ಲ. ಸಮಯ ಸಂದರ್ಭ ನೋಡಿ ಅವಳು ಪೂಜೆ ಮಾಡಿದ ದೇವರಿಗೆ ಕೈಮುಗಿದು, ತೀರ್ಥ ಪ್ರಸಾದ ಸ್ವೀಕರಿಸಿ ಕೃತಾರ್ಥನಾಗುತ್ತಲೂ ಇದ್ದೆ!

            ಆದರೆ ಇದು ಇಷ್ಟರಲ್ಲೇ ಬಗೆಹರಿಯುವ ಪ್ರಶ್ನೆಯಾಗಿರಲಿಲ್ಲ. ನನ್ನ ಶ್ರೀಮತಿ ಕೆಲವು ಹಬ್ಬ ಹುಣ್ಣಿಮೆಯ ಸಂದರ್ಭಗಳಲ್ಲಿ ಅಂಕೋಲೆಯ ಆಸುಪಾಸಿನಲ್ಲಿರುವ ದೇವಾಲಯಗಳಿಗೆ ಪ್ರತ್ಯಕ್ಷ ಭೇಟಿ ನೀಡುವ ಅಪೇಕ್ಷೆ ವ್ಯಕ್ತಪಡಿಸಿದಾಗ ನನಗೆ ಸಮಸ್ಯೆಯಾಯಿತು.

            ನಾನು ಅಧ್ಯಾಪಕನಾಗಿ ಸಾಕಷ್ಟು ಪರಿಚಿತನಾಗಿದ್ದೆನೆಂಬುದರೊಡನೆ ಎಲ್ಲ ದೇವಾಲಯಗಳ ಅರ್ಚಕರಿಗೂ ನಾನು ಯಾವ ಜಾತಿಗೆ ಸೇರಿದವನೆಂಬುದೂ ಗೊತ್ತಾಗಿದೆ. ಒಂದು ವೇಳೆ ನಾನು ದೇವಾಲಯದೊಳಗೆ ಬಂದಾಗ ಅರ್ಚಕರು ತಗಾದೆ ಮಾಡಿದರೆ ಮಾನ ಹೋದಿತೆಂಬ ಅಳುಕಿನಿಂದ ನಾನು ದೇವಾಲಯಗಳಿಂದ ದೂರವೇ ಇರಲು ಬಯಸುತ್ತಿದ್ದೆ.

            ಆದರೆ ನನ್ನ ಶ್ರೀಮತಿಯ ಒತ್ತಾಯಕ್ಕೆ ಮಣಿದು ನಾನು ಅವಳನ್ನು ದೇವಾಲಯಗಳಿಗೆ ಕರೆದೊಯ್ಯಲೇ ಬೇಕಾಯಿತು.

            ಆರಂಭದ ಕೆಲವು ವರ್ಷಗಳು ನಾನು ನನ್ನ ಶ್ರೀಮತಿಯನ್ನು ದೇವಾಲಯಕ್ಕೆ ಕರೆದೊಯ್ದೆನಾದರೂ ಅವಳೊಬ್ಬಳೇ ಪ್ರವೇಶ ಮಾಡುವುದಕ್ಕೆ ಅನುವು ನೀಡಿ ನಾನು ಹೊರಗೇ ನಿಂತು ಕಾಯುತ್ತಿದ್ದೆ. ಅವಳು ನನ್ನನ್ನು ಒತ್ತಾಯಿಸದಂತೆ ಸಂಗತಿಯನ್ನು ಮನವರಿಕೆ ಮಾಡಿಯೂ ಇದ್ದೆ.

            “ಸತಿಪತಿಗಳೊಂದಾದ ಭಕ್ತಿ ಹರನಿಗೆ ಹಿತವಪ್ಪುದಂತೆ” ಎಂಬ ಉಕ್ತಿಯು ನಮ್ಮ ದಾಂಪತ್ಯದ ದೀರ್ಘಕಾಲದವರೆಗೆ ನಮಗೆ ಅನ್ವಯಿಸಲೇ ಇಲ್ಲ. ಆದರೆ ಅನುಭವಿಸದೆ ನನಗೆ ಬೇರೆ ದಾರಿಯೂ ಇರಲಿಲ್ಲ.

ರಾಮಕೃಷ್ಣ ಗುಂದಿ

ಕನ್ನಡದಖ್ಯಾತಕತೆಗಾರ. ಅವಾರಿ, ಕಡಲಬೆಳಕಿನದಾರಿಗುಂಟ, ಅತಿಕ್ರಾಂತ, ಸೀತೆದಂಡೆಹೂವೇ …ಈನಾಲ್ಕುಅವರಕಥಾಸಂಕಲನಗಳು. ಅವರಸಮಗ್ರಕಥಾಸಂಕಲನಸಹಈಚೆಗೆಪ್ರಕಟವಾಗಿದೆ.‌ಯಕ್ಷಗಾನಕಲಾವಿದ.‌ ಕನ್ನಡಉಪನ್ಯಾಸಕರಾಗಿಅಂಕೋಲಾದಜೆ.ಸಿ.ಕಾಲೇಜಿನಲ್ಲಿಸೇವೆಪ್ರಾರಂಭಿಸಿ, ಕಾರವಾರದದಿವೇಕರಕಾಲೇಜಿನಲ್ಲಿಪ್ರಾಂಶುಪಾಲರಾಗಿಕರ್ತವ್ಯನಿರ್ವಹಿಸಿನಿವೃತ್ತರಾಗಿದ್ದಾರೆ. ಯಕ್ಷಗಾನಅಕಾಡೆಮಿಸದಸ್ಯರಾಗಿಸೇವೆಸಲ್ಲಿಸಿದ್ದಾರೆ. ಮಗಅಮೆರಿಕಾದಲ್ಲಿಸಾಫ್ಟ್‌ವೇರ್ಎಂಜಿನಿಯರ್. ಅಗೇರಸಮುದಾಯದಿಂದಬಂದಗುಂದಿಅವರುಅದೇಜನಾಂಗದಬಗ್ಗೆಪಿಎಚ್ಡಿಪ್ರಬಂಧಮಂಡಿಸಿ, ಡಾಕ್ಟರೇಟ್ಸಹಪಡೆದಿದ್ದಾರೆ‌ . ದಲಿತಜನಾಂಗದಕಷ್ಟನಷ್ಟನೋವು, ಅವಮಾನ, ನಂತರಶಿಕ್ಷಣದಿಂದಸಿಕ್ಕಬೆಳಕುಬದುಕುಅವರಆತ್ಮಕಥನದಲ್ಲಿದೆ. ಮರಾಠಿದಲಿತಸಾಹಿತಿಗಳ,‌ಲೇಖಕರಒಳನೋಟ , ಕನ್ನಡನೆಲದದಲಿತಧ್ವನಿಯಲ್ಲೂಸಹಇದೆ.‌ ರಾಮಕೃಷ್ಣಗುಂದಿಅವರಬದುಕನ್ನುಅವರಆತ್ಮಕಥನದಮೂಲಕವೇಕಾಣಬೇಕು. ಅಂತಹನೋವಿನಹಾಗೂಬದುಕಿನ‌ ಚಲನೆಯಆತ್ಮಕಥನವನ್ನುಸಂಗಾತಿ ..ಓದುಗರಎದುರು, ‌ಕನ್ನಡಿಗರಎದುರುಇಡುತ್

6 thoughts on “

  1. ಸರ್,
    ತಾವು ಸ್ವಾಭಿಮಾನಕ್ಕೆ ದಕ್ಕೆಯಾದರೂ ಒಂದು ಹಂತ ದಾಟಿ ಬಂದಿರುವ ನೀವು ಯಾವುದೇ ಸಾಮಾನ್ಯ ವಿಷಯವನ್ನು ಪ್ರಸೂತ್ತತ ಪಡಿಸುತ್ತಿರುವ ನೀವೆ ಗ್ರೇಟ್.

  2. ತಮ್ಮ ಆತ್ಮಕಥನ ಓದುತ್ತಿದ್ದಂತೆ ತಾವು ಅನುಭವಿಸಿದ ಮನದ ನೋವಿನ ಕಥನ ಎಳೆಎಳೆಯಾಗಿ ತೋಡಿಕೊಂಡಿದ್ದೀರಿ. ನಮಸ್ತೆ ಸರ್ ತುಂಬಾ ಇಷ್ಟಪಟ್ಟೆ

  3. ತಮ್ಮ ಮನದ ನೋವಿನ ಭಾವ ಎಳೆಯಾಗಿ ಹೊಮ್ಮಿದೆ ಸರ್. ” ಹೆರುವ ಬೇನೆ ಹೆತ್ತವಳಿಗೆ ಗೊತ್ತು”
    ಇವೆಲ್ಲ ಮೀರಿ ಸಮಾಜದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಗಳಿಸಿದ ಖ್ಯಾತಿ ಜಾತಿಯನ್ನು ಮೀರಿಸಿದೆ. ತಮ್ಮಂಥ ಗುರುಗಳನ್ನು ಪಡೆದ ನನ್ಥಂಥ ಎಷ್ಟೋ ವಿದ್ಯಾರ್ಥಿಗಳು ಧನ್ಯರು.

  4. ಇಷ್ಟು ಹತ್ತಿರವಿದ್ದರೂ ಇದು ನಾವು ಅರಿಯದ ವಿಷಯವಾಗಿತ್ತು. ಕೊಗ್ರೆ ಕಾರ್ಯಕ್ರಮದಲ್ಲಿ ನಮ್ಮೂರ ಬಂಧುಗಳಿಗೆ ದೇವಾಲಯ ಪ್ರವೇಶಿಸಿ ಎಂದು ಹೇಳಿದಾಗ ಬೇಕೆನಿಸುವಾಗ ಸಿಗದ ಅವಕಾಶ ಈಗಲೂ ಬೇಡ ಎಂದಿರಿ. ರಾಮಮೂರ್ತಿಯಂಥವರ ಹೃದಯದೊಳಗೆ ಜಾಗವಿದೆ ಅಷ್ಟೇ ಸಾಕು ಎಂದಿರಿ. ಸೊಗಸಾದ ಆತ್ಮಕಥನ ಸರ್.

  5. ಗುಣಕ್ಕೆ ಮತ್ಸರ ಉಂಟೆ ನಿಮ್ಮ ಮೇಲಿರುವ ಗೌರವ ಎಲ್ಲವು ನಮಗೆ ಅಗೋಚರ

  6. ಗುಣಕ್ಕೆ ಮತ್ಸರ ಉಂಟೆ ನಿಮ್ಮ ಮೇಲಿರುವ ಗೌರವ ಎಲ್ಲವು ನಮಗೆ ಅಗೋಚರ

Leave a Reply

Back To Top