ಗಜಲ್
ಪ್ರಭಾವತಿ ಎಸ್ ದೇಸಾಯಿ
ಹೃದಯ ಬಳ್ಳಿ ಚಿಗುರಿಸಲು ಒಲವ ಮಳೆಗಾಗಿ ಹಂಬಲಿಸುವೆ
ಕರಾಳ ಇರುಳು ಸರಿಸಿ ಬರುವ ಬೆಳಕಿಗಾಗಿ ಹಂಬಲಿಸುವೆ
ಎದೆಯ ಸಾಗರಕೆ ಪ್ರೀತಿಯ ಕಲ್ಲನೆಸೆದು ಏಕೆ ಕಲುಕಿದೆ
ಮೋಹದ ನದಿ ತಟದಲಿ ಜಲಕ್ರೀಡೆಗಾಗಿ ಹಂಬಲಿಸುವೆ
ಒಡೆದು ಹೋದವು ಯೌವನದ ಸುಂದರ ಸ್ವಪ್ನ ಗುಳ್ಳೆಗಳು
ಅವನ ಅನುರಾಗದ ಅಮೃತ ಹನಿಗಳಿಗಾಗಿ ಹಂಬಲಿಸುವೆ
ಬೇಸರದ ಬಾಳಿದು ಎಲೆಗಳು ಉದುರಿ ಬೋಳು ಮರವಾಗಿದೆ
ಒಂಟಿ ಬದುಕಿಗೆ ಸಂತೈಸುವ ಉಸಿರಿಗಾಗಿ ಹಂಬಲಿಸುವೆ
ಬಂದಿಯಾಗಿರುವೆ ಜಗದ ಮಾಯ ಮೋಹದ ಕೋಶದಲಿ ನಾ
ಕವಚ ಹರಿದು ನಭಕೆ ಹಾರಲು ರೆಕ್ಕೆ ಗಾಗಿ ಹಂಬಲಿಸುವೆ
ದಣಿದಿರುವೆ ಸಪ್ತರಾಗಗಳ ಬಹುತಂತಿಯ ವೀಣೆ ನುಡಿಸಿ
ಒಲಿದು ಒಂದಾಗಲು ಏಕತಾನ ದನಿಗಾಗಿ ಹಂಬಲಿಸುವೆ
ದಂಗಾಗಿ ನಿಂತಿರುವೆ ರಂಗೇರಿದಾ ಸಂತೆಯ ಬಯಲಲಿ
ಮನದ ತಾಮಸ ಕಳೆವ ದಿವ್ಯ”ಪ್ರಭೆ”ಗಾಗಿ ಹಂಬಲಿಸುವೆ
ಒಂಟಿ ಬದುಕಿಗೆ ಸಂತೈಸುವ ಉಸಿರು
ಸೊಗಸಾದ ಗಜಲ್ ಅಮ್ಮ..
ಒಲವಿಗಾಗಿ ಹಂಬಲಿಸುವ ಪ್ರೀತಿಯ ಪರಿಯನ್ನು ಬಹು ಚೆನ್ನಾಗಿ ಬಣ್ಣಿಸಿದ್ದಿರಿ ಅಮ್ಮ…
ವಂದನೆಗಳು