ಕಾವ್ಯಯಾನ
ನಿನ್ನ ನನ್ನ ನಡುವೆ
ಡಾ. ಸದಾಶಿವ ದೊಡಮನಿ
ನನ್ನ ನಿನ್ನ ನಡುವೆ
ತಕರಾರುಗಳೇನೆ ಇದ್ದರೂ
ಹೃದಯದೊಂದಿಗೆ ಇರಲಿ
ಕವಿತೆ ಬಾನಾಡಿಯ ಮೇಲೆ
ಕವಣೆಗಲ್ಲೆಸೆದು ಗಾಯಗೊಳಿಸದಿರು
ನೋಯುವುದು ಒಲವಿನೆದೆ
ಬದುಕ ತಾಕಲಾಗಳು
ಯಾರಿಗೂ ಬಿಟ್ಟಿಲ್ಲ
ಹುಟ್ಟು ಸಾಯುವವರೆಗೆ
ಇದ್ದದ್ದೇ ಹೈರಾಣ
ಹೆಣ ಭಾರವಾಗಿದ್ದರೂ
ಹೊರದೇ ವಿಧಿಯಿಲ್ಲ
ಬಲ್ಲವನೇ ಬಲ್ಲ
ಬದುಕ ತಿರುಳ
ಹರಳುಗಟ್ಟಿದ ಭಾವ
ನೋವ ಭಂಜಿಸುತ್ತಿರುವಾಗ
ಆತಂಕಗಳ ನಡುವೆ
ಇಡದಿರು ಹೆಜ್ಜೆ
ಅಂಕ ಮುಗಿದ ಮೇಲೆ
ಪರದೆ ಎಳೆಯುವವನೊಬ್ಬನ ಹೊರತು
ಅನನ್ಯರಾರೂ ಇರರು ಇಲ್ಲಿ!
ನೋವುಗಳೇ ಇದ್ದರೂ
ಎದೆಯೊಳಗೇ ಇರಲಿ ಬಿಡು
ಅರವಿಯ ಹಾವು
ಎಂದೂ ಹಾವಾಗದು
ನೋವುಗಳೆಂದೂ
ತಾಳ, ತಂತಿಯಾಗಿ
ಲಯ ತಪ್ಪಿಸವು
ಎದೆಯ ಮೇಲಿನ ಮಗು
ಹೃದಯದೊಳಗಿನ ಕವಿತೆ
ಬೆಚ್ಚಗಿನ ಭಾವದಣತೆ
ತಕರಾರುಗಳೇನೆ ಇದ್ದರೂ
ಎದೆಯಲ್ಲಿಯೇ ಸುಡು
ಕವಿಗೆ ದಾರಿ ಬಿಡು
ಕವಿತೆಗೆ ತುಸು ಹೃದಯ ಕೊಡು
ಕವಿತೆ ಚೆನ್ನಾಗಿದೆ ಸರ್….ತಕರಾರು ಗಳನ್ನ ಎದೆಯಲ್ಲಿ ಸುಡು….ಸಾಲು