ಸ್ವಾತ್ಮಗತ

ಡಾ.ಕಾಳೇಗೌಡ ನಾಗವಾರ

ಅಕ್ಷರಲೋಕದ ಮಹಾತಪಸ್ವಿ

Related image

ಕೆ.ಶಿವು ಲಕ್ಕಣ್ಣವರ

ಅಕ್ಷರಲೋಕದ ಮಹಾತಪಸ್ವಿ ಡಾ.ಕಾಳೇಗೌಡ ನಾಗವಾರರು..!

ಮೊನ್ನೆ ನನ್ನ ಪುಸ್ತಕದ ಸಂದೂಕದಲ್ಲಿ ಏನೋ ಒಂದು ಪುಸ್ತಕ ಹುಡುಕುತ್ತಿದ್ದೆ. ಆಗ ಅಕಸ್ಮಾತ್ತಾಗಿ ನನ್ನ ನೆಚ್ಚಿನ ಬರಹಗಾರ ಕಾಳೇಗೌಡ ನಾಗವಾರರ ‘ಬೆಟ್ಟಸಾಲು ಮಳೆ’ ಕತಾ ಸಂಕಲನ ಕೈಗೆಟುಕಿತು.
ಆ ಕತಾ ಸಂಕಲನವನ್ನು ಸಮಾಜವಾದಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎನ್. ಎನ್. ಕಲ್ಲಣ್ಣನವರ ಮಗ, ನನ್ನ ಆತ್ಮೀಯ ಗೆಳೆಯನಾದ ಚಿತ್ತರಂಜನ ಕಲ್ಲಣ್ಣನವರ (ಈ ಚಿತ್ತರಂಜನ ಕಲ್ಲಣ್ಣನವರ ಈಗಿಲ್ಲ) ಕೊಟ್ಟಿದ್ದನು.
ಅದನ್ನು ಹಾಗೇ ಜೋಪಾನವಾಗಿ ತೆಗೆದಿಟ್ಟುಕೊಂಡಿದ್ದೆನು. ಒಮ್ಮೆ ಓದಿದ್ದೆ. ಅದಕೋ ಮತ್ತೆ ನನ್ನ ಕೈಗೆಟುಕಿ ಮತ್ತೇ ಮತ್ತೆ ಓದಬೇಕಿನಿಸಿ ಇಂದು ರಾತ್ರಿ ಓದಲಾರಂಭಿಸಿದೆ. ಈ ಕತಾ ಸಂಕಲನದಲ್ಲಿ ನನಗೆ ತೀರಾ ಕಾಡಿದ ಕತೆ ಎಂದರೆ ‘ಬೆಟ್ಟಸಾಲು ಮಳೆ’ ಕತೆ. (‘ಬೆಟ್ಟಸಾಲು ಮಳೆ’ ಕತಾ ಸಂಕಲನದ ಬಗೆಗೆ ಒಮ್ಮೆ ಬರೆಯುತ್ತೇನೆ.) ಹಾಗೆಯೇ ಕಾಳೇಗೌಡ ನಾಗವಾರರೂ ನೆನಪಾದರು…

ಈ ಕಾಳೇಗೌಡ ನಾಗವಾರರ ಬಗೆಗೆ ಈಗ ಏಕೆ ‌ಬರೆಬಾರದು ಎನ್ನಿಸಿ ಹೀಗೆಯೇ ನಾಲ್ಕು ಸಾಲು ಗೀಚಿದೆ…

ಅವರು ಮೊನ್ನೆ ಹಾವೇರಿಗೆ ಬಂದಾಗ ಅವರು ಕೊಟ್ಟ ಕೃತಿ ‘ಮಂಗಳಕರ ಚಿಂತನೆ’ಯನ್ನು ಓದಿದೆ. ಆ ಕುರಿತು ನಂತರ ಬರೆಯುತ್ತೇನೆ. ಈಗಿವರ ಬಗೆಗೆ ನನಗೆ ಏಕೋ ಬರೆಯಬೇಕಿನಿಸಿತು, ಹೀಗೇ ಬರೆದೆ…

ಕಾಳೇಗೌಡ ನಾಗವಾರ ಇವರು ೧೯೪೮ರಲ್ಲಿ ಬೆಳಗಾವಿಯಲ್ಲಿ ಜನಿಸಿದರು. ಬೆಂಗಳೂರು ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದವರು…

ಅವರ ಇತರ ಕೃತಿಗಳು ಹೀಗಿವೆ–

೧) ಅಲೆಗಳು.
೨) ಕರಾವಳಿಯಲ್ಲಿ ಗಂಗಾಲಗ್ನ.
೩) ಬಯಲು ಸೀಮೆಯ ಲಾವಣಿಗಳು.
೪) ತ್ರಿಪದಿ ರಗಳೆ.
೫) ಬೀದಿ ಮಕ್ಕಳು ಬೆಳೆದೊ.
೬) ಬೆಟ್ಟಸಾಲು ಮಳೆ.
೭) ಬೇಕಾದ ಸಂಗಾತಿ.

ಹೀಗೆಯೇ ಹತ್ತು ಹಲವು ವೈಚಾರಿಕ ಬರಹಗಳ ಕೃತಿಗಳು…

೧೯೭೯ರಲ್ಲಿ ‘ಬೆಟ್ಟ ಸಾಲು ಮಳೆ’ ಕಥಾ ಸಂಕಲನಕ್ಕೆ ಹಾಗೂ ೧೯೮೫ರಲ್ಲಿ ‘ಅಲೆಗಳು’ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ…

ಡಾ.ಕಳೇಗೌಡ ನಾಗವಾರರು ಕನ್ನಡ ಸಾಂಸ್ಕೃತಿಕ ಲೋಕದ ಮಾನವೀಯ ಅಪಾರ ಕಾಳಜಿವುಳ್ಳ ಲೇಖಕ.‌ ಕಥೆಗಾರ, ಕವಿ ಹಾಗೂ ವಿಚಾರವಾದಿ.
ಕಾಳೇಗೌಡ ನಾಗವಾರರು ಪ್ರಗತಿಪರತೆಗೆ ಸದಾ ಮಿಡಿಯುವ ಅಲ್ಲದೇ ಸದಾ ತಮ್ಮ ಅರವನ್ನು ಎಚ್ಚರದಿಂದ ಕಾಯ್ದುಕೊಂಡು ಬರಹ ಮಾಡುವ ಮಹಾನ್‌ ಚಿಂತಕ…

ಡಾ.ಕಾಳೇಗೌಡ ನಾಗವಾರರು ಸಾಂಸ್ಕೃತಿಕ ಲೋಕದ ಮಾನವೀಯಕತೆಗಾರರು. ಅಪಾರ ಅಂತಃಕರಣ ಕವಿ, ‘ಮಂಗಳಕರ ಚಿಂತನೆ’ಗೆ ಹಾತೊರೆಯುವ ವಿಚಾರವಾದಿ…

ದೇಶಿಸಂಕೃತಿಗಳ ಬಗೆಗೆ ತುಂಬು ಹೆಂಗರುಳುಳ್ಳ ಅಕ್ಕರೆಯ ಜಾನಪದ ತಜ್ಞ. ಇದನ್ನು ನಾನಷ್ಟೇಯಲ್ಲ ಇವರನ್ನು ಬಲ್ಲವರೆಲ್ಲ ಹೇಳುವ ಮನೆಮಾತು. ಹಾಗೆಂದೇ ಸಮಾಜವಾದಿ ಚಿಂತಕ ಹಾಗೂ ಡಿ.ದೇವರಾಜ್ ಅರಸರ ಕಾಲದಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಕಡುಬಡವ ಎನ್. ಎನ್. ಕಲ್ಲಣ್ಣನವರ ಬಗೆಗಿನ ಒಂದು ‘ಅಭಿನಂದನ ಗ್ರಂಥ’ವಿರಲಿ ಎಂದು ನನ್ನ ಎನ್. ಎನ್. ಕಲ್ಲಣ್ಣನವರ ಮಗ ಚಿತ್ತರಂಜನ ಕಲ್ಲಣ್ಣನವರ ಕಾರ್ಯದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಬಿ.ಜಿ.ಬಣಕಾರ, ಕಲ್ಲೇಶಿವೋತ್ತಮರಾವ್ ಹಾಗೂ ಇತರೆ ಲೇಖಕರಿಂದ ಸತಪ್ರಯತ್ನ ಮಾಡಿಸಿ ಲೇಖನ ಬರೆಯಿಸಿ, ಕೊನೆಗೂ ಸಮಾಜವಾದಿ ಎನ್. ಎನ್. ಕಲ್ಲಣ್ಣನವರ ಬಗೆಗೆ ಒಂದು ಅಭಿನಂದನ ಗ್ರಂಥವನ್ನು ತಂದರು. ಹೀಗೆಯೇ ಬೆಸಗರಹಳ್ಳಿ ರಾಮಣ್ಣನವರ ಬಗೆಗೆ ಅಪಾರ ಕಕ್ಕುಲತೆವುಳ್ಳವರಾಗಿದ್ದರು…

ಹೀಗೆ ಹೆಂಗರುಳುಳ್ಳ ಡಾ.ಕಾಳೇಗೌಡ ನಾಗವಾರರು ಜಾನಪದ ತಜ್ಞರಾಗಿ ಪ್ರಖ್ಯಾತಿ ಪಡೆದವರು. ಕರ್ನಾಟಕದ ಉದ್ದಗಲಕ್ಕೂ ಅವಿರತವಾಗಿ ಅಲೆದಾಡುತ್ತ ಅಪಾರವಾದ ಲೋಕಾನುಭವ ಪಡೆದವರು. ತಮ್ಮೋಳಗಿನ ಜನಪರ ಆಲೋಚನೆಯ ಸೂಕ್ಷ್ಮ, ಸೃಜನಶೀಲ ಮನಸ್ಸನ್ನು ಎಚ್ಚರಿಕೆಯಿಂದ ಕಾಯ್ದುಕೊಂಡು ಬಂದಿರುವ ಪ್ರತಿಭಾವಂತ ಲೇಖಕಕರಿವರು…

ಅಪ್ಪಟ ಕನ್ನಡದ ಗ್ರಾಮೀಣ ಸತ್ವದಿಂದ ರೂಪಗೊಂಡವರು ಡಾ.ಕಾಳೇಗೌಡ ನಾಗವಾರರು. ಇಪ್ಪತ್ತನೇ ಶತಮಾನದಿಂದ ಎಪ್ಪತ್ತರ ದಶಕದಿಂದೀಚೆಗಿನ ಕನ್ನಡ ಸೃಜನಶೀಲ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿದ್ದಾರೆ ಡಾ.ಕಾಳೇಗೌಡ ನಾಗವಾರರು…

ಕ್ರಿಯಾಶೀಲ ಸಂಘಕರಾದ ಇವರು ಉದ್ದಕ್ಕೂ ‌ಕನ್ನಡದ ಪ್ರಗತಿಪರ ಚಳುವಳಿಗಳೊಂದಿಗೇ ಬೆಳೆದು ಬಂದವರು. ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಒಟ್ಟು ನಾಲ್ಕು ದಶಕಗಳ ಕಾಲ ದುಡಿದು ಈಗ ವಿಶ್ರಾಂತ ಕನ್ನಡ ಪ್ರಧ್ಯಾಪಕರಾಗಿರುವ ಇವರು ಎಲ್ಲಾ ಬರೆವಣಿಗೆಗಳು ಸಮಾಜವಾದಿ ಆಶಯಗಳ ನೆಲಗಟ್ಟಿನ ಮೇಲೆ ನಿಂತಿವೆ…

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನಾಗವಾರ ಗ್ರಾಮದವರಾದ ಇವರು ಕನ್ನಡ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಘಟ್ಟವಾದ ಬಂಡಾಯ ಸಾಹಿತ್ಯ ಚಳುವಳಿಯ ಸ್ಥಾಪಕ ಸಂಚಾಲಕರೊಬ್ಬರಾಗಿದ್ದಾರೆ…

ಭಾರತೀಯ ಭಾಷೆಗಳಲ್ಲೇ ಮೊದಲ ಬಾರಿಗೆ ಲೋಹಿಯಾ ಅವರ ಸಮಾಜವಾದಿ ವಿಚಾರಗಳನ್ನು ಸಮಗ್ರವಾಗಿ ಕನ್ನಡಕ್ಕೆ ತರುವ ಮಹತ್ವದ ಯೋಜನೆಯ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಕಾಳೇಗೌಡ ನಾಗವಾರರು ಅತಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ…

ಜನಸಮುದಾಯದ ಅನುಭವ ಲೋಕದ ಸಕಲ ಸೂಕ್ಷ್ಮಗಳನ್ನೂ ತೆರದ ಮನಸ್ಸಿನಿಂದ ಗ್ರಹಿಸುವ ಹಂಬಲವುಳ್ಳ ಆಶಾವಾದಿ ಲೇಖಕರಾಗಿರುವ ಡಾ.ಕಾಳೇಗೌಡ ನಾಗವಾರರು ವೈಶಿಷ್ಟ್ಯಪೂರ್ಣ ಚೇತನವಾಗಿದ್ದಾರೆ…

ಸ್ವಾತಂತ್ರ್ಯ, ಸಮಾನತೆ ಮತ್ತು ಜನತಂತ್ರ ನಿಲುವುಗಳ ನಿತ್ಯಧ್ಯಾನದ ಚಿಂತಕರಾಗಿರುವ ಇವರು ತಮ್ಮ ವೈಚಾರಿಕ ಬರಹಗಳು, ವಿಮರ್ಶೆ ಮತ್ತು ಜಾನಪದ ಅಧ್ಯಯನಕ್ಕೆ ಸೃಜನಶೀಲತೆಯ ಪ್ರಾಣಶಕ್ತಿಯನ್ನು ತುಂಬಿರುವವರಾಗಿದ್ದಾರೆ. ವಿವಿಧ ಬಗೆಯ ಜಾನಪದ ಅಭಿವ್ಯಕ್ತಿಗಳು ಮತ್ತು ದೇಶೀ ಸಂಕೇತಗಳ ಸೂಕ್ಷ್ಮ ಹರಿಕಾರರಾಗಿರುವ ಡಾ.ಕಾಳೇಗೌಡ ನಾಗವಾರರು ಕಲಾವಿದರ ಬಗೆಗೆ ಸದಾ ಕಟ್ಟಕ್ಕರೆಯಿಂದಿರುವ ಇವರು ಕರ್ನಾಟಕ ಜಾನಪದ ಕಲಾವಿದರ ಬಗೆಗೆ ಅಪಾರ ಸಕ್ಕರೆಯನ್ನೂವುಳ್ಳವರಾಗಿದ್ದಾರೆ…

ಕಾಳೇಗೌಡ ನಾಗವಾರರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಕ್ರಿಯಾಶೀಲ ಅಧ್ಯಕ್ಷರಾಗಿದ್ದು ೧೯೯೮ ರಿಂದ ೨೦೦೧ ರ ಅವಧಿಯಲ್ಲಿ ಅಪಾರವಾಗಿ ದುಡಿದವರಾಗಿದ್ದಾರೆ. ಅಕ್ಕರೆ, ಸಂತನ ಧ್ಯಾನ, ಜೀವಪ್ರೇಮದ ಅಚ್ಚರಿ, ಇಂಥ ಪ್ರೀತಿಯ ನಾವೆ-ಇವು ಡಾ.ಕಾಳೇಗೌಡ ನಾಗವಾರರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕುರಿತ ಗ್ರಂಥಗಳಾಗಿವೆ.

ಹೀಗೆಯೇ ಡಾ.ಕಾಳೇಗೌಡ ನಾಗವಾರರು ಅಕ್ಷರಲೋಕದ ಮಹಾತಪಸ್ವಿಯೂ ಹೌದು ಎಂದರೆ ಅತಿಶಯೋಕ್ತಿಯಲ್ಲವೆಂದುಕೊಂಡಿದ್ದೇನೆ..!
===========================

Leave a Reply

Back To Top